Karnataka High Court 
ಸುದ್ದಿಗಳು

ಬುದ್ದಿಮಾಂದ್ಯ ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಮಹಿಳೆಯ ಜೀವಹರಣ; ಪತಿ, ಅತ್ತೆ, ನಾದಿನಿ ಅಪರಾಧಿಗಳು ಎಂದ ಹೈಕೋರ್ಟ್‌

ಸೊಸೆಯ ಮೇಲೆ ಸೀಮೆ ಎಣ್ಣೆ ಎರಚಿ ಹತ್ಯೆಗೆ ಪ್ರಯತ್ನ ಆರೋಪ. ವಿಚಾರಣಾಧೀನ ನ್ಯಾಯಾಲಯವು ಕೊಲೆ ಆರೋಪದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದನ್ನು ಎತ್ತಿ ಹಿಡಿದಿರುವ ಹೈಕೋರ್ಟ್‌.

Bar & Bench

ಇಬ್ಬರು ಬುದ್ದಿಮಾಂದ್ಯ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ಪತ್ನಿಗೆ ಸತತ ಕಿರುಕುಳ, ಅವಮಾನ ಮಾಡಿದ್ದ ಆರೋಪಗಳನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿದ್ದು ಪತಿ, ಆತನ ತಾಯಿ ಮತ್ತು ಸಹೋದರಿಯನ್ನು ಅಪರಾಧಿಗಳು ಎಂದು ಘೋಷಿಸಿ ಅವರಿಗೆ ಶಿಕ್ಷೆ ವಿಧಿಸಿದೆ (ಕರ್ನಾಟಕ ರಾಜ್ಯ ವರ್ಸಸ್‌ ಮಾದಮ್ಮ ಮತ್ತು ಇತರರು).

ಮಂಡ್ಯದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಆರೋಪಿಗಳನ್ನು ಖುಲಾಸೆಗೊಳಿಸಿದ್ದ ತೀರ್ಪನ್ನು ಪ್ರಶ್ನಿಸಿ ಮಳವಳ್ಳಿ ತಾಲ್ಲೂಕಿನ ಕಿರಗಾವಲು ಪೊಲೀಸರು ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಎಸ್‌ ರಾಚಯ್ಯ ಅವರಿದ್ದ ವಿಭಾಗೀಯ ಪೀಠವು ಭಾಗಶಃ ಎತ್ತಿ ಹಿಡಿದಿದೆ.

ಇಬ್ಬರು ಬುದ್ದಿಮಾಂದ್ಯ ಹೆಣ್ಣು ಮಕ್ಕಳು ತಂದೆ ಮಾದೇಶ, ಆತನ ತಾಯಿ ಮಾದಮ್ಮ ಮತ್ತು ಸಹೋದರಿ ಮಹದೇವಮ್ಮ ಅವರ ಜೊತೆ ನೆಲೆಸಿರುವುದು ಮತ್ತು ಮಾದಮ್ಮ ಅವರಿಗೆ 70 ವರ್ಷಗಳಾಗಿರುವುದನ್ನು ಪರಿಗಣಿಸಿರುವ ನ್ಯಾಯಾಲಯವು ಸಂತ್ರಸ್ತೆ ಹೇಮಲತಾ ಅವರಿಗೆ ಕಿರುಕುಳ (498ಎ) ನೀಡಿದ ಅಪರಾಧಕ್ಕಾಗಿ ಆರೋಪಿಗಳಿಗೆ ಒಂದು ವರ್ಷ ಜೈಲು ಮತ್ತು ತಲಾ 20 ಸಾವಿರ ರೂಪಾಯಿ ದಂಡ ವಿಧಿಸಿದೆ.

