High Court of Karnataka 
ಸುದ್ದಿಗಳು

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಂ ನಾಮನಿರ್ದೇಶನ ಹಿಂತೆಗೆತ; ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್‌

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಬ್ದುಲ್ ಅಜೀಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.

Bar & Bench

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನದಿಂದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಜೀಂ ಅವರ ನಾಮನಿರ್ದೇಶನ ಹಿಂಪಡೆದಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ಎತ್ತಿ ಹಿಡಿದಿದೆ.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಅಬ್ದುಲ್ ಅಜೀಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.

ಆಯೋಗಗಳಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡುವುದು ಮತ್ತು ಹಿಂಪಡೆಯುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿರುತ್ತದೆ. ಈ ಪ್ರಕ್ರಿಯೆಯಲ್ಲಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ನಾಮನಿರ್ದೇಶನ ಹಿಂಪಡೆಯಲಾಗಿದೆ ಎಂಬ ಅರ್ಜಿದಾರರ ವಾದವನ್ನು ಒಪ್ಪಲು ಆಗದು. ಅಂತೆಯೇ, ಇಂತಹ ವಿಷಯಗಳಲ್ಲಿನ ಸರ್ಕಾರದ ಕ್ರಮವನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.

ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ ಶೆಟ್ಟಿ ಹಾಗೂ ಹೆಚ್ಚುವರಿ ಅಡ್ವೊಕೇಟ್‌ ಜನರಲ್ ಇಸ್ಮಾಯಿಲ್‌ ಜಬೀವುಲ್ಲಾ ವಾದ ಮಂಡಿಸಿದ್ದರು.

ಪ್ರಕರಣದ ಹಿನ್ನೆಲೆ: ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ ಅವರನ್ನು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ಸ್ಥಾನಕ್ಕೆ 2019ರಿಂದ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಗಿತ್ತು. ಈ ಅಧಿಕಾರವಧಿ 2022ಕ್ಕೆ ಪೂರ್ಣಗೊಂಡಿತ್ತು. ನಂತರ ಎರಡನೇ ಅವಧಿಗೂ ನೇಮಕ ಮಾಡಿ ಮುಂದುವರೆಸಲಾಗಿತ್ತು. ಈ ಅವಧಿ 2025ರವರೆಗೂ ಜಾರಿಯಲ್ಲಿತ್ತು.

ರಾಜ್ಯ ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಹಿಂದಿನ ಸರ್ಕಾರದ ಅವಧಿಯ ಎಲ್ಲ ನಾಮನಿರ್ದೇಶನಗಳನ್ನು ಅನೂರ್ಜಿತಗೊಳಿಸಲಾಗಿತ್ತು. ಹೀಗಾಗಿ, ಅಬ್ದುಲ್ ಅಜೀಂ ಅವರ ಆಯೋಗದ ಅಧ್ಯಕ್ಷ ಸ್ಥಾನದ ನೇಮಕವನ್ನೂ ರದ್ದುಗೊಳಿಸಲಾಗಿತ್ತು. ಆದರೆ, ಅಜೀಂ ಅವರ ಮನವಿಯಂತೆ ನಾಮನಿರ್ದೇಶನ ರದ್ದುಪಡಿಸಿದ್ದ ಅಧಿಸೂಚನೆಯನ್ನು ಸರ್ಕಾರ ಹಿಂಪಡೆದಿತ್ತು. ಪುನಾ ಅಜೀಂ ಅವರು, ಇನ್ನೂ 2 ವರ್ಷ 5 ತಿಂಗಳ ಕಾಲ ಅಧಿಕಾರವಧಿ ಮುಂದುವರೆಸಬೇಕು ಎಂದು ಮನವಿ ಸಲ್ಲಿಸಿದ್ದರು.

ಆದರೆ, ಸರ್ಕಾರ ಈ ಮನವಿಯನ್ನು ಪರಿಗಣಿಸಿರಲಿಲ್ಲ. ಇದನ್ನು ಪ್ರಶ್ನಿಸಿ ಅಬ್ದುಲ್ ಅಜೀಂ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ಅವರನ್ನು ಆಯೋಗದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು.