ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಹಗರಣಕ್ಕೆ ಸಂಬಂಧಿಸಿದ ಸಂತ್ರಸ್ತೆ ಅಪಹರಣ ಪ್ರಕರಣದಲ್ಲಿ ಪ್ರಜ್ವಲ್ ತಾಯಿ ಭವಾನಿ ರೇವಣ್ಣ ಅವರು ನಿರೀಕ್ಷಣಾ ಜಾಮೀನು ಕೋರಿ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.
ವಿಶೇಷ ನ್ಯಾಯಾಲಯವು ಮೇ 31ರಂದು ಭವಾನಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಭವಾನಿ ಹೈಕೋರ್ಟ್ ಕದತಟ್ಟಿದ್ದಾರೆ.
ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ಬೆನ್ನಿಗೇ ಎಸ್‌ಐಟಿ ಅಧಿಕಾರಿಗಳು ಹಾಸನದ ಹೊಳೆನರಸೀಪುರದ ಅವರ ನಿವಾಸದಲ್ಲಿ ಭವಾನಿ ಅವರನ್ನು ವಿಚಾರಣೆಗೆ ಒಳಪಡಿಸಲು ಕಾಯುತ್ತಿದ್ದಾರೆ. ಆದರೆ, ಎಸ್‌ಐಟಿ ಅಧಿಕಾರಿಗಳಿಗೆ ಭವಾನಿ ತಮ್ಮ ಇರುವಿಕೆಯ ಸುಳಿವು ನೀಡಿಲ್ಲ.
ಭವಾನಿ ಅವರು ಮೈಸೂರಿನ ಕೆ ಆರ್ ನಗರದ ಠಾಣೆಯಲ್ಲಿ ಸಂತ್ರಸ್ತೆಯ ಪುತ್ರ ನೀಡಿರುವ ದೂರಿನಲ್ಲಿ ತನ್ನನ್ನು ಆರೋಪಿಯನ್ನಾಗಿ ಉಲ್ಲೇಖಿಸಿಲ್ಲ. ಮಾಧ್ಯಮಗಳಿಂದ ತನಗೆ ಎಸ್‌ಐಟಿ ನೋಟಿಸ್ ನೀಡಿರುವ ವಿಚಾರ ತಿಳಿದಿದೆ. ಆದರೆ, ಅಪಹರಣ ಪ್ರಕರಣದಲ್ಲಿ ತನ್ನತ್ತ ಬೆರಳು ಮಾಡುವ ಯಾವುದೇ ದಾಖಲೆಗಳು ಇಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ಪ್ರಕರಣದಲ್ಲಿ ಭವಾನಿ ಅವರ ಕೃತ್ಯವಿದೆ ಎನ್ನುವುದಕ್ಕೆ ಹಲವು ದಾಖಲೆಗಳಿವೆ. 2024ರ ಮೇ 13ರಂದು ತನಿಖೆಯ ಸಂದರ್ಭದಲ್ಲಿ ವಿಚಾರಣಾಧೀನ ನ್ಯಾಯಾಲಯದ ಅನುಮತಿಯ ಮೇರೆಗೆ ಐಪಿಸಿ ಸೆಕ್ಷನ್ 120-ಬಿ (ಪಿತೂರಿ) ಮತ್ತು ಐಪಿಸಿ ಸೆಕ್ಷನ್ 109ರ ಸೇರ್ಪಡೆ ಮಾಡಲಾಗಿದೆ. ಭವಾನಿ ತನ್ನ ಡ್ರೈವರ್ ಫೋನ್‌ನಿಂದ ರಾಜಗೋಪಾಲ ಜೊತೆ ಮಾತನಾಡಿರುವ ಮಾತುಕತೆಯ ಸಿಡಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ರಾಜಗೋಪಾಲ ಅವರ ಫಾರ್ಮ್ ಹೌಸ್‌ನಲ್ಲಿ ಸಂತ್ರಸ್ತೆ ಇದ್ದರು ಎಂದು ಪ್ರಾಸಿಕ್ಯೂಷನ್ ವಾದಿಸಿದೆ.
ಭವಾನಿ ಸೂಚನೆಯ ಮೇರೆಗೆ ರಾಜಗೋಪಾಲ್ ಅವರ ಫಾರ್ಮ್ ಹೌಸ್‌ಗೆ ಸಂತ್ರಸ್ತೆಯನ್ನು ಸತೀಶ್ ಬಾಬಣ್ಣ ಕರೆದೊಯ್ದಿದ್ದರು. ಪ್ರಜ್ವಲ್ ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವುದಲ್ಲದೇ ಅದನ್ನು ರೆಕಾರ್ಡ್ ಮಾಡಿಕೊಳ್ಳಲು ಭವಾನಿ ನೆರವಾಗಿದ್ದಾರೆ. ಈ ನೆಲೆಯಲ್ಲಿ ಭವಾನಿಯನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ. ಆಕೆಯನ್ನು ಕಸ್ಟಡಿಗೆ ಪಡೆಯದಿದ್ದರೆ ಮಾಹಿತಿ ಹೊರತೆಗೆಯುವುದು ಅಸಾಧ್ಯ ಎಂದು ಪ್ರಾಸಿಕ್ಯೂಷನ್ ವಿಚಾರಣಾಧೀನ ನ್ಯಾಯಾಲಯದಲ್ಲಿ ವಾದಿಸಿತ್ತು.