ಕರ್ನಾಟಕ ಹೈಕೋರ್ಟ್ ಅನ್ನು ಹೆಸರಿಸಿ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ವಿಡಿಯೊ ಪ್ರಸಾರ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಕರ್ನಾಟಕ ಹೈಕೋರ್ಟ್‌ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್ ನೀಡಿದ ದೂರಿನ ಮೇರೆಗೆ ಈಚೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ ದಾಖಲಾಗಿದೆ.
ಕರ್ನಾಟಕ ಹೈಕೋರ್ಟ್ ಅನುಮತಿ ಪಡೆಯದೇ ನ್ಯಾಯಾಲಯದ ಆವರಣದಲ್ಲಿ ಅತಿಕ್ರಮ ಪ್ರವೇಶ ಮಾಡಿ, ವಿಡಿಯೊ ಚಿತ್ರೀಕರಣ ಮಾಡಿರುವುದಲ್ಲದೇ, ಅದನ್ನು ಸಂವಾದ ಎಂಬ ಮಾಧ್ಯಮ ಸಂಸ್ಥೆಯು ತನ್ನ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ “ಕರ್ನಾಟಕ ಹೈಕೋರ್ಟ್‌ನಲ್ಲಿ ನಮಾಜ್! 2022” ಎಂಬ ತಲೆಬರಹದಡಿಯಲ್ಲಿ ಅಪ್‌ಲೋಡ್ ಮಾಡಿದೆ. ಆ ವಿಡಿಯೊ ವೈರಲ್ ಆಗಿದ್ದು, ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ಈ ವಿಡಿಯೊ ಪ್ರಸಾರ ಮಾಡಿರುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಹೈಕೋರ್ಟ್‌ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್ ಈಚೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನು ಆಧರಿಸಿ ಪ್ರಥಮ ವರ್ತಮಾನ ವರದಿ ದಾಖಲಾಗಿದೆ.
ಕರ್ನಾಟಕ ಹೈಕೋರ್ಟ್‌ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್ ಎನ್ ಜಿ ದಿನೇಶ್ ಅವರು ತಮ್ಮ ಸಿಬ್ಬಂದಿಯ ಮೂಲಕ ಕಳುಹಿಸಿದ ದೂರು ಆಧರಿಸಿ ವಿಧಾನಸೌಧ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 447 (ಕ್ರಿಮಿನಲ್ ಅತಿಕ್ರಮ ಪ್ರವೇಶ) ಮತ್ತು 505 (2)ರ (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವುದು) ಅಡಿ ಅನಾಮಿಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದೂರಿನ ವಿವರ: 2022ರ ಮೇ 14ರಂದು ಸಂವಾದ ಎಂಬ ಮಾಧ್ಯಮ ಸಂಸ್ಥೆಯು ತನ್ನ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ “ಕರ್ನಾಟಕ ಹೈಕೋರ್ಟ್‌ನಲ್ಲಿ ನಮಾಜ್! 2022” ಎಂಬ ತಲೆಬರಹದಡಿ ವಿಡಿಯೊ ಒಂದನ್ನು ಅಪ್‌ಲೋಡ್ ಮಾಡಿದ್ದು, ಇದು ವೈರಲ್ ಆಗಿದೆ. ಈ ವಿಡಿಯೊವನ್ನು ಪರಿಶೀಲಿಸಲಾಗಿದ್ದು, ಕರ್ನಾಟಕ ಹೈಕೋರ್ಟ್‌ನ ಆವರಣದಲ್ಲಿ ವಿಡಿಯೊ ಚಿತ್ರೀಕರಿಸಿ ಅದನ್ನು ಸಂವಾದದ ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ನ್ಯಾಯಾಲಯದ ಆವರಣಕ್ಕೆ ಅನುಮತಿ ಇಲ್ಲದೇ ಪ್ರವೇಶ ಮಾಡುವುದು ಮತ್ತು ವಿಡಿಯೊ ಚಿತ್ರೀಕರಣ ಮಾಡುವುದನ್ನು ನಿಷೇಧಿಸಲಾಗಿದೆ. ನ್ಯಾಯಾಲಯಕ್ಕೆ ಅತಿಕ್ರಮ ಪ್ರವೇಶ ಮಾಡಿ, ಪೂರ್ವಾನುಮತಿ ಪಡೆಯದೇ ವಿಡಿಯೊ ಚಿತ್ರೀಕರಣ ಮಾಡಿ, ಅದನ್ನು ಫೇಸ್‌ಬುಕ್ ಮತ್ತು ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿ ಎರಡು ವರ್ಗಗಳ ನಡುವೆ ದ್ವೇಷ ಉಂಟು ಮಾಡುವ ವಿಡಿಯೊ ಪ್ರಸಾರ ಮಾಡಿರುವವರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳುವಂತೆ ಹೈಕೋರ್ಟ್‌ನ ಆಡಳಿತ ವಿಭಾಗದ ಉಸ್ತುವಾರಿ ರಿಜಿಸ್ಟ್ರಾರ್ ಎನ್ ಜಿ ದಿನೇಶ್ ಅವರು ಮೇ 16ರಂದು (ಸೋಮವಾರ) ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.