ಪುರುಷನೊಂದಿಗೆ ಸಂಬಂಧವಿಟ್ಟುಕೊಂಡು ಆತನೊಂದಿಗೆ ಸ್ವಇಚ್ಛೆಯಿಂದ ವಾಸಿಸುತ್ತಿದ್ದ ಮಹಿಳೆ ಆ ಸಂಬಂಧ ಹದಗೆಟ್ಟ ಬಳಿಕ ಅತ್ಯಾಚಾರ ಪ್ರಕರಣ ದಾಖಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ [ಅನ್ಸಾರ್ ಮೊಹಮ್ಮದ್ ವಿರುದ್ಧ ರಾಜಸ್ಥಾನ ಸರ್ಕಾರ ನಡುವಣ ಪ್ರಕರಣ].
ಆ ಮೂಲಕ ಅತ್ಯಾಚಾರ, ಅಸಹಜ ಅಪರಾಧಗಳು ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಎದುರಿಸುತ್ತಿದ್ದ ಅನ್ಸಾರ್ ಮೊಹಮ್ಮದ್‌ಗೆ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ವಿಕ್ರಮ್ ನಾಥ್ ಅವರಿದ್ದ ಪೀಠ ಜಾಮೀನು ನೀಡಿತು.
ಮೇಲ್ಮನವಿದಾರನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ರಾಜಸ್ಥಾನ ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿದ ಸುಪ್ರೀಂ ಕೋರ್ಟ್, ದೂರುದಾರೆ ಸ್ವಇಚ್ಛೆಯಿಂದ ಮೇಲ್ಮನವಿದಾರ ಅನ್ಸಾರ್ ಜೊತೆ ಇದ್ದು ಆತನೊಂದಿಗೆ ಸಂಬಂಧ ಹೊಂದಿದ್ದರು. ಈಗ ಸಂಬಂಧ ಹದಗೆಟ್ಟಿದ್ದರೆ ಅದು ಐಪಿಸಿ ಸೆಕ್ಷನ್ 376 (2) (ಎನ್) ಅಡಿ ಪ್ರಕರಣ ದಾಖಲಿಸಲು ಆಧಾರವಾಗಲದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಅನ್ಸಾರ್ ಜೊತೆ ದೂರುದಾರೆ ನಾಲ್ಕು ವರ್ಷಗಳ ಕಾಲ ಸಂಬಂಧ ಹೊಂದಿದ್ದು ಆಕೆ ಮತ್ತು ಅನ್ಸಾರ್ ನಡುವೆ ಸಂಬಂಧ ಬೆಳೆದಾಗ ಮಹಿಳೆಗೆ 21 ವರ್ಷ ವಯಸ್ಸಾಗಿತ್ತು ಎಂಬುದನ್ನು ದೂರುದಾರೆ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯ ಗಮನಿಸಿತು. ಈ ಹಿನ್ನೆಲೆಯಲ್ಲಿ ಅನ್ಸಾರ್‌ಗೆ ನಿರೀಕ್ಷಣಾ ಜಾಮೀನು ನೀಡಲು ನ್ಯಾಯಾಲಯ ನಿರ್ಧರಿಸಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: