A1
ಸುದ್ದಿಗಳು

ಭಯೋತ್ಪಾದನೆಗೆ ಹಣಕಾಸಿನ ನೆರವು: ಯಾಸಿನ್ ಮಲಿಕ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

ಮಲಿಕ್ ತಪ್ಪೊಪ್ಪಿಗೆ ಮೇರೆಗೆ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆಯಡಿ ಶಿಕ್ಷೆ ವಿಧಿಸಲಾಗಿತ್ತು.

Bar & Bench

ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದಡಿ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್ ಮುಖ್ಯಸ್ಥ ಮತ್ತು ಕಾಶ್ಮೀರಿ ಪ್ರತ್ಯೇಕತಾವಾದಿ ಯಾಸಿನ್ ಮಲಿಕ್‌ಗೆ ದೆಹಲಿಯ ಎನ್‌ಐಎ ವಿಶೇಷ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ [ಯಾಸಿನ್‌ ಮಲಿಕ್‌ ಮತ್ತು ಎನ್‌ಐಎ ನಡುವಣ ಪ್ರಕರಣ].

ಮಲಿಕ್‌ ತಪ್ಪೊಪ್ಪಿಗೆ ಮೇರೆಗೆ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ (ಯುಎಪಿಎ) ಮತ್ತು ಐಪಿಸಿಯಡಿ ಪಿತೂರಿ ಮತ್ತು ದೇಶದ್ರೋಹದ ಅಪರಾಧಗಳಿಗಾಗಿ ಮೇ 19 ರಂದು ಆತನನ್ನು ದೋಷಿ ಎಂದು ವಿಶೇಷ ನ್ಯಾಯಾಧೀಶ ಪರ್ವೀನ್ ಸಿಂಗ್ ತೀರ್ಪು ನೀಡಿದ್ದರು.

ಕಾನೂನು ಸಮಾಲೋಚನೆ ಹಿನ್ನೆಲೆಯಲ್ಲಿ ಜೈಲಿನಲ್ಲಿ ಮಲಿಕ್‌ನನ್ನು ಭೇಟಿಯಾಗಿದ್ದ ಪ್ರಕರಣದ ಅಮಿಕಸ್‌ ಕ್ಯೂರಿ ಒಂದು ವೇಳೆ ಆತ ತಪ್ಪೊಪ್ಪಿಕೊಂಡರೆ ಶಿಕ್ಷೆಯ ಗರಿಷ್ಠ ಪ್ರಮಾಣದ ಬಗ್ಗೆ ಮತ್ತು ತನ್ನ ಮನವಿಯ ಸಾಧಕ ಬಾಧಕಗಳನ್ನು ಅರಿವು ಮೂಡಿಸಿದ್ದಾಗಿ ಹೇಳಿದ್ದರು. ತದನಂತರವೂ ಮಲಿಕ್‌ ತನ್ನ ವಿರುದ್ಧ ರೂಪಿಸಲಾದ ಆರೋಪಗಳನ್ನು ಒಪ್ಪಿಕೊಂಡು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದ.

ಈ ಹಿನ್ನೆಲೆಯಲ್ಲಿ ಸೂಕ್ತ ಕಾನೂನು ಸಮಾಲೋಚನೆ ಬಳಿಕ ಪ್ರಕರಣದ ಪರಿಣಾಮಗಳ ಬಗ್ಗೆ ಸಂಪೂರ್ಣ ಅರಿವಿದ್ದೂ ಸಹ ಮಲಿಕ್ ಸ್ವಯಂಪ್ರೇರಣೆಯಿಂದ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎನ್ನುವುದನ್ನು ನ್ಯಾಯಾಲಯ ಪರಿಗಣಿಸಿತು. ಅದರಂತೆ ಆತನ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿತು.

ಐಪಿಸಿ ಸೆಕ್ಷನ್‌ 120 ಬಿ, 121, 121 ಎ ಮತ್ತು ಐಪಿಸಿ ಸೆಕ್ಷನ್‌ 120 ಬಿ ಸಹ ವಾಚನದೊಂದಿಗೆ ಯುಎಪಿಎ ಸೆಕ್ಷನ್ 13 ಮತ್ತು 15 ಅಲ್ಲದೆ ಯುಎಪಿಎ ಗೆ ಸಂಬಂಧಿಸಿದ 17, 18, 20, 38 ಮತ್ತು 39ನೇ ಸೆಕ್ಷನ್‌ಗಳಡಿಯ ವಿವಿಧ ಅಪರಾಧಗಳಿಗೆ ನ್ಯಾಯಾಲಯವು ಪ್ರತ್ಯೇಕ ದಂಡ ಹಾಗೂ ಶಿಕ್ಷೆ ವಿಧಿಸಿತು. ಸೆಕ್ಷನ್‌ 121ರ ಅಡಿ ವಿಧಿಸಲಾದ ಜೀವಾವಧಿ ಶಿಕ್ಷೆ ಇದರಲ್ಲಿ ಹೆಚ್ಚಿನದಾಗಿದೆ. ಈ ಎಲ್ಲ ಶಿಕ್ಷೆಗಳೂ ಒಟ್ಟಿಗೆ ಜಾರಿಯಾಗಲಿರುವುದರಿಂದ ಮಲಿಕ್‌ ಜೀವಾವಧಿ ಶಿಕ್ಷೆ ಅನುಭವಿಸಲಿದ್ದಾನೆ. ಮಾರ್ಚ್‌ನಲ್ಲಿ ಮಲಿಕ್‌ ಹಾಗೂ ಆತನ ಸಹಚರರ ವಿರುದ್ಧ ನ್ಯಾಯಾಲಯ ಆರೋಪ ನಿಗದಿಪಡಿಸಿತ್ತು.