ತನ್ನ ಎರಡು ಉತ್ಪನ್ನಗಳಾದ ಡಾಬರ್ ಮೆಸ್‌ವಾಕ್ ಮತ್ತು ಡಾಬರ್ ಹರ್ಬ್1 ಆಂಟಿ-ಬ್ಯಾಕ್ಟೀರಿಯಲ್ ತುಳಸಿ ಟೂತ್‌ಪೇಸ್ಟ್‌ಗಳ ಲೇಬಲ್‌ನಲ್ಲಿ 'ನೋವು ನಿವಾರಕ' ಮತ್ತು 'ಬ್ಯಾಕ್ಟೀರಿಯ ನಿವಾರಕ' ಎಂದು ಮುದ್ರಿಸಿರುವುದನ್ನು ಜೂನ್ 2025ರಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳುವುದಾಗಿ ಡಾಬರ್ ಇಂಡಿಯಾ ಲಿಮಿಟೆಡ್ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ [ಡಾಬರ್ ಇಂಡಿಯಾ ಲಿಮಿಟೆಡ್ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಈ ಹೇಳಿಕೆಗಳ ಕಾನೂನುಬದ್ಧತೆಯ ಬಗ್ಗೆ ಮಹಾರಾಷ್ಟ್ರ ಸರ್ಕಾರದ ಆಹಾರ ಮತ್ತು ಔಷಧ ಇಲಾಖೆ ಕಳವಳ ವ್ಯಕ್ತಪಡಿಸಿತ್ತು. ಹೇಳಿಕೆ ಹಿಂಪಡೆಯುವಂತೆ ಡಾಬರ್‌ಗೆ ಅದು ಆದೇಶಿಸಿತ್ತು. ಉತ್ಪನ್ನಗಳು ಆರೋಗ್ಯಕ್ಕೆ ಅಪಾಯಕಾರಿಯಲ್ಲ ಎನ್ನುವುದನ್ನು ಒಪ್ಪಬಹುದಾದರೂ, ಲೇಬಲ್‌ಗಳ ಮೇಲಿನ ಹೇಳಿಕೆಗಳು ಕಾನೂನಾತ್ಮಕವಾಗಿ ತಪ್ಪಾಗಿವೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಡಾಬರ್ ಹೈಕೋರ್ಟ್ ಮೊರೆ ಹೋಗಿತ್ತು.
ವಿಚಾರಣೆ ವೇಳೆ ಡಾಬರ್ ಉತ್ಪನ್ನದ ಮೇಲೆ ಬರೆದಿರುವ ನಿರ್ದಿಷ್ಟ ಪದಗಳನ್ನು ಹಿಂಪಡೆಯುವುದಾಗಿ ತಿಳಿಸಿತು. ಡಾಬರ್ ವಿವರಣೆಯನ್ನು ಮಾರ್ಚ್ 26ರಂದು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಜಿ.ಎಸ್. ಕುಲಕರ್ಣಿ ಮತ್ತು ಅದ್ವೈತ್ ಎಂ. ಸೇತ್ನಾ ಅವರಿದ್ದ ಪೀಠ ಡಾಬರ್ ಸಲ್ಲಿಸಿದ್ದ ಅರ್ಜಿ ವಿಲೇವಾರಿ ಮಾಡಿತು.
ಡಾಬರ್ ಪರ ಹಾಜರಾದ ಹಿರಿಯ ವಕೀಲ ರವಿ ಕದಮ್ , ತಕರಾರು ಇರುವ ಹೇಳಿಕೆ ಬಳಸುವುದನ್ನು ಸ್ವಯಂಪ್ರೇರಣೆಯಿಂದ ನಿಲ್ಲಿಸುವುದಾಗಿ ಮತ್ತು ಲೇಬಲ್ ಹಾಗೂ ಪ್ಯಾಕೇಜಿಂಗ್ ಅನ್ನು ಪರಿಷ್ಕರಿಸುವ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಿರುವುದಾಗಿ ತಿಳಿಸಿದರು.
ವಿನ್ಯಾಸ, ಮುದ್ರಣ ಮತ್ತು ವಿತರಣೆ ಹಿನ್ನೆಲೆಯಲ್ಲಿ ಜೂನ್ 2025 ರ ವೇಳೆಗೆ ಹೊಸ ಲೇಬಲ್‌ಗಳು ಚಲಾವಣೆಗೆ ಬರಲಿವೆ ಎಂದು ಡಾಬರ್ ದೃಢಪಡಿಸಿತು.
ಇದಕ್ಕೆ ಸಮ್ಮತಿಸಿದ ನ್ಯಾಯಾಲಯ ವಿವಾದಿತ ಉತ್ಪನ್ನಗಳನ್ನು ಮೇ 31ರವರೆಗೆ ಮಾರಾಟ ಮಾಡಬಹುದು ಆದರೆ ಜೂನ್ 1ರ ನಂತರ ಅವು ಮಾರಾಟವಾಗುವಂತಿಲ್ಲ ಎಂದು ಅದು ತೀರ್ಪು ನೀಡಿತು.