Basanagouda R Patil, D K Shivakumar, CBI and Karnataka HC 
ಸುದ್ದಿಗಳು

ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ಅನುಮತಿ ವಾಪಸ್‌ ಪ್ರಕರಣ: ವಿಚಕ್ಷಣಾ ಆಯೋಗದ ಪಾತ್ರದ ಬಗ್ಗೆ ಆಲಿಸಲಿರುವ ಹೈಕೋರ್ಟ್‌

ಸಂವಿಧಾನದ 135ನೇ ವಿಧಿಯ ಉದ್ದೇಶ, ಕೇಂದ್ರೀಯ ವಿಚಕ್ಷಣಾ ಆಯೋಗ ಕಾಯಿದೆ 2003ರ ನೆಲೆಯಲ್ಲಿ ಕೇಂದ್ರೀಯ ವಿಚಕ್ಷಣಾ ಆಯೋಗದ ಪಾತ್ರ ಸೇರಿದಂತೆ ಹಲವು ವಿಚಾರಗಳಿಗೆ ನ್ಯಾಯಾಲಯ ಸ್ಪಷ್ಟನೆ ಬಯಸಿದೆ.

Bar & Bench

ಹಾಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ದದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆ ನಡೆಸಲು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೀಡಿದ್ದ ಅನುಮತಿಯನ್ನು ರಾಜ್ಯ ಸರ್ಕಾರವು ಹಿಂಪಡೆದಿರುವುದನ್ನು ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯಿತು.

ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಹಿರಿಯ ವಕೀಲ ಕಪಿಲ್‌ ಸಿಬಲ್‌ ಇಂದು ವಿಚಾರಣೆಗೆ ಹಾಜರಾಗುತ್ತಿಲ್ಲ. ಹೀಗಾಗಿ, ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಬೇಕು ಎಂದು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ಉಮೇಶ್‌ ಎಂ. ಅಡಿಗ ಅವರ ವಿಭಾಗೀಯ ಪೀಠಕ್ಕೆ ಮನವಿ ಮಾಡಿದರು.

ಇದನ್ನು ಪುರಸ್ಕರಿಸಿದ ಪೀಠವು ವಿಚಾರಣೆ ಮುಂದೂಡಿತು. ಅಲ್ಲದೇ, ಬಸನಗೌಡ ಪಾಟೀಲ್‌ ಯತ್ನಾಳ್‌ ಪರವಾಗಿ ಹಾಜರಾಗಿದ್ದ ವಕೀಲ ವೆಂಕಟೇಶ್‌ ದಳವಾಯಿ ಅವರಿಂದ ಪ್ರಕರಣ ಸಂಬಂಧ ದಾಖಲೆಗಳ ಸಾರಾಂಶವನ್ನು ದಾಖಲೆಯಲ್ಲಿ ಸ್ವೀಕರಿಸಿತು.

ಮುಂದುವರಿದು, ಸಂವಿಧಾನದ 135ನೇ ವಿಧಿಯ ಉದ್ದೇಶ, ಕೇಂದ್ರೀಯ ವಿಚಕ್ಷಣಾ ಆಯೋಗ ಕಾಯಿದೆ 2003ರ ನೆಲೆಯಲ್ಲಿ ಕೇಂದ್ರೀಯ ವಿಚಕ್ಷಣಾ ಆಯೋಗದ ಪಾತ್ರ ಸೇರಿದಂತೆ ಹಲವು ವಿಚಾರಗಳು ಕುರಿತು ಪಕ್ಷಕಾರರ ವಕೀಲರಿಂದ ವಾದ ಆಲಿಸಬೇಕಿದೆ ಎಂದು ಆದೇಶದಲ್ಲಿ ದಾಖಲಿಸಿ, ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಹೈಕೋರ್ಟ್‌ ಮೇ 31ರಂದು ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು. ಮೇಲಿನ ವಿಚಾರಗಳಿಗೆ ಸ್ಪಷ್ಟನೆ ಬೇಕಿದೆ ಎನಿಸಿದ ಹಿನ್ನೆಲೆಯಲ್ಲಿ ಮುಂದುವರಿದ ವಿಚಾರಣೆಗೆ ಪ್ರಕರಣವನ್ನು ಇಂದಿಗೆ ನಿಗದಿಗೊಳಿಸಲಾಗಿತ್ತು.