Karnataka High Court, X 
ಸುದ್ದಿಗಳು

ಎಕ್ಸ್‌ ಕಾರ್ಪ್‌ ಖಾತೆ ನಿರ್ಬಂಧ ಪ್ರಕರಣವನ್ನು ಕೇಂದ್ರ ಪುನರ್‌ ಪರಿಗಣಿಸಿದರೆ ಅನಗತ್ಯ ಪ್ರಚಾರ ತಡೆಯಬಹುದು: ಹೈಕೋರ್ಟ್‌

ಎಕ್ಸ್‌ ಕಾರ್ಪ್‌ ಖಾತೆಗಳ ನಿರ್ಬಂಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಕಾರಣ ನೀಡಿಲ್ಲ ಎಂಬುದು ಎಕ್ಸ್‌ ಕಾರ್ಪ್‌ ಪರ ವಕೀಲರ ಮೌಖಿಕ ಪ್ರತಿಕ್ರಿಯೆಯಾಗಿದೆ.

Bar & Bench

ಕೇಂದ್ರ ಸರ್ಕಾರವು 2021 ಮತ್ತು 2022ರಲ್ಲಿ ಹೊರಡಿಸಿರುವ ನಿರ್ಬಂಧ ಆದೇಶಗಳನ್ನು ಮರು‌ ಪರಿಗಣಿಸಿ ಸಕಾರಣ ಹೊಂದಿರುವ ಆದೇಶ ಮಾಡಲು ಒಪ್ಪಿಕೊಂಡರೆ ಅನಗತ್ಯ ಪ್ರಚಾರ ತಪ್ಪಿಸಬಹುದು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್‌ ಕಾರ್ಪ್‌ (ಟ್ವಿಟರ್‌) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್‌ ಮತ್ತು ವಿಜಯಕುಮಾರ್‌ ಎ. ಪಾಟೀಲ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಎಕ್ಸ್‌ ಕಾರ್ಪ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜನ್‌ ಪೂವಯ್ಯ ಅವರು “ಕೇಂದ್ರ ಸರ್ಕಾರದ ನಿರ್ಬಂಧ ಆದೇಶಗಳನ್ನು ಪಾಲಿಸಲಾಗಿದೆ. ಆದರೆ, ಮೇಲ್ನೋಟಕ್ಕೆ ಆ ಆದೇಶಗಳಿಗೆ ಯಾವುದೇ ಕಾರಣ ನೀಡಲಾಗಿಲ್ಲ. ಆದರೂ ನಾವು ಖಾತೆಗಳ ವಿಷಯ ನಿರ್ಬಂಧಿಸಿರುವುದನ್ನು ಮುಂದುವರಿಸಲಿದ್ದೇವೆ. ಇಡೀ ಪ್ರಕರಣವನ್ನು ಕೇಂದ್ರ ಸರ್ಕಾರಕ್ಕೆ ಮರಳಿ ಕಳುಹಿಸಬೇಕು. ಅವರು ಸಕಾರಣ ಹೊಂದಿದ ಆದೇಶ ಹೊರಡಿಸಲಿ” ಎಂದು ಪೀಠಕ್ಕೆ ವಿವರಿಸಿದರು.

ಇದಕ್ಕೆ ಪೀಠವು “ನಮ್ಮ ಮನಸ್ಸಿನಲ್ಲೂ ಅದೇ ಇದೆ. ಇದನ್ನು ನಾವು ಕಾರ್ಯದರ್ಶಿಗೆ ಕಳುಹಿಸುತ್ತೇವೆ. ಅದು ಆಂತರಿಕ ನಿರ್ಧಾರವಾದರೆ ಆಗ ಅದು ಅನಗತ್ಯ ಪ್ರಚಾರಕ್ಕೀಡಾಗುವುದಿಲ್ಲ … ನಿಯಮದ ಪ್ರಕಾರ ಕಾರ್ಯದರ್ಶಿಯು ನಿರ್ಧಾರ ಕೈಗೊಳ್ಳಬಹುದಾಗಿದೆ. ಹೀಗಾಗಿ, ಎಎಸ್‌ಜಿ ಅವರ ಜೊತೆ ಮಾತನಾಡಿ, ಅದು ಒಪ್ಪಿಗೆಯಾದರೆ ನಾವು ಅದನ್ನು ವಾಪಸ್‌ ಕಳುಹಿಸುತ್ತೇವೆ. ಎಎಸ್‌ಜಿ ಅವರು ಸಂಬಂಧಿತ ಅಧಿಕಾರಿ ಮತ್ತು ಇಲಾಖೆಗೆ ಸಲಹೆ ನೀಡಬಹುದು” ಎಂದರು.

ಖಾತೆ ನಿರ್ಬಂಧವನ್ನು ಕಾಲಮಿತಿಯಲ್ಲಿ ಪಾಲಿಸಲು ವಿಫಲವಾದ ಎಕ್ಸ್‌ ಕಾರ್ಪ್‌ಗೆ ದಂಡ ವಿಧಿಸಬಹುದೇ ಎಂಬುದರ ಕುರಿತೂ ಕೇಂದ್ರ ಸರ್ಕಾರದ ಸೂಕ್ತ ಅಧಿಕಾರಿ ನಿರ್ಧರಿಸಬಹುದು ಎಂದು ನ್ಯಾಯಾಲಯ ಹೇಳಿದೆ.

“ಮೇಲ್ನೋಟಕ್ಕೆ ನೋಡಿದರೆ (ಎಕ್ಸ್‌ ಕಾರ್ಪ್‌) ಅವರ ಪರವಾಗಿ ಪ್ರಕರಣವಿದೆ. ನ್ಯಾಯಾಲಯವು ₹50 ಲಕ್ಷ ದಂಡ ವಿಧಿಸಿದೆ. ನಾವು ದಂಡವನ್ನು ಸಮರ್ಥಿಸಬೇಕಿದೆ. ಪ್ರಕರಣವನ್ನು ಕಾರ್ಯದರ್ಶಿಗೆ ಮರಳಿಸುವುದು ಉತ್ತಮ. ಅವರು ಅರ್ಜಿಯನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದು. ಅವರಿಗೆ ಆ ಅಧಿಕಾರವಿದ್ದು, ಅದನ್ನು ಅವರು ಪರಿಶೀಲಿಸಲಿ. ಸಮರ್ಥನೀಯ ಅಥವಾ ಅಸಮರ್ಥನೀಯ ಎಂದು ಅವರು ಹೇಳಲಿ” ಎಂದು ಪೀಠ ಹೇಳಿದೆ.

ಎಕ್ಸ್‌ ಕಾರ್ಪ್‌ ಮೇಲ್ಮನವಿಯನ್ನು ತಿದ್ದುಪಡಿ ಮಾಡಲು ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಾಲಯವು ಪುರಸ್ಕರಿಸಿದ್ದು, ವಿಚಾರಣೆಯನ್ನು ಸೆಪ್ಟೆಂಬರ್‌ 27ಕ್ಕೆ ಮುಂದೂಡಿದೆ.