ಕೈಸಾಲವಾಗಿ ನೀಡಿದ ₹10 ಸಾವಿರ ವಾಪಸ್ ಕೇಳಿದ ಕಾರಣಕ್ಕೆ ಮಹಿಳೆಯನ್ನು ರಾತ್ರಿ ವೇಳೆ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಗೈದ ಆರೋಪ ಎದುರಿಸುತ್ತಿರುವ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಚಿತ್ರದುರ್ಗ ಜಿಲ್ಲೆಯ ಕೊಡಗವಳ್ಳಿ ಗ್ರಾಮದ ನಿವಾಸಿ ಜಿ ಕೆ ಮಂಜುನಾಥ್ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಜಿ ಬಸವರಾಜ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
ಆರೋಪಿ ವಿರುದ್ಧದ ಅಪರಾಧಗಳು ಘೋರ ಸ್ವರೂಪದ್ದಾಗಿದ್ದು, ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆಗೆ ಗುರಿ ವಿಧಿಸಲು ಅವಕಾಶವಿದೆ. ಇದರಿಂದ ಈ ಹಂತದಲ್ಲಿ ಜಾಮೀನು ನೀಡುವುದು ನ್ಯಾಯಯುತವಲ್ಲ. ಒಂದೊಮ್ಮೆ ಜಾಮೀನಿನ ಮೇಲೆ ಆರೋಪಿಯನ್ನು ಬಿಡುಗಡೆಗೊಳಿಸಿದರೆ, ಅದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಮಂಜುನಾಥ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಚಿತ್ರದುರ್ಗದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2025ರ ಸೆಪ್ಟೆಂಬರ್ 9ರಂದು ಆದೇಶಿಸಿತ್ತು. ಇದರಿಂದ ಆರೋಪಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿದ್ದ.
ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠವು ಪೊಲೀಸರ ವಿಚಾರಣೆ ವೇಳೆ ಆರೋಪಿ ನೀಡಿದ ಹೇಳಿಕೆ ಆಧರಿಸಿ ಮೊಬೈಲ್ ಫೋನ್ ಮತ್ತು ಕರೆಗಳ ಮಾಹಿತಿಯನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ದಾರೆ. ಹಾಗೆಯೇ, ಮೃತಳ ತಾಯಿ ಗೌರಮ್ಮ ಸೇರಿದಂತೆ ಇನ್ನಿತರ ಸಾಕ್ಷಿಗಳ ಹೇಳಿಕೆ ದಾಖಲಿಸಿದ್ದಾರೆ. ಅವುಗಳನ್ನು ಪರಿಶೀಲಿಸಿದರೆ, ಇಡೀ ಪ್ರಕರಣ ಸಾಂಧರ್ಬಿಕ ಸಾಕ್ಷ್ಯಗಳ ಮೇಲೆ ನಿಂತಿರುವುದು ಕಂಡುಬರುತ್ತದೆ. ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆಯನ್ನು ವಿಧಿಸಬಹುದಾದ ಘೋರ/ಹೀನ ಸ್ವರೂಪದ ಅಪರಾಧವನ್ನು ಅರ್ಜಿದಾರ ಎದುರಿಸುತ್ತಿದ್ದಾನೆ. ಆತನನ್ನು ಜಾಮೀನು ಮೇಲೆ ಬಿಡುಗಡೆ ಮಾಡಿದರೆ, ಅದು ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡುವುದು ಸೂಕ್ತ ಹಾಗೂ ನ್ಯಾಯಯುತವಲ್ಲ ಎಂದು ತಿಳಿಸಿ ಮೇಲ್ಮನವಿಯನ್ನು ವಜಾಗೊಳಿಸಿದೆ.
ಹಿನ್ನೆಲೆ: ಹೊಳಲ್ಕೆರೆ ಠಾಣಾ ಪೊಲೀಸರು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ತಿಳಿಸಿರುವಂತೆ, ಆಶಾ ಎಂಬುವರ ಜೊತೆಗೆ ಮಂಜುನಾಥ್ ಹಣದ ವ್ಯಹವಾರ ಹಾಗೂ ಅಕ್ರಮ ಸಂಬಂಧ ಹೊಂದಿದ್ದ. ಆಕೆಯು ಮಂಜುನಾಥ್‌ಗೆ ₹10 ಸಾವಿರ ಹಣವನ್ನು ಕೈ ಸಾಲ ನೀಡಿದ್ದಳು. ಅದನ್ನು ವಾಪಸ್ ಕೇಳಿದಕ್ಕೆ ದ್ವೇಷ ಬೆಳಸಿಕೊಂಡಿದ್ದ ಆರೋಪಿಯು ಆಶಾ ಬದುಕಿದ್ದರೆ ಪದೇ ಪದೇ ಹಣ ಕೇಳುತ್ತಾಳೆ ಎಂದು ಭಾವಿಸಿ ಸಾಯಿಸಲು ತೀರ್ಮಾನಿಸಿದ. ನಂತರ ಹಣ ಹಿಂದಿರುಗಿಸುವುದಾಗಿ ಆಶಾಳನ್ನು ಕರೆಸಿಕೊಂಡಿದ್ದ ಆರೋಪಿ, 2025ರ ಏಪ್ರಿಲ್ 14ರಂದು ರಾತ್ರಿ 8 ಗಂಟೆ ಸುಮಾರಿಗೆ ಕೆಂಗುಂಟೆ ಮತ್ತು ದಾಸಿಕಟ್ಟೆ ಗ್ರಾಮದ ಮಧ್ಯದಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೋಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಹೇಳಲಾಗಿದೆ.