Lawyer sitting in a car, video conference hearing 
ಸುದ್ದಿಗಳು

ಕಾರಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕಲಾಪದಲ್ಲಿ ಭಾಗಿ: ವಕೀಲೆಯ ನಡೆಗೆ ಹೈಕೋರ್ಟ್‌ ಅಸಮಾಧಾನ

“ವಕೀಲರು ಈ ರೀತಿ ಕಾರಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗದಂತೆ ಅಗತ್ಯ ನಿರ್ದೇಶನ ನೀಡಬೇಕು” ಎಂದು ವಕೀಲರ ಸಂಘಕ್ಕೆ ಹೈಕೋರ್ಟ್‌ ಈ ಹಿಂದೆಯೇ ಸೂಚಿಸಿದೆ.

Bar & Bench

ಕೋವಿಡ್‌-19ರ ಲೌಕ್‌ಡೌನ್‌ ಹಿನ್ನೆಲೆಯಲ್ಲಿ 2020ರ ಮಾರ್ಚ್‌ನಿಂದ ಆರಂಭವಾದ ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಯುವ ವಿಚಾರಣಾ ಪ್ರಕ್ರಿಯೆಯ ಸೌಲಭ್ಯವನ್ನು ಕೆಲ ವಕೀಲರು ಹಗುರವಾಗಿ ಪರಿಗಣಿಸಿ ಎಲ್ಲೆಂದರಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗುತ್ತಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಬೇಸರ ವ್ಯಕ್ತಪಡಿಸಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ವಕೀಲೆಯೊಬ್ಬರು ಕಾರಿನಲ್ಲಿ ಕೂತು ವಿಚಾರಣೆಗೆ ಹಾಜರಾದ ನಡೆಗೆ ಅಸಹನೆ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು “ವಕೀಲರು ಕಾರಿನಲ್ಲಿ ಕೂತು ವಿಚಾರಣೆಗೆ ಹಾಜರಾಗುವ ವೈಖರಿಯನ್ನು ಕೈಬಿಡಬೇಕು” ಎಂದು ಮೌಖಿಕವಾಗಿ ಎಚ್ಚರಿಸಿದರು.

ಪ್ರಕರಣವನ್ನು ವಿಚಾರಣೆಗೆ ಕರೆದಾಗ, ಅರ್ಜಿದಾರರ ಪರ ವಕೀಲೆಯೊಬ್ಬರು ಹೈಕೋರ್ಟ್‌ನ ಹೊರಭಾಗದಲ್ಲಿ ಕಾರಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. “ಸ್ವಾಮಿ, ನಾನು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಇದರಿಂದ ನ್ಯಾಯಾಲಯಕ್ಕೆ ಬರಲು ತಡವಾಗಿದೆ. ವಾದ ಮಂಡಿಸುತ್ತೇನೆ, ವಿಚಾರಣೆಯನ್ನು ಕೆಲ ಕಾಲ ಮುಂದೂಡಿ” ಎಂದು ಕೋರಿದರು.

ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು “ಮೊದಲು ನೀವು ನ್ಯಾಯಾಲಯಕ್ಕೆ ಬನ್ನಿ” ಎಂದು ಕಟುವಾಗಿ ನುಡಿದು ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದರು.

“ವಕೀಲರು ಈ ರೀತಿ ಕಾರಿನಲ್ಲಿ ಕುಳಿತು ವಿಡಿಯೋ ಕಾನ್ಫರೆನ್ಸ್‌ ಮೂಲಕ ಹಾಜರಾಗದಂತೆ ವಕೀಲರಿಗೆ ಅಗತ್ಯ ನಿರ್ದೇಶನ ನೀಡಬೇಕು” ಎಂದು ವಕೀಲರ ಸಂಘಕ್ಕೆ ಹೈಕೋರ್ಟ್‌ ಈ ಹಿಂದೆಯೇ ಸೂಚಿಸಿತ್ತು. ಇದಾದ ನಂತರ ಈ ಮಾದರಿಯ ಘಟನೆಗಳು ಕಡಿಮೆಯಾಗಿದ್ದವು. ಶಿಷ್ಟಾಚಾರದ ಅನುಸಾರ ವಕೀಲರು ತಮ್ಮ ಕಚೇರಿಯಲ್ಲಿ ಕೂತು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗುವುದು ಪದ್ಧತಿಯಾಗಿದೆ.