President Droupadi Murmu 
ಸುದ್ದಿಗಳು

ನ್ಯಾಯಾಂಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮು

ಮಧ್ಯಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ಕಟ್ಟಡಕ್ಕೆ ಸೆಪ್ಟೆಂಬರ್ 27ರಂದು ನಡೆದ ಶಿಲಾನ್ಯಾಸ ಸಮಾರಂಭದಲ್ಲಿ ರಾಷ್ಟ್ರಪತಿ ಮುರ್ಮು ಮಾತನಾಡಿದರು.

Bar & Bench

ನ್ಯಾಯಾಂಗ, ಸಮಾಜದ ಅವಿಭಾಜ್ಯ ಅಂಗವಾಗಿರುವುದರಿಂದ ಅದರಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು ಅತ್ಯಗತ್ಯ ಎಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಇತ್ತೀಚೆಗೆ ತಿಳಿಸಿದರು.

ಸುಪ್ರೀಂ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳ ಶೇಕಡಾವಾರು ಪ್ರಮಾಣ 9ರಷ್ಟಿದ್ದರೆ, ಹೈಕೋರ್ಟ್‌ಗಳಲ್ಲಿ ಇದು ಶೇ 14ರಷ್ಟಿದ್ದು ನ್ಯಾಯಾಲಯದಲ್ಲಿ ಮಹಿಳೆಯರು ಹೆಚ್ಚು ಪಾಲ್ಗೊಳ್ಳಬೇಕು ಎಂದರು.  

ಮಧ್ಯಪ್ರದೇಶ ಹೈಕೋರ್ಟ್‌ನ ಹೆಚ್ಚುವರಿ ಕಟ್ಟಡಕ್ಕೆ ಸೆಪ್ಟೆಂಬರ್ 27ರಂದು ನಡೆದ ಶಿಲಾನ್ಯಾಸ ಸಮಾರಂಭದಲ್ಲಿ ರಾಷ್ಟ್ರಪತಿ ಮುರ್ಮು ಮಾತನಾಡಿದರು. ಸಮಾರಂಭದಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರವಿ ಮಳಿಮಠ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹಾಗೂ  ರಾಜ್ಯಪಾಲ ಮಂಗುಭಾಯ್ ಸಿ ಪಟೇಲ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಈಚೆಗೆ ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಿದ್ದನ್ನು ಪ್ರಸ್ತಾಪಿಸಿದ ಅವರು ಮಹಿಳಾ ಸಬಲೀಕರಣದ ಮಹತ್ವದ ಬಗ್ಗೆ ಮಾತನಾಡಿದರು.

"ಭಾರತಕ್ಕೆ ಮಹಿಳಾ ಸಬಲೀಕರಣ ಬಹಳ ಮುಖ್ಯ, ಕಳೆದ ವಾರ ಸಂಸತ್ತಿನಲ್ಲಿ, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಸೀಟುಗಳನ್ನು ಮೀಸಲಿಡುವ ಕಾಯಿದೆ ಅಂಗೀಕರಿಸಲಾಗಿದೆ. ಈ ಹೆಜ್ಜೆ ಮಹಿಳೆಯರ ರಾಜಕೀಯ ಸಬಲೀಕರಣದ ನಿಟ್ಟಿನಲ್ಲಿ ಅತ್ಯಂತ ಕ್ರಾಂತಿಕಾರಿಯಾಗಲಿದೆ" ಎಂದು ಅವರು ಹೇಳಿದರು.

ಹೊಸತನದ ಪ್ರಜ್ಞೆ ಮಹಿಳೆಯರಿಗೆ ಸ್ವಾಭಾವಿಕವಾಗಿ ಇದ್ದು ಮಹಿಳಾ ನ್ಯಾಯಾಧೀಶರ ಸಂಖ್ಯೆ ಹೆಚ್ಚಿಸುವುದರಿಂದ ನ್ಯಾಯ ವಿತರಣಾ ವ್ಯವಸ್ಥೆಗೆ ಸಹಕಾರಿಯಾಗಲಿದೆ ಎಂದರು.

"ನ್ಯಾಯ ನೀಡುವ ಪ್ರಕ್ರಿಯೆ ಗಣಿತದ ಸೂತ್ರ ಆಧರಿಸಿಲ್ಲ. ಕಾನೂನು ಆಡಳಿತದಲ್ಲಿ ಪುಸ್ತಕಗಳ ಜ್ಞಾನದ ಜೊತೆಗೆ ನಡವಳಿಕೆ ಮತ್ತು ವಿವೇಚನೆಯ ಬಳಕೆಯನ್ನು ನಿರೀಕ್ಷಿಸಲಾಗಿದೆ. ಭಾವನೆಗಳು, ಸಂದರ್ಭಗಳು ಮತ್ತು ಸೂಕ್ಷ್ಮತೆಯಂತಹ ಇತರ ಆಯಾಮಗಳು ಸಹ ಇದರಲ್ಲಿವೆ. ಆದ್ದರಿಂದ, ನ್ಯಾಯ ವ್ಯವಸ್ಥೆಯಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯಲ್ಲಿ ನ್ಯಾಯಾಂಗದ ಹಿತಾಸಕ್ತಿಯೂ ಇರುತ್ತದೆ " ಎಂದು ಅವರು ಹೇಳಿದರು.