Murder 
ಸುದ್ದಿಗಳು

ಭೂ ವಿಜ್ಞಾನಿ ಪ್ರತಿಮಾ ಕೊಲೆ: ಆರೋಪಿ ಕಿರಣ್‌ನನ್ನು 10 ದಿನ ಪೊಲೀಸ್‌ ಕಸ್ಟಡಿಗೆ ನೀಡಿದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ

ಬಂಧಿತ ಕಿರಣ್‌ನನ್ನು ವೈದ್ಯಕೀಯ ತಪಾಸಣೆಯ ಬಳಿಕ ಬೆಂಗಳೂರಿನ ಎರಡನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಬಿ ಎಸ್‌ ವೇದಮೂರ್ತಿ ಅವರ ಮುಂದೆ ಹಾಜರುಪಡಿಸಲಾಗಿತ್ತು.

Bar & Bench

ಬೆಂಗಳೂರಿನಲ್ಲಿ ನಡೆದಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಕೆ ಎಸ್‌ ಪ್ರತಿಮಾ ಅವರ ಕೊಲೆ ಪ್ರಕರಣದ ಆರೋಪಿ ಕಿರಣ್‌ನನ್ನು ಬೆಂಗಳೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು 10 ದಿನಗಳ ಕಾಲ ಸೋಮವಾರ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಬಂಧಿತ ಕಿರಣ್‌ನನ್ನು ವೈದ್ಯಕೀಯ ತಪಾಸಣೆಯ ಬಳಿಕ ಬೆಂಗಳೂರಿನ ಎರಡನೇ ಹೆಚ್ಚುವರಿ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಬಿ ಎಸ್‌ ವೇದಮೂರ್ತಿ ಅವರ ಮುಂದೆ ಹಾಜರುಪಡಿಸಲಾಗಿತ್ತು. ಘಟನೆಯ ಮಾಹಿತಿ ಪಡೆದ ಮ್ಯಾಜಿಸ್ಟ್ರೇಟ್‌ ಅವರು ಆರೋಪಿಯನ್ನು ನವೆಂಬರ್‌ 15ರವರೆಗೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಪ್ರತಿಮಾ ಅವರ ಮಾಜಿ ಕಾರು ಚಾಲಕನಾದ ಆರೋಪಿ ಕಿರಣ್‌ನನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಬಂಧಿಸಲಾಗಿತ್ತು. ಕೆಲಸ ಕಳೆದುಕೊಂಡಿದ್ದ ಕಿರಣ್‌ ಕಳೆದ ಶನಿವಾರ ಪ್ರತಿಮಾ ಅವರ ಮನೆಗೆ ತೆರಳಿ ಮತ್ತೆ ಕೆಲಸಕ್ಕೆ ನೇಮಕ ಮಾಡಿಕೊಳ್ಳುವಂತೆ ಕೋರಿದ್ದ. ಇದಕ್ಕೆ ನಿರಾಕರಿಸಿದ ಕಾರಣಕ್ಕೆ ಪ್ರತಿಮಾ ಅವರನ್ನು ಕೊಲೆ ಮಾಡಿರುವುದಾಗಿ ಕಿರಣ್‌ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ತುಡ್ಕಿ ಮೂಲದ ಪ್ರತಿಮಾ ಅವರು 2008ರಲ್ಲಿ ಭೂ ವಿಜ್ಞಾನಿಯಾಗಿ ನೇಮಕವಾಗಿದ್ದರು. 2019ರಲ್ಲಿ ಹಿರಿಯ ಭೂ ವಿಜ್ಞಾನಿಯಾಗಿ ಬಡ್ತಿ ಪಡೆದಿದ್ದರು.