ವಕೀಲೆಯಾಗಿರುವ ಸೊಸೆಯಿಂದ ಮೊಮ್ಮಗುವನ್ನು ತಮ್ಮ ಸುಪರ್ದಿಗೆ ಒಪ್ಪಿಸಬೇಕು ಎಂದು ಮಗುವಿನ ತಂದೆ ಕಡೆಯ ಪೋಷಕರು ಸಲ್ಲಿಸಿದ ಅರ್ಜಿಗೆ ಇತ್ತೀಚೆಗೆ ವಿರೋಧ ವ್ಯಕ್ತಪಡಿಸಿರುವ ಪಂಜಾಬ್ ಹೈಕೋರ್ಟ್ “ವಕೀಲೆಯರನ್ನು ಬೇಜವಾಬ್ದಾರಿಯುತರು ಎಂದು ಬಿಂಬಿಸುವುದು ಒಪ್ಪಲು ಯೋಗ್ಯವಾದ ಸಂಗತಿಯಲ್ಲ” ಎಂದು ಅಭಿಪ್ರಾಯಪಟ್ಟಿದೆ.
‘ಮಹಿಳಾ ವಕೀಲರನ್ನು ಜವಾಬ್ದಾರಿ ಇಲ್ಲದವರು ಎಂದು ಹಣೆಪಟ್ಟಿ ಹಚ್ಚುವುದು ಸ್ವೀಕಾರಾರ್ಹವಲ್ಲ. ಹೀಗಾಗಿ ಜೀವನ ಮತ್ತು ಸಮಾಜ ಕುರಿತು ಸಂಕುಚಿತ ಧೋರಣೆ ಇರುವ ಅಜ್ಜ/ಅಜ್ಜಿ, ಮಗುವಿನ ಸನ್ನಡತೆ ಮತ್ತು ನೈತಿಕತೆ ಉಳ್ಳ ಏಳಿಗೆ ಬಯಸುತ್ತಾರೆ ಎಂದು ನಿರೀಕ್ಷಿಸಲಾಗದು. ಮಹಿಳಾ ವಕೀಲರು ವೃತ್ತಿಪರವಾಗಿ ಮಾತ್ರ ಯಶಸ್ಸು ಗಳಿಸಿಲ್ಲ, ಬದಲಿಗೆ ಅವರು ದಿಟ್ಟ, ನಿರ್ಭೀತ ಹಾಗೂ ಯಶಸ್ವಿ ತಾಯಂದಿರು ಕೂಡ ಆಗಿದ್ದಾರೆ’ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್
ಮಗುವಿನ ತಂದೆ ಹಾಗೂ ತಾಯಿ ವಕೀಲ ವೃತ್ತಿಯಲ್ಲಿರುವುದರಿಂದ ಅವರು ಮಗುವಿನ ಕಾಳಜಿ ಮಾಡುವುದಿಲ್ಲ ಎಂದು ಮಗುವಿನ ತಂದೆ ಕಡೆಯ ಅಜ್ಜ-ಅಜ್ಜಿ ಹೇಳುತ್ತಿದ್ದಾರೆ. ಕಲುಷಿತ ಮನಸ್ಸುಗಳಷ್ಟೇ ಬೇರೆ ರೀತಿ ಅರ್ಥೈಸಿಕೊಳ್ಳಬಲ್ಲವು. ವೃತ್ತಿನಿರತರು ಕೂಡ ಒಬ್ಬ ಜವಾಬ್ದಾರಿಯುತ ತಾಯಿಯಾಗಿರುತ್ತಾರೆ ಎಂಬುದನ್ನು ನಿರ್ಲಕ್ಷಿಸಲಾಗಿದೆ ಎಂದು ನ್ಯಾ. ಅಗಸ್ಟಿನ್ ಜಾರ್ಜ್ ಮಾಸಿಹ್ ವಿವರಿಸಿದರು.
ಸಿವಿಲ್ ನ್ಯಾಯಾಧೀಶರು ಈ ಹಿಂದೆ ಅರ್ಜಿ ತಿರಸ್ಕರಿಸಿದ್ದು ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು. 1956ರ ಹಿಂದೂ ಅಪ್ರಾಪ್ತ ವಯಸ್ಕತೆ ಮತ್ತು ಪೋಷಣೆ ಕಾಯ್ದೆಯಡಿ ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು.
ವಿಚಾರಣೆ ವೇಳೆ ವ್ಯಕ್ತವಾದ ಪ್ರಮುಖ ಅಂಶಗಳು ಹೀಗಿವೆ:
ಯಾವುದೇ ಕೋರ್ಟ್ ಇರಲಿ ಮಗುವಿನ ಏಳಿಗೆ ಗಮನದಲ್ಲಿಟ್ಟುಕೊಂಡೇ ಅದು ಯಾರೊಡನೆ ಇರಬೇಕು ಎಂದು ತೀರ್ಮಾನಿಸಬೇಕಾಗುತ್ತದೆ. ಅಂತಹ ಏಳಿಗೆಯನ್ನು ಹಣ ಅಥವಾ ಭೌತಿಕ ಸೌಕರ್ಯಗಳಿಂದ ಅಳೆಯಲಾಗದು. ಬಹುಶಃ ಅರ್ಜಿದಾರರು ಈ ಅಂಶಗಳಿಗೆ ಒತ್ತು ನೀಡಿದಂತಿದೆ. ಮಗುವಿನ ಕುರಿತು ಪೋಷಕರು ಇರಿಸಿಕೊಂಡ ಪ್ರೀತಿ, ಅಕ್ಕರೆ ಹಾಗೂ ಸಹಜ ನಂಟನ್ನು ಅವರು ಮರೆತಂತಿದೆ.
ತಾಯಿ ಹೈಕೋರ್ಟಿನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ವಿಚಾರಣೆಯನ್ನು ವಿಳಂಬಗೊಳಿಸಲು ಅರ್ಜಿದಾರರು ಪ್ರಕರಣದಲ್ಲಿ ತಮ್ಮನ್ನೂ ಒಳಗೊಳ್ಳಬೇಕೆಂದು ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿದಾರರು ಪ್ರಾಮಾಣಿಕ ರೀತಿಯಲ್ಲಿ ಅರ್ಜಿ ಸಲ್ಲಿಸಿಲ್ಲ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಇದು ಉತ್ತಮ ಅಭ್ಯಾಸ ಅಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
“ಏಳಿಗೆ ಎಂಬ ಪದಕ್ಕೆ ನಿರ್ಬಂಧಿತ ಅರ್ಥ ನೀಡಬೇಕಿಲ್ಲ. ಆದರೆ ಇದನ್ನು ವಿಶಾಲ ಅರ್ಥದಲ್ಲಿ ಓದಿಕೊಳ್ಳಬೇಕಿದೆ. ಮಗುವಿನ ಹಿತದೃಷ್ಟಿಯಿಂದ ಯಾರು ಉತ್ತಮ ರೀತಿಯಲ್ಲಿ ಏಳಿಗೆಯನ್ನು ಉತ್ತೇಜಿಸುತ್ತಾರೆ ಎಂಬುದನ್ನು ನ್ಯಾಯಾಲಯ ತೀರ್ಮಾನಿಸಬೇಕಿದೆ.”ಪಂಜಾಬ್- ಹರಿಯಾಣ ಹೈಕೋರ್ಟ್