Twitter logo and Karnataka High Court 
ಸುದ್ದಿಗಳು

ವೈಯಕ್ತಿಕ ಖಾತೆ ನಿರ್ಬಂಧ: ಟ್ವಿಟರ್‌ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಎಕ್ಸ್‌ ಕಾರ್ಪ್‌

Bar & Bench

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ (ಟ್ವಿಟರ್‌) ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿಯು ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಕಾಲಮಿತಿಯಲ್ಲಿ ಟ್ವಿಟರ್‌ ಖಾತೆಗಳನ್ನು ನಿರ್ಬಂಧಿಸುವ ಕೇಂದ್ರ ಸರ್ಕಾರದ ಬೇಡಿಕೆಗೆ ಸೂಕ್ತ ಕಾರಣ ನೀಡಿಲ್ಲ ಎಂದು ಎಕ್ಸ್‌ ಕಾರ್ಪ್‌ಗೆ ₹50 ಲಕ್ಷ ದಂಡವನ್ನು ವಿಧಿಸಿ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ಜೂನ್‌ 30ರಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

ಸಕಾರಣ ನೀಡದೇ ಕೇಂದ್ರ ಸರ್ಕಾರದ ಖಾತೆ ನಿರ್ಬಂಧ ಆದೇಶವನ್ನು ಏಕಸದಸ್ಯ ಪೀಠವು ಎತ್ತಿ ಹಿಡಿದಿರುವುದು ಕೇಂದ್ರ ಸರ್ಕಾರವು ಸ್ವೇಚ್ಛೆಯಿಂದ ನಡೆದುಕೊಳ್ಳಲು ಅನುಮತಿಸಿದಂತಾಗುತ್ತದೆ ಎಂದು ಮೇಲ್ಮನವಿಯಲ್ಲಿ ಎಕ್ಸ್‌ ಕಾರ್ಪ್‌ ಆಕ್ಷೇಪಿಸಿದೆ.

“ಆಕ್ಷೇಪಾರ್ಹ ಆದೇಶವು ಜಾರಿಯಾದರೆ ಪ್ರತಿವಾದಿಗಳು ಯಾವುದೇ ಕಾರಣ ನೀಡದೇ ಸ್ವೇಚ್ಛೆಯಿಂದ ನಿರ್ಬಂಧ ಆದೇಶ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇದು ಸೆಕ್ಷನ್‌ 69ಎ(1) ಮತ್ತು ಶ್ರೇಯಾ ಸಿಂಘಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಗುರುತಿಸಲ್ಪಟ್ಟ ಅಗತ್ಯತೆ ಮತ್ತು ಸುರಕ್ಷತೆಗಳನ್ನು ಉಲ್ಲಂಘನೆಯಾಗುತ್ತದೆ. ಆಕ್ಷೇಪಾರ್ಹ ಆದೇಶ ಜಾರಿಯಾದರೆ ಬಳಕೆದಾರರ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ. ನಿರ್ಬಂಧ ಆದೇಶವು ಗಂಭೀರ ಕ್ರಮವಾಗಿದ್ದು, ಅದು ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡುತ್ತದೆ ಎಂದು ಪ್ರತಿವಾದಿಗಳೇ ಹೇಳಿದ್ದಾರೆ” ಎಂದು ಮೇಲ್ಮನವಿಯಲ್ಲಿ ವಿವರಿಸಲಾಗಿದೆ.

“ನಿರ್ಬಂಧ ಆದೇಶವು ಸೆಕ್ಷನ್‌ 69ಎ ಉಲ್ಲಂಘಿಸಿದರೂ ಬೃಹತ್‌ ಮೊತ್ತವನ್ನು ದಂಡದ ರೂಪದಲ್ಲಿ ವಿಧಿಸಿರುವುದು ನ್ಯಾಯದಾನಕ್ಕಾಗಿ ನ್ಯಾಯಾಲಯದ ಕದತಟ್ಟುವ ಮೇಲ್ಮನವಿದಾರರು ಅಥವಾ ಬೇರಾವುದೇ ಮಧ್ಯಸ್ಥಿಕೆದಾರರನ್ನು ಅಧೀರರನ್ನಾಗಿಸಲಿದೆ” ಎಂದು ವಿವರಿಸಲಾಗಿದೆ.

ಏಕಸದಸ್ಯ ಪೀಠದ ಆದೇಶವನ್ನು ಬದಿಗೆ ಸರಿಸುವುದರ ಜೊತೆಗೆ ಆಗಸ್ಟ್‌ 14ರ ಒಳಗೆ ದಂಡದ ಮೊತ್ತವನ್ನು ಪಾವತಿಸಬೇಕಿರುವುದರಿಂದ ಅದಕ್ಕೆ ತಡೆ ನೀಡುವಂತೆ ಮಧ್ಯಂತರ ಪರಿಹಾರ ಕೋರಲಾಗಿದೆ.

ಪೂವಯ್ಯ ಮತ್ತು ಕಂಪೆನಿಯ ವಕೀಲರಾದ ಮನು ಕುಲಕರ್ಣಿ ಅವರ ಮೂಲಕ ಮೇಲ್ಮನವಿ ಸಲ್ಲಿಸಲಾಗಿದೆ.