Karnataka High Court, X 
ಸುದ್ದಿಗಳು

ಟ್ವೀಟ್‌ಗಳನ್ನು ತೆಗೆಯುವಂತೆ ಸಹಯೋಗ್‌ ಪೋರ್ಟಲ್‌ ಮಾಡಿರುವ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಕದತಟ್ಟಿದ ಎಕ್ಸ್‌ ಕಾರ್ಪ್‌

ದೆಹಲಿ ರೈಲ್ವೆ ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಬಳಿಕ ರೈಲ್ವೆ ಇಲಾಖೆಯು ಹಲವು ಟ್ವೀಟ್‌ಗಳನ್ನು ತೆಗೆಯುವಂತೆ ಆದೇಶ ಮಾಡಿದ ಬಳಿಕ ಎಕ್ಸ್‌ ಕಾರ್ಪ್‌ ಅರ್ಜಿ ಸಲ್ಲಿಸಿದೆ ಎಂದು ಮೂಲಗಳು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿವೆ.

Bar & Bench

ಮಾಹಿತಿ ನಿರ್ಬಂಧ ಮಾಡುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಆದೇಶಿಸಲು ಕೇಂದ್ರ ಸರ್ಕಾರವು ಸಹಯೋಗ್‌ ಪೋರ್ಟಲ್‌ ಆರಂಭಿಸಿರುವುದನ್ನು ಹಾಗೂ ಅದನ್ನು ಬಳಸುತ್ತಿರುವುದನ್ನು ಪ್ರಶ್ನಿಸಿ ಎಕ್ಸ್‌ ಕಾರ್ಪ್‌ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 69ಎ ಅಡಿ ಇರುವ ಮಾರ್ಗಸೂಚಿಗಳನ್ನು ಪಾಲಿಸದೇ ಮಾಹಿತಿ ನಿರ್ಬಂಧ ಆದೇಶ ಮಾಡಲು ಸಹಯೋಗ್‌ ಸಹಕರಿಸುತ್ತದೆ.

ಸಹಯೋಗ್‌ ಪೋರ್ಟಲ್‌ ಮತ್ತು ಕೇಂದ್ರ ಸರ್ಕಾರದ ಸಂಬಂಧಿತ ನಡೆಯು ಐಟಿ ಕಾಯಿದೆ ಅಡಿ ರೂಪಿಸಲಾಗಿರುವ ಶಾಸನಬದ್ಧ ಚೌಕಟ್ಟು ಮತ್ತು ಶ್ರೇಯಾ ಸಿಂಘಾಲ್‌ ವರ್ಸಸ್‌ ಭಾರತ ಸರ್ಕಾರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನಿಂದ ನುಣಿಚುಕೊಳ್ಳುವಂತಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ. ಅರ್ಜಿಯು ಮಾರ್ಚ್‌ 17ರಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದು, ಅದನ್ನು ಮಾರ್ಚ್‌ 27ಕ್ಕೆ ಮುಂದೂಡಲಾಗಿದೆ.

“ನವದೆಹಲಿ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದ ಸಂಬಂಧ ಮಾಡಲಾಗಿದ್ದ ಹಲವು ಪೋಸ್ಟ್‌ಗಳನ್ನು ತೆಗೆಯುವಂತೆ ಕೇಂದ್ರ ರೈಲ್ವೆ ಸಚಿವಾಲಯವು ನಿರ್ದೇಶಿಸಿದ ಬಳಿಕ ಅರ್ಜಿ ಸಲ್ಲಿಸಲಾಗಿದೆ” ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ಮೂಲಗಳು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿವೆ.

ಮಾಹಿತಿ ನಿರ್ಬಂಧಿಸಲು ಕೇಂದ್ರ ಸರ್ಕಾರವು ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ 79(3)(b) ಅನ್ನು ಬಳಕೆ ಮಾಡುತ್ತಿರುವುದರ  ಸಂಬಂಧ ಎಲಾನ್‌ ಮಸ್ಕ್‌ ಮಾಲೀಕತ್ವದ ಕಂಪನಿಯು ಹಲವು ಗಂಭೀರ ವಿಚಾರಗಳನ್ನು ಅರ್ಜಿಯಲ್ಲಿ ಪ್ರಸ್ತಾಪಿಸಿದೆ. ಸೆಕ್ಷನ್‌ 79(3)(b)ರ ಅಡಿ ಮೂರನೇ ವ್ಯಕ್ತಿಗಳು ಪೋಸ್ಟ್‌ ಮಾಡುವುದರ ಹೊಣೆಗಾರಿಕೆಯಿಂದ ಮಧ್ಯಸ್ಥಿಕೆ ಕಂಪನಿಗಳಿಗೆ ವಿನಾಯಿತಿ ಕಲ್ಪಿಸುತ್ತದೆ. ಹೀಗಾಗಿ, ಮಾಹಿತಿ ನಿರ್ಬಂಧಿಸಲು ಕಾನೂನುಬಾಹಿರವಾಗಿ ಪರ್ಯಾಯ ವ್ಯವಸ್ಥೆ ರೂಪಿಸಲು ಬಳಕೆ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಲಾಗಿದೆ.