“ಸಂತ್ರಸ್ತೆ ಹೇಮಲತಾ ಅವರ ಮರಣದ ವೇಳೆಯ ಹೇಳಿಕೆಗೆ ಸಂಬಂಧಿಸಿದ ಸಾಕ್ಷ್ಯಗಳು ಅನುಮಾನಾಸ್ಪದವಾಗಿವೆ. ಆದರೆ, ಸಂತ್ರಸ್ತೆಗೆ ಕಿರುಕುಳ ನೀಡಿರುವ ವಿಚಾರದಲ್ಲಿ ಸಾಕ್ಷ್ಯಗಳು ಸರಿಯಾಗಿವೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

“ಬುದ್ದಿಮಾಂದ್ಯ ಹೆಣ್ಣು ಮಕ್ಕಳಿಗೆ ಸಂತ್ರಸ್ತೆ ಹೇಮಲತಾ ಜನ್ಮ ನೀಡಿದ್ದಕ್ಕಾಗಿ ಅವರಿಗೆ ನಿರಂತರವಾಗಿ ಮಾನಸಿಕ ಮತ್ತು ದೈಹಿಕ ಕಿರುಕುಳವನ್ನು ಆರೋಪಿಗಳಾದ ಮಾದಮ್ಮ ಮತ್ತು ಮಹದೇವಮ್ಮ ಅವರು ನೀಡಿದ್ದರು ಎಂಬುದು ಪ್ರಾಸಿಕ್ಯೂಷನ್‌ ಸಾಕ್ಷ್ಯಗಳಿಂದ ರುಜುವಾತಾಗಿದೆ. ಪತ್ನಿಯನ್ನು ರಕ್ಷಿಸಬೇಕಾದ ಜವಾಬ್ದಾರಿ ಹೊಂದಿರುವ ಆರೋಪಿ ಮಾದೇಶ ಆಕೆಯ ಹೊಟ್ಟೆ ಭಾಗಕ್ಕೆ ಒದೆಯುವ ಮೂಲಕ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಪೀಠ ಹೇಳಿದೆ.

ಶಿಕ್ಷೆ ಅನುಭವಿಸಿದ್ದು, ದಂಡ ಪಾವತಿಸಬೇಕು

ಐಪಿಸಿ 498ಎ ಅಡಿ ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದ್ದು, ಪ್ರಕರಣದಲ್ಲಿ ಖುಲಾಸೆಯಾಗುವುದಕ್ಕೂ ಮುನ್ನ ಆರೋಪಿಗಳು ಸುಮಾರು ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಹೀಗಾಗಿ, ಕಿರುಕುಳ ಆರೋಪಕ್ಕೆ ಆರೋಪಿಗಳು ತಲಾ 20 ಸಾವಿರದಂತೆ ಒಟ್ಟು 60 ಸಾವಿರ ರೂಪಾಯಿ, 504ರ ಅಡಿ ಆರೋಪಕ್ಕಾಗಿ ತಲಾ ಒಂದು ಸಾವಿರದಂತೆ ಒಟ್ಟು 3 ಸಾವಿರ ರೂಪಾಯಿ. ಎರಡನ್ನೂ ಸೇರಿಸಿ ಒಟ್ಟು 63 ಸಾವಿರ ರೂಪಾಯಿ ದಂಡ ಪಾವತಿಸಬೇಕಿದೆ. ಇದರ ಜೊತೆಗೆ ಪತಿ ಮಾದೇಶ ಐಪಿಸಿ 323 (ಹಲ್ಲೆ) ಅಡಿ ಅಪರಾದಕ್ಕಾಗಿ ಒಂದು ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ದಂಡದ ಮೊತ್ತದಲ್ಲಿ 33 ಸಾವಿರ ರೂಪಾಯಿಗಳನ್ನು ಮಕ್ಕಳ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು. 30 ಸಾವಿರ ರೂಪಾಯಿಗಳನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿದೆ.

ಘಟನೆಯ ಹಿನ್ನೆಲೆ: ಆರೋಪಿ ಮಾದೇಶ ಅವರನ್ನು ಸಂತ್ರಸ್ತೆ ಹೇಮಲತಾ ವಿವಾಹವಾದ ಆರು ವರ್ಷಗಳ ಬಳಿಕ ಇಬ್ಬರು ಬುದ್ದಿಮಾಂದ್ಯ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ಹೇಮಲತಾ ಅವರಿಗೆ ಆರೋಪಿಗಳಾದ ಮಾದೇಶ, ಮಾದಮ್ಮ ಮತ್ತು ಮಹದೇವಮ್ಮ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡುತ್ತಿದ್ದರು ಎಂದು ದೂರಲಾಗಿತ್ತು.

