ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರವು ಹಾಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ದದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅನುಮತಿಸಿದ್ದ ಆದೇಶವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಹಿಂಪಡೆದಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಮೇ 31ರಂದು ತೀರ್ಪು ಕಾಯ್ದಿರಿಸಿದೆ.
ಬಿಜೆಪಿ ನೇತೃತ್ವದ ಹಿಂದಿನ ರಾಜ್ಯ ಸರ್ಕಾರವು ಹಾಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ದದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಅನುಮತಿಸಿದ್ದ ಆದೇಶವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಹಿಂಪಡೆದಿರುವುದನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಮೇ 31ರಂದು ತೀರ್ಪು ಕಾಯ್ದಿರಿಸಿದೆ.
ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಿದ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಉಮೇಶ್ ಎಂ. ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ವಿಸ್ತೃತವಾಗಿ ವಾದ ಆಲಿಸಿ ತೀರ್ಪು ಕಾಯ್ದಿರಿಸಿದೆ.
ಸಿಬಿಐ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನ ಕುಮಾರ್ “ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ಹಿಂಪಡೆದಿರುವ ಆಕ್ಷೇಪಾರ್ಹವಾದ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಬಹುದೇ? ವಾಸ್ತವದಲ್ಲಿ ಸರ್ಕಾರ ಈ ಆದೇಶ ಮಾಡಲಾಗದು. ಒಂದೊಮ್ಮೆ ರಾಜ್ಯ ಸರ್ಕಾರಕ್ಕೆ ಆ ಅಧಿಕಾರ ಇದೆ ಎಂದು ಘೋಷಿಸಿದರೆ ಈಗಾಗಲೇ ದಾಖಲಿಸಲಾಗಿರುವ ಎಫ್‌ಐಆರ್‌ಗೆ ಅಡ್ಡಿಯಾಗುವುದೇ? ಖಾಜಿ ದೋರ್ಜಿ, ಚಂದ್ರಶೇಖರ್ ಪ್ರಕರಣ, ಕಾಮನ್ ಕಾಸ್ ಪ್ರಕರಣದಲ್ಲಿ ಸಿಬಿಐಗೆ ನೀಡಿರುವ ಅನುಮತಿ ಹಿಂಪಡೆದಿದ್ದರೂ ಸಿಬಿಐ ತನಿಖೆಗೆ ಅಡ್ಡಿಯಾಗಿರಲಿಲ್ಲ” ಎಂದು ವಿವರಿಸಿದ್ದರು.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ವಾದಿಸಿದ್ದ ವಕೀಲ ದಳವಾಯಿ ವೆಂಕಟೇಶ್ ಅವರು “ಉಪಮುಖ್ಯಮಂತ್ರಿ ವಿರುದ್ಧದ ಪ್ರಕರಣವನ್ನು ದಾರಿ ತಪ್ಪಿಸುತ್ತಿರುವುದು ಸಾರ್ವಜನಿಕರ ದೃಷ್ಟಿಯಿಂದ ಆಘಾತಕಾರಿ ಬೆಳವಣಿಗೆ. ನಾವು ಅರ್ಜಿ ಸಲ್ಲಿಸಿದ ಬಳಿಕ ರಾಜ್ಯ ಸರ್ಕಾರವು ಪ್ರಕರಣವನ್ನು ಲೋಕಾಯುಕ್ತ ವಿಚಾರಣೆಗೆ ವಹಿಸಿದೆ” ಎಂದಿದ್ದರು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿಬಲ್ ಅವರು “ಡಿ ಕೆ ಶಿವಕುಮಾರ್ ವಿರುದ್ಧದ ಆದಾಯ ತೆರಿಗೆ ಪ್ರಕರಣಗಳನ್ನು ವಜಾ ಮಾಡಲಾಗಿದೆ. ಸಿಬಿಐಗೆ ಪ್ರಕರಣ ಒಪ್ಪಿಸುವಾಗ ಒಕ್ಕೂಟ ವ್ಯವಸ್ಥೆಯ ಮಾನದಂಡಗಳನ್ನು ಪಾಲಿಸಲಾಗಿಲ್ಲ. ಹೀಗಿರುವಾಗ ಪ್ರಕರಣದಲ್ಲಿ ಇನ್ನೇನು ಉಳಿದಿದೆ? ಹೀಗಾಗಿ, ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿಸಿರುವುದು ಕಾನೂನುಬಾಹಿರ. ಅದನ್ನು ಹಿಂಪಡೆಯುವ ಅಗತ್ಯವೇ ಇಲ್ಲ. ಕಾನೂನುಬಾಹಿರವಾದ ಆದೇಶವನ್ನು ಹಿಂಪಡೆಯಲಾಗದು. 2019ರ ಸೆಪ್ಟೆಂಬರ್ 25ರಂದು ರಾಜ್ಯದಲ್ಲಿ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ಸಿಬಿಐ ತನಿಖೆ ನೀಡಿರುವುದು ಅಕ್ರಮ” ಎಂದು ವಾದಿಸಿದ್ದರು.
