ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ (ಬೆಸ್ಕಾಂ) ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಸಹಾಯಕ ಎಂಜಿನಿಯರ್ ವೈ ಎಚ್ ಪಿ ಯತೀಶ ವಿರುದ್ಧ ಲಂಚ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ. ಲಂಚದ ಬೇಡಿಕೆ ಮತ್ತು ಸ್ವೀಕಾರ ಸಾಬೀತುಪಡಿಸಲು ದೂರುದಾರರಿಗೆ ಆಗಬೇಕಾಗಿರುವ ಯಾವ ಕೆಲಸವೂ ಅಧಿಕಾರಿ ಬಳಿ ಬಾಕಿ ಇಲ್ಲ ಎಂಬುದು ಅಪ್ರಸ್ತುತ ಎಂದು ನ್ಯಾಯಾಲಯ ಹೇಳಿದೆ.
ಎಂಜಿನಿಯರ್ ಎನ್ ಎಚ್ ಪಿ ಯತೀಶ ತಮ್ಮ ವಿರುದ್ಧದ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬೀಳುವುದಕ್ಕೂ ಮುನ್ನ ನಡೆದಿರುವ ಬೆಳವಣಿಗೆಗಳು ಮತ್ತು 3.8 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿರುವುದು ಲಂಚಕ್ಕೆ ಬೇಡಿಕೆ ಇಡಲಾಗಿತ್ತು ಎಂಬುದನ್ನು ಮೇಲ್ನೋಟಕ್ಕೆ ದೃಢಪಡಿಸುತ್ತದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
“ಒಂದು ವೇಳೆ ಅರ್ಜಿದಾರರು ಹಣಕ್ಕೆ ಬೇಡಿಕೆ ಇಟ್ಟಿಲ್ಲ ಎಂದಾದರೆ ಏಕೆ ದೂರುದಾರರು ಹಣವನ್ನು ತೆಗೆದುಕೊಂಡು ವೆಂಕಟೇಶ್ವರ ಸ್ವೀಟ್ ಮೀಟ್ ಸ್ಟಾಲ್ ಬಳಿ ಬರುತ್ತಿದ್ದರು? ಮೇಲ್ನೋಟಕ್ಕೆ ಲಂಚಕ್ಕೆ ಬೇಡಿಕೆಯೊಡ್ಡಿರುವುದು ಸ್ಪಷ್ಟವಾಗುತ್ತದೆ. ಅರ್ಜಿದಾರರ ಕಾರಿನಲ್ಲಿ ಹಣ ಸಿಕ್ಕಿರುವುದು ಸ್ಪಷ್ಟವಾಗಿದೆ. ದೂರುದಾರರ ಬಳಿ ಹಣ ಇದ್ದಿದ್ದು ಮತ್ತು ಅರ್ಜಿದಾರರು ಅದನ್ನು ಪಡೆದುಕೊಳ್ಳಬೇಕಾದರೆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.
“ಫಿನಾಲ್ಪಥಲೀನ್ (phenolphthalein) ಪರೀಕ್ಷೆಯಲ್ಲಿ ಅರ್ಜಿದಾರರ ಕೈಗಳು ಗುಲಾಬಿ ಬಣ್ಣಕ್ಕೆ ಬದಲಾಗಿವೆ. ಸ್ವಾಬ್ ಪರೀಕ್ಷೆಯನ್ನೂ ಸಹ ಮಾಡಲಾಗಿದೆ. ಎಲ್ಲಾ ರೀತಿಯಲ್ಲೂ ಮೇಲ್ನೋಟಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮತ್ತು ಸ್ವೀಕರಿಸುವುದು ಕಂಡು ಬಂದಿದೆ. ಹೀಗಾಗಿ, ಅರ್ಜಿದಾರರ ವಿರುದ್ಧ ತನಿಖೆಯಲ್ಲಿ ಹಸ್ತಕ್ಷೇಪ ಮಾಡಲಾಗದು” ಎಂದು ಪೀಠ ಹೇಳಿದೆ.
