Supreme Court, Justice DY Chandrachud
Supreme Court, Justice DY Chandrachud  
ಸುದ್ದಿಗಳು

ಪ್ರಾದೇಶಿಕ ಭಾಷೆಗಳಲ್ಲಿ ನ್ಯಾಯಾಲಯದ ವಿಚಾರಣೆಯ ಲಿಪ್ಯಂತರ ಲಭ್ಯವಾಗುವಂತೆ ಮಾಡುವ ಕೆಲಸ ಪ್ರಗತಿಯಲ್ಲಿದೆ: ಸಿಜೆಐ

Bar & Bench

ನ್ಯಾಯಾಲಯದ ವಿಚಾರಣೆಯ ವಿವರಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮಗ್ನವಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಮಂಗಳವಾರ ಹೇಳಿದ್ದಾರೆ.

ಸಲಿಂಗ ವಿವಾಹ ಪ್ರಕರಣದ ಎಂಟನೇ ದಿನದ ವಿಚಾರಣೆ ವೇಳೆ  ಸಿಜೆಐ ಅವರು ನೇರ ಪ್ರಸಾರದಿಂದಾಗಿ ನ್ಯಾಯಾಲಯದ ಕಲಾಪ ಜನರ ಮನೆ- ಮನಗಳಿಗೆ ತಲುಪಿದೆ ಎಂದರು.

ಆದರೆ ನ್ಯಾಯಾಲಯದ ಕಲಾಪಗಳನ್ನು ಇಂಗ್ಲಿಷ್‌ನಲ್ಲಿ ನಡೆಸುವುದರಿಂದ ಕೆಲವು ಪ್ರದೇಶಗಳ ಜನರಿಗೆ ಅವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರಬಹುದು ಎಂದು ಹಿರಿಯ ವಕೀಲ ರಾಕೇಶ್ ದ್ವಿವೇದಿ ಆತಂಕ ವ್ಯಕ್ತಪಡಿಸಿದರು.

ಇದಕ್ಕೆ ತಲೆದೂಗಿದ ಸಿಜೆಐ ಪ್ರಾದೇಶಿಕ ಭಾಷೆಗಳಲ್ಲಿ ಪ್ರತಿಗಳು ಕೂಡಲೇ  ಲಭ್ಯವಾಗುವಂತೆ ಮಾಡಲು ಸುಪ್ರೀಂ ಕೋರ್ಟ್ ಕೆಲಸ ಮಾಡುತ್ತಿದೆ ಎಂದು ಭರವಸೆ ನೀಡಿದರು. "ಸುಪ್ರೀಂ ಕೋರ್ಟ್‌ ಇದನ್ನು ಗಮನದಲ್ಲಿರಿಸಿಕೊಂಡಿದೆ. ವಿಚಾರಣೆಯಾದ ತಕ್ಷಣವೇ ಪ್ರಾದೇಶಿಕ ಭಾಷೆಗಳಲ್ಲಿಯೂ ಲಿಪ್ಯಂತರ ಲಭ್ಯವಾಗುವಂತೆ ಮಾಡಲು ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಅವರು ಹೇಳಿದರು.

ನ್ಯಾಯಾಲಯ ಕಲಾಪಗಳು ನೇರ ಪ್ರಸಾರವಾಗುತ್ತಿರುವಂತೆಯೇ ವಿಚಾರಣೆಯ ವಿವರಗಳನ್ನು ಲಿಪ್ಯಂತರಗೊಳಿಸುವುದಕ್ಕಾಗಿ ಸುಪ್ರೀಂ ಕೋರ್ಟ್‌ ಈ ವರ್ಷದ ಫೆಬ್ರವರಿ 21ರಿಂದ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌) ಹಾಗೂ ಸ್ವಾಭಾವಿಕ ಭಾಷಾ ಸಂಸ್ಕರಣೆ ನಡೆಸುವ ತಂತ್ರಜ್ಞಾನವನ್ನು ಬಳಸಲಾರಂಭಿಸಿತ್ತು.

ಸಿಜೆಐ ಅವರು ಕಲಾಪ ನಡೆಸುವ ನ್ಯಾಯಕೋಣೆಯಲ್ಲಿ ವಕೀಲರಿಗೆ ಅಭಿಮುಖವಾಗಿ ನ್ಯಾಯಾಲಯ ಪ್ರಕ್ರಿಯೆಗಳ ನೇರ ಲಿಪ್ಯಂತರ ಪ್ರದರ್ಶಿಸುವ ಪರದೆಯನ್ನು ಇರಿಸಲಾಗಿದೆ. ಲಿಪ್ಯಂತರ ಪ್ರತಿಗಳನ್ನು ನ್ಯಾಯಾಲಯದ ಜಾಲತಾಣದಲ್ಲಿಯೂ ಪ್ರಕಟಿಸಲಾಗುತ್ತಿದೆ.