ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದಲ್ಲಿಆರೋಪಿ ಪ್ರೊಬೇಷನರಿ ಎಸ್‌ಐ ಬದಲಿಗೆ ಅವರ ತಮ್ಮನನ್ನು ಬಂಧಿಸಿದ ಪೊಲೀಸರ ಕ್ರಮವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಹೈಕೋರ್ಟ್, ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡುವಿರಾ ಎಂದು ಪ್ರಶ್ನಿಸಿ, ಕಾನೂನು ಉಲ್ಲಂಘಿಸುವ ಪೊಲೀಸರನ್ನು ಅಮಾನತುಪಡಿಸಲಾಗುವುದು ಎಂದು ಕಟು ಎಚ್ಚರಿಕೆ ನೀಡಿದೆ.
ದಾವಣಗೆರೆಯ ಎನ್ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿತು.
“ಪ್ರಕರಣದಲ್ಲಿ ಸಹೋದರನ ತಪ್ಪಿಲ್ಲದಿದ್ದರೂ ಬಂಧಿಸಿದ್ದೇಕೆ? ವಿನಾಕಾರಣ ಬಂಧಿಸುವುದು ಪೊಲೀಸರಿಗೆ ಆಟವಾಗಿದೆ. ಬಂಧಿತನ ಜೀವನದ ಮೇಲಾಗುವ ಪರಿಣಾಮದ ಅರಿವು ಪೊಲೀಸರಿಗಿದೆಯೇ? ಬಂಧನ ಅವಶ್ಯವಿರುವ ಪ್ರಕರಣದಲ್ಲಿಆರೋಪಿಗಳನ್ನು ಪೊಲೀಸರು ಬಂಧಿಸುವುದಿಲ್ಲ, ಬೇಡವಾದ ಪ್ರಕರಣಗಳಲ್ಲಿ ಬಂಧಿಸಿ ಅನಗತ್ಯ ಕಿರುಕುಳ ನೀಡುತ್ತಾರೆ, ಅದೇ ಅವರಿಗೆ ಚಾಳಿಯಾಗಿದೆ” ಎಂದು ಕಿಡಿಕಾರಿತು.
“ಯೂನಿಫಾರಂ ಇದೆ ಎಂದು ಏನು ಬೇಕಾದರೂ ಮಾಡುತ್ತೀರಾ?” ಎಂದು ಖಾರವಾಗಿ ಪ್ರಶ್ನಿಸಿದ ಪೀಠವು “ಬಂಧಿಸಿದ ಅಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗುವುದು. ಮ್ಯಾಜಿಸ್ಪ್ರೇಟ್ ಕೂಡಾ ಇಂತಹ ಬಂಧನಕ್ಕೆ ಅವಕಾಶ ನೀಡಬಾರದು. ಕಾನೂನು ಉಲ್ಲಂಘಿಸಿ ಈ ರೀತಿ ಬಂಧನಗಳನ್ನು ಮಾಡುವ ಪೊಲೀಸರನ್ನು ಅಮಾನತುಪಡಿಸಲಾಗುವುದು” ಎಚ್ಚರಿಕೆ ನೀಡಿತು.
ಅಷ್ಟೇ ಅಲ್ಲದೆ, ಅನಗತ್ಯವಾಗಿ ಪ್ರೊಬೇಷನರಿ ಎಸ್‌ಐ ಸಹೋದರನನ್ನು ಬಂಧಿಸಿದ್ದ ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿರುದ್ಧ ಇಲಾಖಾ ತನಿಖೆ ನಡೆಸಬೇಕು ಎಂದು ಆದೇಶಿಸಿ ವಿಚಾರಣೆಯನ್ನು ಮುಂದೂಡಿತು.
ಪ್ರೊಬೇಷನರಿ ಎಸ್‌ಐ ವರುಣ್‌ಕುಮಾರ್ ಇನ್‌ಸ್ಟಾಗ್ರಾಂನಲ್ಲಿ ವಿವಾಹಿತ ಮಹಿಳೆಯೊಂದಿಗೆ ಸ್ನೇಹ ಬೆಳೆಸಿದ್ದರು. ನಂತರ ಮಹಿಳೆ ಹಾಗೂ ಎಸ್‌ಐ ಇಬ್ಬರೂ ದೈಹಿಕ ಸಂಪರ್ಕ ಬೆಳೆಸಿದ್ದರು. ಬಳಿಕ ಮಹಿಳೆಗೆ ವಿವಾಹವಾಗಿರುವುದು ತಿಳಿದು ಎಸ್‌ಐ ಸಂಬಂಧ ಕಡಿತಗೊಳಿಸಿಕೊಂಡಿದ್ದರು. ಆನಂತರ ಪ್ರೊಬೇಷನರಿ ಎಸ್‌ಐ ವಿರುದ್ಧ ಮಹಿಳೆ ದೂರು ನೀಡಿದ್ದರು. ಆರೋಪಿ ಕುಟುಂಬಸ್ಥರ ವಿರುದ್ಧವೂ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಜತೆಗೆ, ಆರೋಪಿ ಸಹೋದರನನ್ನೂ ಚಿತ್ರದುರ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದರು. ಬಂಧನ ಪ್ರಶ್ನಿಸಿ ಆರೋಪಿ ಹಾಗೂ ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿದ್ದರು. ಕಳೆದ ವಾರ ನ್ಯಾಯಾಲಯ ಪೊಲೀಸರ ಕ್ರಮವನ್ನು ತರಾಟೆಗೆ ತೆಗೆದುಕೊಂಡ ಕೂಡಲೇ ಆತನನ್ನು ಬಿಡುಗಡೆ ಮಾಡಲಾಗಿತ್ತು.