ಪಿಡಿಪಿ ಅಧ್ಯಕ್ಷೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರನ್ನು ವಿಚಾರಣೆಗಾಗಿ ಈಗಲೇ ಹಾಜರಾಗುವಂತೆ ಸೂಚಿಸುವುದಿಲ್ಲ ಎಂದು ಜಾರಿ ನಿರ್ದೇಶನಾಲಯ (ಇ ಡಿ) ದೆಹಲಿ ಹೈಕೋರ್ಟ್‌ಗೆ ಬುಧವಾರ ತಿಳಿಸಿದೆ. ಇ ಡಿ ನೀಡಿದ್ದ ಸಮನ್ಸ್ ರದ್ದುಪಡಿಸಲು ನಿರ್ದೇಶಿಸಬೇಕೆಂದು ಕೋರಿ ಕೆಲ ದಿನಗಳ ಹಿಂದೆ ಮುಫ್ತಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ಬುಧವಾರ ನಡೆಯಿತು.
ಮಾರ್ಚ್ 15 ರಂದು ಮುಫ್ತಿ ಅವರು ವಿಚಾರಣೆಗೆ ಹಾಜರಾಗುವಂತೆ ಈ ಹಿಂದೆ ಜಾರಿ ನಿರ್ದೇಶನಾಲಯ ಸೂಚಿಸಿತ್ತು. ಆದರೆ ಮಾರ್ಚ್ 19 ರಂದು ನಡೆಯುವ ನ್ಯಾಯಾಲಯದ ವಿಚಾರಣೆಯವರೆಗೆ ಮುಫ್ತಿ ಅವರ ವಿಚಾರಣೆ ನಡೆಸುವುದಿಲ್ಲ ಎಂದು ಅದು ಹೇಳಿದೆ. ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಮತ್ತು ಅನೂಪ್ ಭಂಬಾನಿ ಅವರಿದ್ದ ವಿಭಾಗೀಯ ಪೀಠದ ಮುಂದೆ ಇ ಡಿ ಪರ ವಕೀಲ ಅಮಿತ್ ಮಹಾಜನ್ ಅವರು ಈ ಹೇಳಿಕೆ ನೀಡಿದ್ದಾರೆ.
ಅರ್ಜಿಯಲ್ಲಿ 2002ರ ಹಣ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 50ರ ಸಾಂವಿಧಾನಿಕ ಸಿಂಧುತ್ವವನ್ನು ಕೂಡ ಮುಫ್ತಿ ಪ್ರಶ್ನಿಸಿದ್ದಾರೆ. ಅವರ ಪ್ರಕಾರ ಕಾಯಿದೆಯ ಸೆಕ್ಷನ್ 50 ಸಂವಿಧಾನದ 14 ಮತ್ತು 21 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ.
ಈ ವಿಷಯವನ್ನು ಮೂಲತಃ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ನೇತೃತ್ವದ ವಿಭಾಗೀಯ ಪೀಠದೆದುರು ವಿಚಾರಣೆಗೆ ನಿಗದಿಪಡಿಸಲಾಗಿತ್ತು. ನ್ಯಾಯಪೀಠದ ಅಲಭ್ಯತೆಯಿಂದಾಗಿ, ತುರ್ತು ವಿಚಾರಣೆಗಾಗಿ ಅರ್ಜಿಯನ್ನು ನ್ಯಾ ಮೃದುಲ್ ಅವರಿದ್ದ ಪೀಠಕ್ಕೆ ವರ್ಗಾಯಿಸಲಾಗಿತ್ತು. ಮುಫ್ತಿ ಅವರ ಪರವಾಗಿ ನಿತ್ಯಾ ರಾಮಕೃಷ್ಣನ್ ಮತ್ತು ಎಸ್ ಪ್ರಸನ್ನ ವಾದ ಮಂಡಿಸಿದರು.