Sadhguru, Supreme Court 
ಸುದ್ದಿಗಳು

ಹೇಬಿಯಸ್‌ ಕಾರ್ಪಸ್‌ ಪ್ರಕರಣ: ಈಶಾ ಫೌಂಡೇಶನ್‌ ವಿರುದ್ಧದ ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂ ಕೋರ್ಟ್‌

“ಇಬ್ಬರು ಮಹಿಳೆಯರೊಂದಿಗೆ ತಾವು ಸಮಾಲೋಚನೆ ನಡೆಸಿದ್ದು, ಅವರಿಬ್ಬರೂ ಸ್ವಇಚ್ಛೆಯಿಂದ ಈಶಾ ಫೌಂಡೇಶನ್‌ನಲ್ಲಿರುವುದಾಗಿ ತಿಳಿಸಿರುವುದರಿಂದ ಹೇಬಿಯಸ್‌ ಕಾರ್ಪಸ್‌ ಅರ್ಜಿ ಇತ್ಯರ್ಥಪಡಿಲಾಗುತ್ತಿದೆ" ಎಂದು ತಿಳಿಸಿದ ಸಿಜೆಐ.

Bar & Bench

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಅಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್‌ ಅವರ ಈಶಾ ಫೌಂಡೇಶನ್‌ನಲ್ಲಿ ಉಳಿಯುವಂತೆ ತಮ್ಮ ಇಬ್ಬರು ಪುತ್ರಿಯರ ಮನವೊಲಿಸಲಾಗಿದೆ ಎಂದು ಆಕ್ಷೇಪಿಸಿ ಅವರ ತಂದೆ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ಇತ್ಯರ್ಥಪಡಿಸಿದೆ.

ಮಹಿಳೆಯರಿಬ್ಬರೂ ವಯಸ್ಕರಾಗಿದ್ದು, ಅವರು ಸ್ವಇಚ್ಛೆಯಿಂದ ಈಶಾ ಯೋಗ ಕೇಂದ್ರದಲ್ಲಿ ಉಳಿದಿದ್ದೇವೆ ಎಂದು ಹೇಳಿರುವುದರಿಂದ ಹೇಬಿಯಸ್‌ ಕಾರ್ಪಸ್‌ ಅರ್ಜಿಯ ಉದ್ದೇಶ ಈಡೇರಿದಂತಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ತ್ರಿಸದಸ್ಯ ಪೀಠ ಹೇಳಿದೆ.

ಎಂಟು ವರ್ಷಗಳ ಹಿಂದೆ ಇಬ್ಬರು ಮಹಿಳೆಯರ ತಾಯಿ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಈಗ ತಂದೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವಿಚಾರಣೆಯಲ್ಲಿ ಮಹಿಳೆಯರ ಜೊತೆ ನ್ಯಾಯಾಲಯ ಸಂವಾದ ನಡೆಸಿದೆ ಎಂದು ಪೀಠವು ವಿವರಿಸಿತು.

“ಇಬ್ಬರು ಮಹಿಳೆಯರ ಜೊತೆ ಸಮಾಲೋಚನೆಯನ್ನು ನಡೆಸಿ ದಾಖಲಿಸಿಕೊಂಡಿದ್ದೇವೆ. ತಾವು ಸ್ವಇಚ್ಛೆಯಿಂದ ಈಶಾ ಫೌಂಡೇಶನ್‌ನಲ್ಲಿ ನೆಲೆಸಿರುವುದಾಗಿ ಅವರಿಬ್ಬರೂ ಹೇಳಿದ್ದಾರೆ. ಹೀಗಾಗಿ, ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ” ಎಂದು ಸಿಜೆಐ ಹೇಳಿದ್ದಾರೆ.

“ಹಾಲಿ ಪ್ರಕರಣದಲ್ಲಿನ ಆದೇಶವು ಈಶಾ ಫೌಂಡೇಶನ್‌ ವಿರುದ್ಧ ಪೊಲೀಸರು ನಡೆಸುತ್ತಿರುವ ಯಾವುದೇ ತನಿಖೆಗೆ ಅಡ್ಡಿಯಾಗುವುದಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

“ವಯಸ್ಕ ಮಕ್ಕಳ ವಿಶ್ವಾಸವನ್ನು ನೀವು ಗಳಿಸಬೇಕು. ಗೋಡೆಯ ಮೇಲಿನ ಬರಹವನ್ನು ನೀವು ಸ್ಪಷ್ಟವಾಗಿ ಈಗ ಕಾಣಬಹುದಾಗಿದೆ” ಎಂದು ಮಹಿಳೆಯರ ತಂದೆಗೆ ಸಿಜೆಐ ಹೇಳಿದರು.

ಹೇಬಿಯಸ್‌ ಕಾರ್ಪಸ್‌ ಅರ್ಜಿಯ ವಿಚಾರಣೆ ವೇಳೆ ಮದ್ರಾಸ್‌ ಹೈಕೋರ್ಟ್‌, ಈಶಾ ಫೌಂಡೇಷನ್‌ ವಿರುದ್ಧ ಇರುವ ಎಲ್ಲ ಕ್ರಿಮಿನಲ್‌ ಪ್ರಕರಣಗಳ ಪಟ್ಟಿ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತ್ತು. ಈ ಕ್ರಮದ ಔಚಿತ್ಯದ ಬಗ್ಗೆ ಇಂದಿನ ಆದೇಶದ ವೇಳೆ ಸುಪ್ರೀಂ ಕೋರ್ಟ್‌ ಪರೋಕ್ಷವಾಗಿ ಅಸಮ್ಮತಿ ಸೂಚಿಸಿತು.

ಪ್ರಕ್ರಿಯೆ ಮುಕ್ತಾಯಗೊಳಿಸುವ ವೇಳೆ ಪೀಠವು, "ಹೇಬಿಯಸ್‌ ಕಾರ್ಪಸ್‌ ಅರ್ಜಿ ಹೊರತುಪಡಿಸಿ ನಾವು ಬೇರೆ ಯಾವುದರ ಬಗ್ಗೆಯೂ ಪ್ರತಿಕ್ರಿಯಿಸಿಲ್ಲ. ಹೈಕೋರ್ಟ್‌ ಸಹ ಹಾಗೆ ಮಾಡಬಾರದಿತ್ತು. ಇದನ್ನು ವಿಸ್ತರಿಸಿದರೆ ಮೂರನೇ ವ್ಯಕ್ತಿ ಬಳಕೆ ಮಾಡುವ ಸಾಧ್ಯತೆ ಇದೆ” ಎಂದು ಹೇಳಿತು. ಮದ್ರಾಸ್‌ ಹೈಕೋರ್ಟ್‌ ಅಂತಹ ಸಾಮಾನ್ಯ ನಿರ್ದೇಶನವನ್ನು ನೀಡಬಾರದಿತ್ತು ಎಂದಿತು.