H D Revanna and Bengaluru city civil court 
ಸುದ್ದಿಗಳು

ಮಹಿಳೆ ಅಪಹರಣ ಪ್ರಕರಣ: ಜೆಡಿಎಸ್‌ ನಾಯಕ ಎಚ್‌ ಡಿ ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನಿರಾಕರಿಸಿದ ನ್ಯಾಯಾಲಯ

Bar & Bench

ಲೈಂಗಿಕ ಹಗರಣಕ್ಕೆ ಪೂರಕವಾಗಿ ವರದಿಯಾಗಿರುವ ಮಹಿಳೆ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಜೆಡಿಎಸ್‌ ಮುಖಂಡ ಹಾಗೂ ಮಾಜಿ ಸಚಿವ ಎಚ್‌ ಡಿ ರೇವಣ್ಣ ಅವರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ನಿರಾಕರಿಸಿದೆ.

ಎಚ್‌ ಡಿ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ವಜಾ ಮಾಡಿದ್ದಾರೆ. ಹೀಗಾಗಿ, ಎಚ್‌ ಡಿ ರೇವಣ್ಣ ಬಂಧನ ಸಾಧ್ಯತೆ ದಟ್ಟವಾಗಿದೆ.

ಮಧ್ಯಂತರ ಜಾಮೀನು ಅರ್ಜಿಯನ್ನು ವಜಾ ಮಾಡಲಾಗಿದ್ದು, ಮೂಲ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ಮೇ 6ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ, ಅರ್ಜಿದಾರ ರೇವಣ್ಣ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಮೂರ್ತಿ ಡಿ. ನಾಯ್ಕ್‌ ಅವರು “ಕೆ ಆರ್‌ ಪೇಟೆಯ ಠಾಣೆಯಲ್ಲಿ ಸಂತ್ರಸ್ತೆಯ ಪುತ್ರ ದಾಖಲಿಸಿರುವ ಅಪಹರಣ ದೂರಿನಲ್ಲಿ ಎಚ್‌ ಡಿ ರೇವಣ್ಣ ಬಗ್ಗೆ ಗುರುತರವಾದ ಆರೋಪಗಳಿಲ್ಲ. ಅಲ್ಲದೇ, ಪ್ರಜ್ವಲ್‌ ಮೇಲಿನ ಆರೋಪಗಳನ್ನು ರೇವಣ್ಣಗೆ ಅನ್ವಯಿಸಲಾಗದು. ರೇವಣ್ಣಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದರೆ ತಕ್ಷಣ ಎಸ್‌ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಾಗುವುದು” ಎಂದರು.

ಅಲ್ಲದೇ, “ರೇವಣ್ಣ ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆಸಲಾಗುತ್ತಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಬೇಕು ಎಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜ್ವಲ್‌ ರಾಜತಾಂತ್ರಿಕ ಪಾಸ್‌ಪೋರ್ಟ್‌ ರದ್ದುಪಡಿಸಬೇಕು ಎಂದು ಪ್ರಧಾನ ಮಂತ್ರಿಗೆ ಪತ್ರ ಬರೆದಿದ್ದಾರೆ. ಇಡೀ ಪ್ರಕರಣದಲ್ಲಿ ರಾಜಕೀಯವಿದೆ” ಎಂದು ಆಕ್ಷೇಪಿಸಿದರು.

ಎಸ್‌ಐಟಿ ಪರವಾಗಿ ವಾದಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಸಂತ್ರಸ್ತೆಯನ್ನು ರಕ್ಷಿಸಲು ಎಸ್‌ಐಟಿ ಅಧಿಕಾರಿಗಳು ಅವಿರತವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಪತ್ತೆಯಾಗಿ ಹೇಳಿಕೆ ನೀಡಿದರೆ ಇಡೀ ಪ್ರಕರಣದ ಅಸಲಿಯತ್ತು ಬೆಳಕಿಗೆ ಬರಲಿದೆ. ರೇವಣ್ಣ ಪ್ರಭಾವಿ ರಾಜಕಾರಣಿಯಾಗಿದ್ದು, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಬಿಹಾರದಲ್ಲಿ ಹೆಚ್ಚಿಗೆ ವರದಿಯಾಗುತ್ತಿದ್ದ ಅಪಹರಣ ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗುತ್ತಿರುವುದು ಆತಂಕಕಾರಿ. ಹೀಗಾಗಿ, ಅರ್ಜಿದಾರರಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಾರದು” ಎಂದು ಬಲವಾಗಿ ಪ್ರತಿರೋಧಿಸಿದರು.

ಸುಮಾರು ಒಂದೂವರೆ ತಾಸು ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿ, ಸುಮಾರು ಎರಡು ತಾಸುಗಳ ಬಳಿಕ ರೇವಣ್ಣ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.