Bhavani Revanna and Bengaluru city civil court 
ಸುದ್ದಿಗಳು

ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ವಿಶೇಷ ನ್ಯಾಯಾಲಯ

Bar & Bench

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿನ ಸಂತ್ರಸ್ತ ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ಭವಾನಿ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮೇ 31ಕ್ಕೆ ಆದೇಶ ಕಾಯ್ದಿರಿಸಿದೆ.

ಭವಾನಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲದಯ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಬುಧವಾರ ನಡೆಸಿದರು.

ವಿಚಾರಣೆಯ ವೇಳೆ ಭವಾನಿ ಪರವಾಗಿ ವಾದಿಸಿದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಸಂಸದ ‍‍ಪ್ರಜ್ವಲ್‌ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಅವರ ತಾಯಿ ಭವಾನಿ ಅವರನ್ನು ವಿಚಾರಣೆ ನಡೆಸಲು ಮುಂದಾಗಿರುವ ಎಸ್‌ಐಟಿ ನಡೆಯಲ್ಲಿ ದುರುದ್ದೇಶವಿದ್ದು, ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ” ಎಂದು ಆಕ್ಷೇಪಿಸಿದರು.

“ಭವಾನಿ ವಿರುದ್ಧದ ಆರೋಪಗಳು ರಾಜಕೀಯ ಷಡ್ಯಂತ್ರ ಷಡ್ಯಂತ್ರದಿಂದ ಕೂಡಿವೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಾಧಾರ ಇಲ್ಲ. ಆರೋಪಿಯು ತನಿಖೆಗೆ ಸಂಪೂರ್ಣ ಸಹಕಾರ ನೀಡಲಿದ್ದಾರೆ. ಆದ್ದರಿಂದ, ನಿರೀಕ್ಷಣಾ ಜಾಮೀನು ಮಂಜೂರು ಮಾಡಬೇಕು” ಎಂದು ಕೋರಿದರು.

ಇದಕ್ಕೆ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ಪ್ರಕರಣದ ಅನೇಕ ಆರೋಪಿಗಳ ಜೊತೆ ಭವಾನಿ ಫೋನ್‌ ಸಂಭಾಷಣೆ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ಈ ಸಂಭಾಷಣೆಯಲ್ಲಿ ಭವಾನಿಯವರ ಪಾತ್ರವನ್ನು ನಿರೂಪಿಸುವ ಹಲವು ಸ್ವಾರಸ್ಯಕರ ಅಂಶಗಳಿವೆ” ಎಂದರು.

ಇದನ್ನು ಅಲ್ಲಗಳೆದ ಸಂದೇಶ್‌ ಚೌಟ ಅವರು “ಅಪಹರಣಕ್ಕೆ ಒಳಗಾಗಿದ್ದಾರೆ ಎನ್ನಲಾದ ಮಹಿಳೆ ಭವಾನಿ ರೇವಣ್ಣ ಅವರ ಮನೆಯ ಹಳೆಯ ಕೆಲಸದಾಕೆ. ಆಕೆ ಮೂರು ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದರು. ಆಕೆಯನ್ನು ಪುನಾ ಮನೆಗೆ ಕರೆಸಿಕೊಳ್ಳಲಾಗಿತ್ತು ಮತ್ತು 26 ರಂದು ವಾಪಸು ಕಳುಹಿಸಲಾಗಿದೆ. ಆಕೆ ಮನೆಯಿಂದ ಹೋಗುವಾಗ ಬೈಕ್ ಹತ್ತಿ ಹೋಗಿದ್ದಾರೆ. ಇಲ್ಲಿ ಯಾರ ಒತ್ತಡವಿಲ್ಲ, ಬಲವಂತವಿಲ್ಲ. ಹೀಗಿರುವಾಗ ಅಪಹರಣ ಆರೋಪ ಉದ್ಭವಿಸಲು ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.

ಸುದೀರ್ಘ ವಾದ–ಪ್ರತಿವಾದ ಆಲಿಸಿದ ಪೀಠವು ಆದೇಶವನ್ನು ಶುಕ್ರವಾರ (ಮೇ 31) ಪ್ರಕಟಿಸುವುದಾಗಿ ಹೇಳಿ, ಆದೇಶ ಕಾಯ್ದಿರಿಸಿದೆ.

ಪ್ರಜ್ವಲ್‌ ಮತ್ತು ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಭವಾನಿ ಅವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ ಎಂದು ಮಾಧ್ಯಮಗಳು ಬಿಂಬಿಸಿವೆ. ಎಸ್‌ಐಟಿಯು ಮಾಧ್ಯಮಗಳು ಬಿಂಬಿಸಿದಂತೆ ಯಾವುದೇ ತೆರನಾದ ನೋಟಿಸ್‌ ಜಾರಿ ಮಾಡಿಲ್ಲ. ಮಾಧ್ಯಮಗಳ ವರದಿಯಿಂದ ತನಿಖಾ ಸಂಸ್ಥೆಯು ಬಂಧಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರುತ್ತಿರುವುದಾಗಿ ಭವಾನಿ ಪರ ವಕೀಲರು ಕಳೆದ ವಿಚಾರಣೆಯಲ್ಲಿ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಸಂತ್ರಸ್ತ ಮಹಿಳೆಯನ್ನು ಅಪಹರಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆ ಆರ್‌ ನಗರ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 364ಎ, 365 ಮತ್ತು 34ರ ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಇದರಲ್ಲಿ ಭವಾನಿ ಪತಿ ಎಚ್‌ ಡಿ ರೇವಣ್ಣ ಮೊದಲ ಆರೋಪಿಯಾಗಿದ್ದು, ಸತೀಶ ಬಾಬಣ್ಣ ಎರಡನೇ ಆರೋಪಿಯಾಗಿದ್ದಾರೆ.