Madurai Bench of Madrac HC
Madurai Bench of Madrac HC Madras High Court website
ಸುದ್ದಿಗಳು

ದೇವರನ್ನು ಪೂಜಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ: ಮುಚ್ಚಿರುವ ಮಧುರೈ ದೇವಸ್ಥಾನದ ಕುರಿತು ಮದ್ರಾಸ್‌ ಹೈಕೋರ್ಟ್‌

Bar & Bench

ದೇವರನ್ನು ಪೂಜಿಸುವ ಹಕ್ಕು ಪ್ರತಿ ವ್ಯಕ್ತಿಗೆ ಇದೆ ಎಂದು ಹೇಳಿರುವ ಮದ್ರಾಸ್‌ ಹೈಕೋರ್ಟ್‌, ಪಕ್ಷಕಾರರ ನಡುವಿನ ವೈಯಕ್ತಿಕ ವಿವಾದದಿಂದಾಗಿ ದಶಕಗಳಿಂದ ಮುಚ್ಚಿರುವ ಮಧುರೈ ದೇವಸ್ಥಾನದ ಚಟುವಟಿಕೆಗಳ ಕುರಿತು ವಿಚಾರಣೆ ನಡೆಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ.

ಮಧುರೈ ದೇವಸ್ಥಾನವು ತಮ್ಮ ಪೂರ್ವಜರಿಗೆ ಸೇರಿದ್ದು ಎಂದು ಸ್ಥಳೀಯ ನಿವಾಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ಕುಮಾರೇಶ್‌ ಬಾಬು ನೇತೃತ್ವದ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠವು ನಡೆಸಿತು.

ಇದೇ ಅಕ್ಟೋಬರ್‌ 7ರಿಂದ ದೇವಸ್ಥಾನವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುವುದು ಎಂದು ದೇವಸ್ಥಾನದ ಉಸ್ತುವಾರಿಗೆ ಹೈಕೋರ್ಟ್‌ ನೇಮಿಸಿರುವ ವ್ಯಕ್ತಿ ಪ್ರಕಟಣೆ ಹೊರಡಿಸಿರುವುದನ್ನು ಅರ್ಜಿದಾರ ಕೆ ಸೀನಿ ಥೇವರ್‌ ಪ್ರಶ್ನಿಸಿದ್ದಾರೆ. ತಮ್ಮ ಸಮುದಾಯದ ಕೆಲವರ ನಡುವಿನ ವೈಯಕ್ತಿಕ ಸಮಸ್ಯೆಯಿಂದಾಗಿ 2011ರಿಂದ ದೇವಸ್ಥಾನವನ್ನು ಮುಚ್ಚಲಾಗಿದೆ ಎಂದು ಥೇವರ್‌ ಅರ್ಜಿಯಲ್ಲಿ ವಿವರಿಸಿದ್ದಾರೆ.

ದೇವಸ್ಥಾನ ತೆರೆಯುವ ಕುರಿತು ಉಸ್ತುವಾರಿಯು ಪ್ರಕಟಣೆ ಹೊರಡಿಸುವ ಅಧಿಕಾರ ಹೊಂದಿಲ್ಲ ಎಂದಿರುವ ನ್ಯಾಯಾಲಯವು ಇದೇ ವೇಳೆ ದೇವಸ್ಥಾನವು ಜನರು ತಮ್ಮ ದೇವರನ್ನು ಆರಾಧಿಸುವ ಸ್ಥಳವಾಗಿದ್ದು, ವೈಯಕ್ತಿಕ ಕಾರಣಗಳಿಗಾಗಿ ಅದನ್ನು ಮುಚ್ಚಲಾಗದು ಎಂದು ಆದೇಶದಲ್ಲಿ ಹೇಳಿದೆ.

“ತಮ್ಮ ವೈಯಕ್ತಿಕ ನಂಬಿಕೆಯ ಆಧಾರದಲ್ಲಿ ದೇವರನ್ನು ಪೂಜಿಸುವ ಹಕ್ಕನ್ನು ಪ್ರತಿಯೊಬ್ಬರೂ ಹೊಂದಿದ್ದು, ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆ ಅನ್ವಯ ದೇವಸ್ಥಾನದ ಚಟುವಟಕೆಗಳ ಕುರಿತು ತನಿಖೆ ನಡೆಸಲು ಮೊದಲನೇ ಪ್ರತಿವಾದಿ ಇಲಾಖೆಗೆ ನಿರ್ದೇಶಿಸುವುದು ಸೂಕ್ತವಾಗಿದೆ. ಪಕ್ಷಕಾರರ ಹಕ್ಕುಗಳನ್ನು ತುರ್ತಾಗಿ ಕಾನೂನಿನ ಅನ್ವಯ ನಿರ್ಧರಿಸಬೇಕು” ಎಂದು ಪೀಠ ಆದೇಶ ಮಾಡಿದೆ.