Xiaomi India, enforcement directorate and Karnataka HC 
ಸುದ್ದಿಗಳು

ಜಪ್ತಿ ಮಾಡಬೇಕಾದ ₹5,551 ಕೋಟಿಯಲ್ಲಿ ಶಓಮಿಯಿಂದ ಶೇ.30ರಷ್ಟು ಬಳಕೆ: ಹೈಕೋರ್ಟ್‌ಗೆ ಇ ಡಿ, ಕೇಂದ್ರ ಸರ್ಕಾರದ ವಿವರಣೆ

ಕಳೆದ ಏಪ್ರಿಲ್‌ನಲ್ಲಿ ಜಾರಿ ನಿರ್ದೇಶನಾಲಯದ ಜಪ್ತಿ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದರೂ ಆಕ್ಷೇಪಾರ್ಹವಾದ ಹಣ ತನ್ನ ಬ್ಯಾಂಕ್‌ನಲ್ಲಿ ಇದೆ ಎಂಬುದನ್ನು ಖಾತರಿಪಡಿಸಲು ಶಓಮಿ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಇ ಡಿ ಹೇಳಿವೆ.

Bar & Bench

ಚೀನಾದ ಶಓಮಿ ಟೆಕ್ನಾಲಜಿ ಕಂಪೆನಿಯ ₹5,551.27 ಕೋಟಿ ಮೌಲ್ಯದ ಬ್ಯಾಂಕ್‌ ಖಾತೆಯ ಜಪ್ತಿಗೆ ಅನುಮತಿಸುವಂತೆ ಕೋರಿ ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯವು ಈಚೆಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ [ಭಾರತ ಸರ್ಕಾರ ವರ್ಸಸ್‌ ಶಓಮಿ ಟೆಕ್ನಾಲಜಿ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌].

ಜಾರಿ ನಿರ್ದೇಶನಾಲಯದ ಜಪ್ತಿ ಆದೇಶವನ್ನು ಪ್ರಶ್ನಿಸಿ ಶಓಮಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ಹೈಕೋರ್ಟ್‌ನ ಏಕಸದಸ್ಯ ಪೀಠವು ವಜಾ ಮಾಡಿತ್ತು. ಅದಾಗ್ಯೂ, ಶಓಮಿಯು ಆಕ್ಷೇಪಾರ್ಹವಾದ ಹಣವನ್ನು ತನ್ನ ಬ್ಯಾಂಕ್‌ ಖಾತೆಗಳಲ್ಲಿ ಇರುವುದನ್ನು ಖಾತರಿಪಡಿಸಲು ಆದೇಶಿಸಬೇಕು ಎಂದು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ಸಂಬಂಧ ಏಕಸದಸ್ಯ ಪೀಠವು ಯಾವುದೇ ಆದೇಶ ಮಾಡಿಲ್ಲ ಎಂದು ಮೇಲ್ಮನವಿದಾರರಾದ ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯ ಹೇಳಿವೆ.

ಶಓಮಿ ಕಂಪೆನಿಯು ₹5,551.27 ಯಲ್ಲಿ ಸುಮಾರು ಶೇ. 30ರಷ್ಟು ಹಣವನ್ನು ಬಳಕೆ ಮಾಡಿದೆ. ಇದು ಸಹ ಜಪ್ತಿಯ ಭಾಗವಾಗಿದೆ. 2022ರ ಏಪ್ರಿಲ್‌ ವೇಳೆಗೆ ಶಓಮಿ ಖಾತೆಯಲ್ಲಿ ಸುಮಾರು ₹7,000 ಕೋಟಿ ಹಣವಿತ್ತು ಎಂದು ಹೇಳಲಾಗಿದೆ.

2022ರ ಮೇ ಮತ್ತು ಅಕ್ಟೋಬರ್‌ ನಡುವೆ ಶಓಮಿ ಕಂಪೆನಿಯು ಸುಮಾರು ₹1,594.48 ಕೋಟಿ ಬಳಕೆ ಮಾಡಿಕೊಂಡು, ₹4,241 ಕೋಟಿಯನ್ನು ಮಾತ್ರ ಬಾಕಿ ಉಳಿಸಿದೆ. ಬ್ಯಾಂಕ್‌ ಖಾತೆ ಜಪ್ತಿ ಮಾಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಶಓಮಿ ಅರ್ಜಿಯು ನಿರ್ವಹಣೆಗೆ ಯೋಗ್ಯವಾಗಿದೆ ಎಂದು ಹೇಳುವ ಮೂಲಕ ಏಕಸದಸ್ಯ ಪೀಠವು ಪ್ರಮಾದ ಎಸಗಿದೆ ಎಂದು ಮೇಲ್ಮನವಿದಾರರು ಆಕ್ಷೇಪಿಸಿದ್ದಾರೆ.

2023ರ ಏಪ್ರಿಲ್‌ನಲ್ಲಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೇಮಾ) ಸೆಕ್ಷನ್‌ 37ರ ಸಿಂಧುತ್ವ ಪ್ರಶ್ನಿಸಿದ್ದ ಶಓಮಿ ಆಕ್ಷೇಪಣೆಯನ್ನು ಅಂತಿಮಾಗಿ ವಜಾ ಮಾಡಿದರೂ ಅರ್ಜಿಯು ನಿರ್ವಹಣಾ ಯೋಗ್ಯವಾಗಿದೆ ಎಂದಿತ್ತು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ವಾದಕಾಲೀನ ಅರ್ಜಿಯನ್ನು ಪೀಠವು ವಿಲೇವಾರಿ ಮಾಡಿತ್ತು.

ಶಓಮಿ ಸಂಸ್ಥೆಯು ₹5,551.27 ಕೋಟಿಯಲ್ಲಿ ಬಳಕೆ ಮಾಡಿಕೊಂಡಿದ್ದ ಹಣವನ್ನು ಖಾತೆಗೆ ಜಮೆ ಮಾಡುವಂತೆ ಆ ಸಂಸ್ಥೆಗೆ ಏಕಸದಸ್ಯ ಪೀಠವು ನಿರ್ದೇಶಿಸಬೇಕಿತ್ತು ಎಂದು ಮೇಲ್ಮನವಿದಾರರು ವಾದಿಸಿದ್ದಾರೆ. ಕೇಂದ್ರ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯದ ಪರವಾಗಿ ವಕೀಲ ಮಧುಕರ್‌ ದೇಶಪಾಂಡೆ ಅವರು ವಕಾಲತ್ತು ಹಾಕಿದ್ದಾರೆ.