ಡಿ ಕೆ ಶಿವಕುಮಾರ್ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು “ವಿಜಯ್ ಮದನ್‌ಲಾಲ್ ಪ್ರಕರಣದಲ್ಲಿನ ಪ್ರಕ್ರಿಯೆ ಪಾಲಿಸಲಾಗಿಲ್ಲ. ಕಾನೂನುಬಾಹಿರವಾದ ಅನುಮತಿ ಆದೇಶದ ಮೂಲಕ ಸಿಬಿಐಗೆ ರಾಜ್ಯ ಪ್ರವೇಶಿಸಲು ಅನುಮತಿಸುವುದು ಒಕ್ಕೂಟ ವ್ಯವಸ್ಥೆಯ ಉಲ್ಲಂಘನೆಯಾಗಲಿದೆ. ಒಕ್ಕೂಟ ವ್ಯವಸ್ಥೆಯು ಸಂವಿಧಾನ ಮೂಲರಚನೆಯ ಸಿದ್ದಾಂತದಲ್ಲಿ ಅಡಕವಾಗಿದೆ. ಕೇಂದ್ರಾಡಳಿತ ಪ್ರದೇಶವನ್ನು ಮೀರಿ ಸಿಬಿಐ ಹೋಗಲಾಗದು. ರಾಜ್ಯ ಪ್ರವೇಶಿಸಲು ಸಿಬಿಐಗೆ ಕೇಂದ್ರ ಸರ್ಕಾರದ ಆಂತರಿಕ ಅನುಮತಿ ಅಗತ್ಯ” ಎಂದಿದ್ದರು.
“ಸಿಬಿಐ ಮೇಲ್ಮನವಿ ಸಲ್ಲಿಸುವ ಹಕ್ಕು ಹೊಂದಿಲ್ಲ. ಸಿಬಿಐ ಇಲ್ಲಿ ಬಾಧಿತವಲ್ಲ. ಸಿಬಿಐಗೆ ಪ್ರಾಸಿಕ್ಯೂಟ್ ಮಾಡುವ ಹಕ್ಕು ಅಡಕಗೊಳಿಸಲಾಗಿಲ್ಲ. ಇದನ್ನು ಸಿಬಿಐ ಹೇಗೆ ಪ್ರಶ್ನಿಸುತ್ತದೆ? ಒಂದೊಮ್ಮೆ ಕೇಂದ್ರ ಸರ್ಕಾರವು ತಾವು ಸಿಬಿಐ ತನಿಖೆ ಮಾಡಲು ಆದೇಶಿಸಿದ್ದೇವೆ ಎಂದು ಹೇಳಿದರೆ ಭಾರತ ಸರ್ಕಾರದ ನಿರ್ಧಾರ ಸರಿಯೋ ಅಥವಾ ತಪ್ಪೋ ಎಂದು ಪೀಠ ನಿರ್ಧರಿಸಬೇಕು. ಆಗ ರಾಜ್ಯ ಸರ್ಕಾರ ಇಲ್ಲ ಎನ್ನಬಹುದು. ಯಾವ ವಿಧಾನ ಅನುಸರಿಸಬೇಕು ಎಂಬುದು ಕೇಂದ್ರದ ಆಯ್ಕೆಯಾಗಿರುತ್ತದೆ” ಎಂದು ವಾದಿಸಿದ್ದರು.