2012ರ ನವೆಂಬರ್‌ 28ರ ಸಂಜೆ 7 ಗಂಟೆ ವೇಳೆಗೆ ಮನೆಗೆ ಬಂದ ಮಾದೇಶನನ್ನು ಮನೆ ಖರ್ಚಿಗೆ ಹೇಮಲತಾ ಹಣ ಕೇಳಿದ್ದರು. ಇದಕ್ಕಾಗಿ ಇಬ್ಬರ ನಡುವೆ ಕಲಹ ನಡೆದಿದ್ದು, ಕೂಲಿ ಕೆಲಸಕ್ಕೆ ಹೋಗಿ ಹಣ ಸಂಪಾದಿಸಿ ಸಂಸಾರ ನಡೆಸುವಂತೆ ಹೇಮಲತಾಗೆ ಸೂಚಿಸಿದ್ದ ಮಾದೇಶ, ಪತ್ನಿಯ ಹೊಟ್ಟೆ ಮತ್ತು ದೇಹದ ಹಿಂದಿನ ಭಾಗದ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ, ಮಾದಮ್ಮ ಮತ್ತು ಮಹದೇವಮ್ಮ ಮನೆಗೆ ಬಂದಿದ್ದು, ಅವರು ಅವಾಚ್ಯ ಶಬ್ದಗಳಿಂದ ಹೇಮಲತಾ ಅವರನ್ನು ನಿಂದಿಸಿದ್ದರು.

ಆನಂತರ ಹೇಮಲತಾಗೆ ಅತ್ತೆ ಮಾದಮ್ಮ ಸೀಮೆ ಎಣ್ಣೆ ಎರಚಿದ್ದು, ನಾದಿನಿ ಮಹದೇವಮ್ಮ ಬೆಂಕಿ ಹಚ್ಚಿದ್ದರು. ಉರಿ ತಾಳಲಾರದೇ ಗೋಳಾಡುತ್ತಿದ್ದ ಹೇಮಲತಾಗೆ ಪತಿ ಮಾದೇಶ ನೀರು ಎರಚಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದರು. ಬಳಿಕ, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುವ ಪ್ರಯತ್ನ ಮಾಡಲಾಗಿತ್ತಾದರೂ ಹೇಮಲತಾ ಶೇ. 85ರಷ್ಟು ಸುಟ್ಟಗಾಯದಿಂದ ಸಾವನ್ನಪ್ಪಿದ್ದರು.

ಹೇಮಲತಾ ಅವರ ಮರಣಕ್ಕೂ ಮುನ್ನ ಹೇಳಿಕೆಯನ್ನು ಆಧರಿಸಿ ಆರೋಪಿಗಳಾದ ಮಾದಮ್ಮ, ಮಹದೇವಮ್ಮ ಮತ್ತು ಮಾದೇಶನ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್‌ಗಳಾದ 498ಎ, 302 (ಕೊಲೆ) ಜೊತೆಗೆ 34 ಅಡಿ ಪ್ರಕರಣ ದಾಖಲಿಸಲಾಗಿತ್ತು. ಹೇಮಲತಾ ಆತ್ಮಹತ್ಯೆ ಯತ್ನದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ನೀಡಿದ ವರದಿ ಹಾಗೂ ಕೆಲವು ಪ್ರತಿಕೂಲ ಸಾಕ್ಷ್ಯಗಳ ಹಿನ್ನೆಲೆಯಲ್ಲಿ ಆರೋಪಿಗಳನ್ನು ವಿಚಾರಣಾಧೀನ ನ್ಯಾಯಾಲಯವು ಕೊಲೆ ಆರೋಪದಿಂದ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ, ಆರೋಪಿಗಳಿಗೆ 498ಎ, 323, 302 (ಕೊಲೆ), 504ರ ಜೊತೆಗೆ 34ರ ಅಡಿ ಶಿಕ್ಷೆ ವಿಧಿಸುವಂತೆ ಕೋರಿ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಲಾಗಿತ್ತು. ಇದನ್ನು ಹೈಕೋರ್ಟ್‌ ಭಾಗಶಃ ಎತ್ತಿ ಹಿಡಿದಿದೆ.

State_of_Karnataka_Versus_Madamma_and_others.pdf
Preview