ಮಹಿಳಾ ಪೊಲೀಸ್ ಅಧಿಕಾರಿ ಕೂಡ ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾಗಬಹುದು ಮತ್ತು ಯಾವುದೇ ವೃತ್ತಿಗೆ ಸಂಬಂಧಿಸಿದ ಲಿಂಗಾಧಾರಿತ ಅಥವಾ ಏಕತಾನತೆಯ ಗ್ರಹಿಕೆಗಳಿಂದ ನ್ಯಾಯಾಲಯಗಳು ಕುರುಡಾಗಬಾರದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ. [ಸಂಘಮಿತ್ರ ಮತ್ತು ಸರ್ಕಾರ ನಡುವಣ ಪ್ರಕರಣ]
ಪೊಲೀಸ್ ಅಧಿಕಾರಿಯಾಗಿದ್ದ ತನ್ನ ಪತ್ನಿಗೆ ಕ್ರೌರ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಪತಿಯನ್ನು ಬಂಧಮುಕ್ತಗೊಳಿಸಿದ್ದ ಸೆಷನ್ಸ್ ನ್ಯಾಯಾಲಯವೊಂದರ ತೀರ್ಪನ್ನು ಬದಿಗೆ ಸರಿಸಿದ ಪೀಠ ಈ ವಿಚಾರ ತಿಳಿಸಿದೆ. ಪತಿ ಕೂಡ ವೃತ್ತಿಯಿಂದ ಪೊಲೀಸ್ ಅಧಿಕಾರಿಯಾಗಿದ್ದಾರೆ.
ತನ್ನ ವಿರುದ್ಧ ಕ್ರಿಮಿನಲ್ ಆರೋಪ ನಿಗದಿಗೊಳಿಸುತ್ತಿರುವುದನ್ನು ಪ್ರಶ್ನಿಸಿದ್ದ ಪತಿಯ ಅರ್ಜಿಗೆ ಸಂಬಂಧಿಸಿದಂತೆ ತೀರ್ಪು ನೀಡುವ ವೇಳೆ ಹೈಕೋರ್ಟ್ ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರು ಲಿಂಗ ಅಥವಾ ವೃತ್ತಿಯ ಬಗ್ಗೆ ಯಾವುದೇ ಏಕತಾನತೆಯ ಗ್ರಹಿಕೆ ಮೂಲಕ ನ್ಯಾಯಾಲಯ ತನ್ನ ಅಭಿಪ್ರಾಯ ವ್ಯಕ್ತಪಡಿಸಲಾಗದು ಎಂದರು.
ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ವ್ಯಕ್ತಿ ಎಂದಿಗೂ ಕೌಟುಂಬಿಕ ಹಿಂಸೆಗೆ ಬಲಿಯಾಗಲು ಸಾಧ್ಯವಿಲ್ಲ ಎಂದು ಭಾವಿಸುವುದು ನ್ಯಾಯಸಮ್ಮತವಲ್ಲ ಮತ್ತು ಪಕ್ಷಪಾತಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವೃತ್ತಿಯಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಮಹಿಳೆ ತನ್ನ ವೃತ್ತಿ ತನ್ನ ವೈಯಕ್ತಿಕ ಅಥವಾ ವೈವಾಹಿಕ ಜೀವನದಲ್ಲಿ ಬಲಿಪಶುವಾಗಲು ಸಾಧ್ಯವಿಲ್ಲ ಎಂದು ಊಹೆ ಮಾಡುವುದು ಅನ್ಯಾಯವಾಗುತ್ತದೆ ಎಂಬುದಾಗಿ ಅದು ಹೇಳಿದೆ.
ಅವರು ತೀರ್ಪು ನೀಡುವಾಗ ಲಿಂಗ ತಟಸ್ಥತೆ ಎತ್ತಿಹಿಡಿಯುವುದು ಅತ್ಯಂತ ಮಹತ್ವದ್ದು. ಕೆಳ ನ್ಯಾಯಾಲಯ ವರದಕ್ಷಿಣೆ ಬೇಡಿಕೆ ಮತ್ತು ದೂರುದಾರರಿಗೆ ನೀಡಿದ ಚಿತ್ರಹಿಂಸೆಯ ನಿರ್ದಿಷ್ಟ ಘಟನೆಗಳನ್ನು ಚರ್ಚಿಸದಿರುವುದು ದುರದೃಷ್ಟಕರ ಎಂದು ನ್ಯಾ. ಸ್ವರಣಾ ತಿಳಿಸಿದರು.
ಬಲಿಪಶು ಹುದ್ದೆಯಲ್ಲಿರುವ ಮಹಿಳೆಯಾಗಿರುವೆಡೆ ಕೌಟುಂಬಿಕ ಹಿಂಸಾಚಾರ ಅಥವಾ ಕ್ರೌರ್ಯ ಪ್ರಕರಣದ ವಿಶಿಷ್ಟ ಲಕ್ಷಣಗಳನ್ನು ಒಪ್ಪಿಕೊಳ್ಳುವುದು ಮುಖ್ಯವಾಗಿದೆ ಎಂದು ನ್ಯಾಯಾಲಯ ನುಡಿಯಿತು.
ಅಂತೆಯೇ ನ್ಯಾಯಾಂಗ ಶಿಕ್ಷಣದಲ್ಲಿ ಲಿಂಗ ಸೂಕ್ಷ್ಮತೆಯನ್ನು ಸೇರಿಸುವ ಅವಶ್ಯಕತೆಯಿದೆ ಎಂದು ಹೈಕೋರ್ಟ್ ಒತ್ತಿ ಹೇಳಿತು. ನ್ಯಾಯಾಂಗ ಅಧಿಕಾರಿಗಳಿಗೆ ತರಬೇತಿ ನೀಡುವ ನ್ಯಾಯಾಂಗ ಅಕಾಡೆಮಿಗಳು ತೀರ್ಪುಗಳಲ್ಲಿ ಲಿಂಗ ಮತ್ತಿತರ ಪಕ್ಷಪಾತಗಳ ಅಪಾಯ ತಿಳಿಸುವ ಅಧ್ಯಾಯಗಳನ್ನು ಪಠ್ಯಕ್ರಮದಲ್ಲಿ ಸೇರಿಸಬೇಕು ಎಂದ ನ್ಯಾಯಾಲಯ ಲಿಂಗ ಸಮಾನತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯಂತಹ ವಿಷಯಗಳನ್ನು ಪಠ್ಯಕ್ರಮ ಮತ್ತು ನಿರಂತರ ನ್ಯಾಯಾಂಗ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಅಳವಡಿಸಲು ನ್ಯಾಯಾಂಗ ಅಕಾಡೆಮಿಗೆ ತಿಳಿಸಿತು.