ಮಾಹಿತಿ ನಿರ್ಬಂಧಿಸುವ ಆದೇಶ ಮಾಡಲು ಕಾಯಿದೆ ಸೆಕ್ಷನ್‌ 79(3)(b) ಸರ್ಕಾರಕ್ಕೆ ಅನುಮತಿಸುವುದಿಲ್ಲ. ಈ ಅಧಿಕಾರ ಇರುವುದು ಐಟಿ ಕಾಯಿದೆ ಸೆಕ್ಷನ್‌ 69ಎ ಅಡಿ ಮಾತ್ರ ಎಂದು ಶ್ರೇಯಾ ಸಿಂಘಾಲ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿದ್ದಯ, ಮಾರ್ಗಸೂಚಿಗಳಿಗೆ ಬದ್ಧವಾಗಿರಬೇಕು ಎಂದಿದೆ.

ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು (ಮೈಟಿ) ಪೊಲೀಸರನ್ನೂ ಒಳಗೊಂಡಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳಿಗೆ ಸೆಕ್ಷನ್‌ 69A ಮೀರಿ ಸೆಕ್ಷನ್‌ 79(3)(b) ಅಡಿ ಮಾಹಿತಿ ನಿರ್ಬಂಧಿಸಲು ನಿರ್ದೇಶಿಸಿದೆ ಎಂದು ಎಕ್ಸ್‌ ಆರೋಪಿಸಿದೆ. ಅಲ್ಲದೇ, ನಿರ್ಬಂಧ ಆದೇಶ ಮಾಡಲು ಸಿದ್ಧ ಮಾದರಿಯನ್ನೂ ಮೈಟಿಯು ನೀಡಿದೆ. ಇದು ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘನೆ ಎಂದು ಎಕ್ಸ್‌ ಆಕ್ಷೇಪಿಸಿದೆ.

ಅಲ್ಲದೇ, ಸೆಕ್ಷನ್‌ 79(3)(b) ಅಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ನಿರ್ಬಂಧ ಆದೇಶ ಮಾಡಲು ಅನುಮತಿಸುವ ಕೇಂದ್ರ ಗೃಹ ಇಲಾಖೆ ರೂಪಿಸಿರುವ ಸಹಯೋಗ್‌ ಪೋರ್ಟಲ್‌ ಅನ್ನೂ ಎಕ್ಸ್‌ ಪ್ರಶ್ನಿಸಿದೆ. ಸೆಕ್ಷನ್‌ 69ಎಗೆ ಪರ್ಯಾಯವಾಗಿ ಸಹಯೋಗ್‌ ಪೋರ್ಟಲ್‌ ವ್ಯವಸ್ಥೆ ರೂಪಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಲಾಗಿದೆ.

ಹೀಗಾಗಿ, ಸೆಕ್ಷನ್‌ 79(3)(b) ಮಾಹಿತಿ ನಿರ್ಬಂಧ ಆದೇಶ ಮಾಡಲು ಸರ್ಕಾರಕ್ಕೆ ಅವಕಾಶವಿಲ್ಲ. ಇದು ವಿಶೇಷವಾಗಿ ಸೆಕ್ಷನ್‌ 69Aರ ವ್ಯಾಪ್ತಿಗೆ ಒಳಪಡುತ್ತದೆ ಎಂದು ಆದೇಶಿಸಬೇಕು. ಆಕ್ಷೇಪಾರ್ಹವಾದ ಅಧಿಸೂಚನೆಯನ್ನು ವಜಾ ಮಾಡಬೇಕು ಮತ್ತು ಅಕ್ರಮ ನಿರ್ಬಂಧ ಆದೇಶ ಮತ್ತು ಪೋರ್ಟಲ್‌ ಸೆನ್ಸಾರ್‌ಶಿಪ್‌ ಸಂಬಂಧ ಎಕ್ಸ್‌ ವಿರುದ್ಧ ಪೂರ್ವಾಗ್ರಹ ಪೀಡಿತ ಕ್ರಮಕೈಗೊಳ್ಳದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಬೇಕು. ಸೆಕ್ಷನ್‌ 69Aಗೆ ವಿರುದ್ಧವಾಗಿ ಹೊರಡಿಸುವ ಆದೇಶ ಅನುಪಾಲಿಸದಿರುವುದಕ್ಕೆ ಎಕ್ಸ್‌ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಮಧ್ಯಂತರ ಆದೇಶ ಮಾಡಬೇಕು ಎಂದು ಕೋರಲಾಗಿದೆ.