ಯತೀಶ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಂದೇಶ್ ಚೌಟ ಅವರು “ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆ ಸೆಕ್ಷನ್ 7(ಎ) ಅಡಿ ಯತೀಶ ಅವರ ವಿರುದ್ಧ ಲಂಚಕ್ಕೆ ಬೇಡಿಕೆ ಮತ್ತು ಸ್ವೀಕಾರಕ್ಕೆ ಯಾವುದೇ ಸೂಕ್ತ ಸಾಕ್ಷ್ಯಾಧಾರವಿಲ್ಲ. ದೂರುದಾರರ ಯಾವ ಕೆಲಸವೂ ಯತೀಶ್ ಅವರ ಬಳಿ ಬಾಕಿ ಇರಲಿಲ್ಲ. ಟ್ರ್ಯಾಪ್ ನಡೆದಿರುವ ದಿನ ಯತೀಶ ಅವರು ಯಾವುದೇ ಬೇಡಿಕೆ ಇಟ್ಟಿರಲಿಲ್ಲ”ಎಂದು ವಾದಿಸಿದ್ದರು. ಆದರೆ, ನ್ಯಾಯಾಲಯ ಆ ವಾದ ತಿರಸ್ಕರಿಸಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ವೆಂಕಟೇಶ್ ಮತ್ತು ಅಜಯ್ ಕುಮಾರ್ ಎಂಬುವರಿಗೆ ಸೇರಿದ ಮನೆಗಳಿಗೆ ವಿದ್ಯುತ್ ಸಂಪರ್ಕ ಕೋರಿ ಶ್ರೀ ಚಕ್ರ ಎಲೆಕ್ಟ್ರಿಕಲ್ಸ್‌ನ ವರ್ಕ್ ಇನ್‌ಸ್ಪೆಕ್ಟರ್ ಎನ್ ಚಂದನ್ ಕುಮಾರ್ 2024ರ ಫೆಬ್ರವರಿ 9ರಂದು ಅರ್ಜಿ ಸಲ್ಲಿಸಿದ್ದರು. ಆನಂತರ 2024ರ ಫೆಬ್ರವರಿ 22ರಂದು ಎಂಜಿನಿಯರ್ ಯತೀಶ್, ಚಂದನ್ ಕುಮಾರ್ ಅವರನ್ನು ಸಂಪರ್ಕಿಸಿ, ಸತೀಶ್ ಎಂಬುವರ ಜೊತೆ ಮಾತನಾಡುವಂತೆ ಸೂಚನೆ ನೀಡಿದ್ದರು. ಫೆಬ್ರವರಿ 26ರಂದು ಸತೀಶ್ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು.
ಹೋಟೆಲ್‌ನಲ್ಲಿ ಮಾತುಕತೆ ನಂತರ ಲಂಚದ ಮೊತ್ತವನ್ನು 3.8 ಲಕ್ಷ ರೂಪಾಯಿಗೆ ಇಳಿಸಲಾಗಿತ್ತು. ಆ ಕುರಿತು ಸಂಭಾಷಣೆ ವಿವರಗಳು ದೂರುದಾರರಾದ ಚಂದನ್ ಕುಮಾರ್ ಅವರ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದವು. 2024ರ ಏಪ್ರಿಲ್ 8ರಂದು ಕೆಪಿಟಿಸಿಎಲ್ ಕಚೇರಿಯ ಹಿಂಭಾಗದ ಬ್ರಿಗೇಡ್ ಮೈದಾಸ್ ಬಳಿ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ವೆಂಕಟೇಶ್ವರ ಸ್ವೀಟ್ ಮೀಟ್ ಸ್ಟಾಲ್ ಬಳಿ ಹಣವನ್ನು ಹಸ್ತಾಂತರಿಸುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಣವನ್ನು ಆರೋಪಿಯ ವಾಹನದಿಂದ ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು.