lesbian couple
lesbian couple 
ಸುದ್ದಿಗಳು

ಪೋಷಕರಿಂದ ಸಲಿಂಗ ಸಂಗಾತಿಯ ಅಕ್ರಮ ಬಂಧನ: ಕೇರಳ ಹೈಕೋರ್ಟ್ ಮೊರೆ ಹೋದ ಯುವತಿ

Bar & Bench

ಸಲಿಂಗ ಸಂಗಾತಿಯನ್ನು ಆಕೆಯ ಹೆತ್ತವರು ತನ್ನಿಂದ ಬಲವಂತವಾಗಿ ಬೇರ್ಪಡಿಸಿದ್ದಾರೆ ಎಂದು ಆರೋಪಿಸಿ ಯುವತಿಯೊಬ್ಬರು ಕೇರಳ ಹೈಕೋರ್ಟ್‌ಗೆ ಈಚೆಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದಾರೆ.

ತಾನು ತನ್ನ ಸಂಗಾತಿಯೊಂದಿಗೆ ಮತ್ತೆ ಒಂದುಗೂಡಬೇಕು ಎಂದು ಆಕೆ ಅರ್ಜಿಯಲ್ಲಿ ಪ್ರಾರ್ಥಿಸಿದ್ದು ಜೂನ್ 6ರಂದು ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಪಿ ಬಿ ಸುರೇಶ್ ಕುಮಾರ್ ಮತ್ತು ಸಿ ಎಸ್‌ ಸುಧಾ ಅವರಿದ್ದ ವಿಭಾಗೀಯ ಪೀಠವು ಪ್ರಕರಣದ ಮುಂದಿನ ವಿಚಾರಣೆ ನಡೆಯುವ ಜೂನ್ 19ರಂದು ಅರ್ಜಿದಾರೆಯ ಸಂಗಾತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತು.

ಈ ಸಂಬಂಧ ಅರ್ಜಿದಾರೆಯ ಸಂಗಾತಿಯ ಪೋಷಕರಿಗೆ ನೋಟಿಸ್‌ ಕೂಡ ನೀಡಿರುವ ಪೀಠ ಅವರ ಪ್ರತಿಕ್ರಿಯೆ ಕೇಳಿತು.

ತಾನು ಹಾಗೂ ತನ್ನ ಸಂಗಾತಿ ಇಬ್ಬರೂ ಸಾಂಪ್ರದಾಯಿಕ ಮುಸ್ಲಿಂ ಕುಟುಂಬದಿಂದ ಬಂದಿದ್ದು ತಮ್ಮ ಸಂಬಂಧದ ಬಗ್ಗೆ ತಮ್ಮ ಕುಟುಂಬಗಳಿಗೆ ತಿಳಿದ ಬಳಿಕ ತಮ್ಮನ್ನು ಬೇರ್ಪಡಿಸಲು ತುಂಬಾ ಯತ್ನಿಸಿದರು ಎಂದು ಅರ್ಜಿದಾರೆ ತಿಳಿಸಿದ್ದರು.

ಮನೆ ಬಿಟ್ಟು ಹೋಗಿದ್ದ ತಮ್ಮಿಬ್ಬರ ವಿರುದ್ಧ ಎರಡೂ ಕಡೆಯವರು ಪ್ರಕರಣ ದಾಖಲಿಸಿದ್ದರು. ಆದರೆ ಜೆಎಂಎಫ್‌ಸಿ ನ್ಯಾಯಾಲಯ ಒಟ್ಟಿಗೆ ಬದುಕಲು ನಮ್ಮಿಬ್ಬರಿಗೆ ಅನುಮತಿ ನೀಡಿತ್ತು. ನಾವು ಎರ್ನಾಕುಲಂಗೆ ಸ್ಥಳಾಂತರಗೊಂಡಿದ್ದೆವು. ಆದರೆ ನನ್ನ ಸಂಗಾತಿಯನ್ನು ಆಕೆಯ ಪೋಷಕರು ಮೇ 30ರಂದು ಬಲವಂತವಾಗಿ ಕರೆದೊಯ್ದು ಅಕ್ರಮ ಬಂಧನದಲ್ಲಿರಿಸಿದ್ದಾರೆ. ಹಲವು ಬಾರಿ ದೂರು ನೀಡಿದರೂ ರಾಜಕೀಯ ಒತ್ತಡದಿಂದಾಗಿ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಶೀಘ್ರವೇ ಕ್ರಮ ಕೈಗೊಳ್ಳದಿದ್ದರೆ ತನ್ನ ಸಂಗಾತಿಯ ಕುಟುಂಬ ಆಕೆಯನ್ನು ಲಿಂಗ ಪರಿವರ್ತಿಸಿ ದೇಶ ತೊರೆಯುವಂತೆ ಮಾಡುತ್ತದೆ. ತನ್ನ ಸಂಗಾತಿಗೆ ಮಾನಸಿಕ ದೈಹಿಕ ಚಿತ್ರಹಿಂಸೆ ನೀಡಲಾಗಿದ್ದು ಮಾನಸಿಕ ಅಸ್ವಸ್ಥೆ ಎಂದು ಆರೋಪಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.  

ನವತೇಜ್ ಸಿಂಗ್ ಜೋಹರ್ ಮತ್ತಿತರರು ಹಾಗೂ ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ  ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್‌ ನೀಡಿರುವ ಮಹತ್ವದ ತೀರ್ಪನ್ನು ಉಲ್ಲೇಖಿಸಿರುವ ಅರ್ಜಿದಾರೆ  ತಾನು ಮತ್ತು ತನ್ನ ಸಂಗಾತಿ ಸಹಜೀವನ ನಡೆಸಲು ಅರ್ಹರು ಎಂದು ಪ್ರತಿಪಾದಿಸಿದ್ದಾರೆ.