H D Revanna 
ಸುದ್ದಿಗಳು

ಮಹಿಳೆ ಅಪಹರಣ ಪ್ರಕರಣ: ಮಧ್ಯಂತರ ಜಾಮೀನು ಕೋರಿ ವಿಶೇಷ ನ್ಯಾಯಾಲಯದ ಕದತಟ್ಟಿದ ಎಚ್‌ ಡಿ ರೇವಣ್ಣ

ಮಹಿಳೆಯನ್ನು ಸತೀಶ್‌ ಬಾಬಣ್ಣ ಬಂದು ಕರೆದುಕೊಂಡು ಹೋದರು ಎಂದು ಮಾತ್ರವೇ ಹೇಳಲಾಗಿದೆಯೇ ಹೊರತು ರೇವಣ್ಣನವರು ಹೇಳಿದ್ದಕ್ಕೆ ಕರೆದುಕೊಂಡು ಹೋಗಿದ್ದು ಎಂದು ಎಲ್ಲೂ ಹೇಳಿಲ್ಲ ಎಂದು ವಾದಿಸಿದ ರೇವಣ್ಣ ಪರ ವಕೀಲರು.

Bar & Bench

ಲೈಂಗಿಕ ದೌರ್ಜನ್ಯ ಆರೋಪದ ಬೆನ್ನಿಗೇ ಮಹಿಳೆಯೊಬ್ಬರ ಅಪಹರಣದ ಎಫ್ಐಆರ್‌ಗೆ ಸಂಬಂಧಿಸಿದಂತೆ ಶಾಸಕ‌ ಎಚ್ ಡಿ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಜಾಮೀನು ಮಂಜೂರಾತಿ ಕೋರಿಕೆಯನ್ನು ನಾಳೆ ಆಲಿಸಿ ಆದೇಶ ಪ್ರಕಟಿಸುವುದಾಗಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಿಳಿಸಿದೆ.

ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಶುಕ್ರವಾರ ನಡೆಸಿದರು.

ರೇವಣ್ಣ ಪರ ಹಿರಿಯ ವಕೀಲ ಮೂರ್ತಿ ಡಿ.ನಾಯಕ್ ಅವರು, ಎರಡನೇ ಎಫ್‌ಐಆರ್‌ನಲ್ಲಿ ಎಲ್ಲೂ ರೇವಣ್ಣನವರ ವಿರುದ್ಧ ನೇರ ಆರೋಪ ಇಲ್ಲ. ಎರಡನೇ ಆರೋಪಿ ಸತೀಶ್‌ ಬಾಬಣ್ಣನವರ ಮೇಲೆ ಮಾತ್ರವೇ ಆರೋಪ ಇದೆ. ಮಹಿಳೆಯನ್ನು ಸತೀಶ್‌ ಬಾಬಣ್ಣ ಬಂದು ಕರೆದುಕೊಂಡು ಹೋದರು ಎಂದು ಮಾತ್ರವೇ ಹೇಳಲಾಗಿದೆಯೇ ಹೊರತು ರೇವಣ್ಣನವರು ಹೇಳಿದ್ದಕ್ಕೆ ಕರೆದುಕೊಂಡು ಹೋಗಿದ್ದು ಎಂದು ಎಲ್ಲೂ ತಿಳಿಸಿಲ್ಲ. ಅಂತೆಯೇ, ಎಫ್‌ಐಆರ್‌ನಲ್ಲಿ ಮಹಿಳೆಯ ಹೆಸರನ್ನೂ ಕಾಣಿಸಿಲ್ಲ. ರೇವಣ್ಣನವರ ವಿರುದ್ಧ ಕೇವಲ ಅಂತೆಕಂತೆ ಎಂಬಂತಹ ಆಧಾರರಹಿತ ಅಂಶವಿದೆ ಎಂದರು.

ಪ್ರಾಸಿಕ್ಯೂಷನ್‌ ಪರ ವಕೀಲರು ಇವತ್ತು ಬೆಳಗ್ಗೆಯಷ್ಟೇ ನಾವು ರೇವಣ್ಣ ವಿರುದ್ಧ ಯಾವುದೇ ಗುರುತರ ಅಂದರೆ ಜಾಮೀನು ಪಡೆಯಬಹುದಾದಂತಹ ಸೆಕ್ಷನ್‌ಗಳನ್ನು ಅನ್ವಯಿಸಿಲ್ಲ ಎಂದು ಹೇಳಿದ್ದ ಕಾರಣಕ್ಕೆ ನಮ್ಮ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ವಾಪಸು ಪಡೆದಿದ್ದೇವೆ. ಆದರೆ, ಮತ್ತೊಂದು ನೋಟಿಸ್ ನೀಡಲಾಗಿದೆ. ಈ ನಡೆಯನ್ನು ಗಮನಿಸಿದರೆ ಅರ್ಜಿದಾರರನ್ನು ಬಂಧಿಸಬಹುದು ಎಂಬ ಆತಂಕವಿದೆ. ಆದ್ದರಿಂದ, ತುರ್ತಾಗಿ ಮಧ್ಯಂತರ ಜಾಮೀನು ಮಂಜೂರು ಮಾಡಬೇಕು. ಅರ್ಜಿದಾರರು ತನಿಖೆಗೆ ಸಹಕರಿಸಲು ಸಿದ್ಧರಿದ್ದಾರೆ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ಈ ಪ್ರಕರಣವೂ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಹೊಂದಿಕೊಂಡ ಪ್ರಕರಣವೇ ಆಗಿರುವುದರಿಂದ ನಾಳೆ (ಮೇ 4) ಬೆಳಗ್ಗೆ ಮುಖ್ಯ ಪ್ರಕರಣದ ಮೇಲೆಯೇ ಸಂಪೂರ್ಣ ವಾದ ಆಲಿಸಿ ಅಂತಿಮ ಆದೇಶ ಪ್ರಕಟಿಸಲಾಗುವುದು ಎಂದರು.

ಪ್ರತಿವಾದಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದರು. ಅರ್ಜಿದಾರರ ಪರ ವಕೀಲ ಪವನ್ ಸಾಗರ್ ವಕಾಲತ್ತು ವಹಿಸಿದ್ದಾರೆ.