ಪ್ರಕರಣದ ಹಿನ್ನೆಲೆ: 2017ರ ಆಗಸ್ಟ್ 2ರಂದು ಗುಜರಾತ್ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಲ್ಲಿನ ಕಾಂಗ್ರೆಸ್ ಶಾಸಕರಿಗೆ ಡಿ ಕೆ ಶಿವಕುಮಾರ್ ಬಿಡದಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿ ಆಶ್ರಯ ಒದಗಿಸಿದ್ದರು. ಈ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಿವಕುಮಾರ್ ಅವರ ದೆಹಲಿ ನಿವಾಸ ಸೇರಿದಂತೆ ಹಲವು ಕಡೆ ಏಕಕಾಲಕ್ಕೆ ದಾಳಿ ನಡೆಸಿದ್ದರು. ಇಲ್ಲಿ ಒಟ್ಟಾರೆ 8,59,69,100 ರೂಪಾಯಿ ಪತ್ತೆಯಾಗಿದ್ದು, ಶಿವಕುಮಾರ್ ಅವರಿಗೆ ಸೇರಿದ ಸ್ಥಳದಲ್ಲಿ 41 ಲಕ್ಷ ರೂಪಾಯಿ ಪತ್ತೆಯಾಗಿತ್ತು. ಇದರ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆದಾಯ ತೆರಿಗೆ ಕಾಯಿದೆ 1961ರ ವಿವಿಧ ಸೆಕ್ಷನ್‌ಗಳ ಅಡಿ ಶಿವಕುಮಾರ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಇದರ ಬೆನ್ನಿಗೇ ಜಾರಿ ನಿರ್ದೇಶನಾಲಯವು ದಾಳಿ ನಡೆಸಿ, ಪ್ರಕರಣ ದಾಖಲಿಸಿ 2019ರ ಸೆಪ್ಟೆಂಬರ್ 3ರಂದು ಶಿವಕುಮಾರ್ ಅವರನ್ನು ಬಂಧಿಸಿತ್ತು. ಆನಂತರ 2019ರ ಸೆಪ್ಟೆಂಬರ್ 9ರಂದು ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್ 66(2) ಅಡಿ ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ರಾಜ್ಯ ಸರ್ಕಾರವು ಭ್ರಷ್ಟಾಚಾರ ನಿಷೇಧ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿ ತನಿಖೆ ನಡೆಸಲು 2019ರ ಸೆಪ್ಟೆಂಬರ್ 25ರಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಸಿಬಿಐಗೆ ಸಮ್ಮತಿಸಿತ್ತು.
ಇದನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ವಜಾ ಮಾಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಡಿ ಕೆ ಶಿವಕುಮಾರ್ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮಧ್ಯೆ, ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ನವೆಂಬರ್ 28ರಂದು ಹಿಂಪಡೆದಿತ್ತು. ಈ ಹಿನ್ನೆಲೆಯಲ್ಲಿ ಡಿ ಕೆ ಶಿವಕುಮಾರ್ ಮೇಲ್ಮನವಿ ಹಿಂಪಡೆದಿದ್ದರು. ಹೀಗಾಗಿ, ವಿಭಾಗೀಯ ಪೀಠವು ಅರ್ಜಿ ಇತ್ಯರ್ಥಪಡಿಸಿತ್ತು.
ಇದಕ್ಕೆ ಆಕ್ಷೇಪಿಸಿ ಬಿಜೆಪಿ ಶಾಸಕ ಯತ್ನಾಳ್ ಅವರು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದರು. ಸಿಬಿಐ ಸಹ ಹೈಕೋರ್ಟ್ ಕದತಟ್ಟಿತು.
ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣವನ್ನು ವಿಸ್ತೃತ ಪೀಠ ವಿಚಾರಣೆನಡೆಸುವುದು ಸೂಕ್ತ ಎಂದು ಅರ್ಜಿಯನ್ನು ಮುಖ್ಯನ್ಯಾಯಮೂರ್ತಿಗಳ ಮುಂದೆ ಇರಿಸಬೇಕು ರಿಜಿಸ್ಟ್ರಿಗೆ ಸೂಚಿಸಿತ್ತು. ಅದರಂತೆ ಅರ್ಜಿಯನ್ನು ನ್ಯಾಯಮೂರ್ತಿ ಕೆಸೋಮಶೇಖರ್ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಪಟ್ಟಿ ಮಾಡಲಾಗಿತ್ತು.