ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ ಕಾರ್ಪ್ (ಟ್ವಿಟರ್) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮೂರು ವಾರ ಮುಂದೂಡಲು ನಿರಾಕರಿಸಿರುವ ಕರ್ನಾಟಕ ಹೈಕೋರ್ಟ್ ಅಕ್ಟೋಬರ್ 4ಕ್ಕೆ ವಿಚಾರಣೆ ನಿಗದಿಪಡಿಸಿದೆ.
ಎಕ್ಸ್ ಕಾರ್ಪ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಿ ನರೇಂದರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಕೇಂದ್ರ ಸರ್ಕಾರದ ಪರ ವಕೀಲರು ಕೆಲವು ವಿಚಾರಗಳನ್ನು ನಿರ್ಧರಿಸಲು ಮೂರು ವಾರ ಕಾಲಾವಕಾಶ ನೀಡಬೇಕು ಎಂದರು. ಇದಕ್ಕೆ ಪೀಠವು ಮೂರು ವಾರಗಳ ವಿಚಾರಣೆ ಮುಗಿಸಿ, ಅರ್ಜಿಯನ್ನೇ ಇತ್ಯರ್ಥಪಡಿಸಬಹುದು ಎಂದಿತು.
ಎಕ್ಸ್ ಕಾರ್ಪ್ ಪ್ರತಿನಿಧಿಸಿದ್ದ ವಕೀಲರು ಕೇಂದ್ರ ಸರ್ಕಾರದ ಆದೇಶಗಳನ್ನು ಪಾಲಿಸಬೇಕೇ ಎಂಬುದು ಇಲ್ಲಿ ವಿಚಾರವೇ ವಿನಾ 50 ಲಕ್ಷ ರೂಪಾಯಿ ದಂಡವನ್ನು ಪಾವತಿಸುವುದಲ್ಲ. ಪರಿಹಾರಕ್ಕಾಗಿ ನಾವು ನ್ಯಾಯಾಲಯದ ಮೆಟ್ಟಿಲೇರಿದೆವು. ಆದರೆ, ನಾವು ಸಮಯ ವ್ಯರ್ಥ ಮಾಡುತ್ತಿದ್ದೇವೆ ಎಂದು ಏಕಸದಸ್ಯ ಪೀಠ ಹೇಳಿತ್ತು ಎಂದರು.
ಇದನ್ನು ಆಲಿಸಿದ ಪೀಠವು ಅಕ್ಟೋಬರ್ 5ರಂದು ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿ, ಆದೇಶ ಮಾಡಲಾಗುವುದು ಎಂದಿತು. ಅರ್ಜಿದಾರರ ಕೋರಿಕೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 4ಕ್ಕೆ ನ್ಯಾಯಾಲಯವು ವಿಚಾರಣೆ ನಿಗದಿಪಡಿಸಿತು.