<div class="paragraphs"><p>Supreme Court, KK Venugopal and Yati Narsinghanand</p><p></p></div>

Supreme Court, KK Venugopal and Yati Narsinghanand

 
ಸುದ್ದಿಗಳು

ಹರಿದ್ವಾರ ದ್ವೇಷ ಭಾಷಣ ಪ್ರಕರಣ: ಯತಿ ನರಸಿಂಗಾನಂದಗೆ ಜಾಮೀನು

Bar & Bench

ಕಳೆದ ವರ್ಷ ನಡೆದ ಧರ್ಮ ಸಂಸದ್ ಕಾರ್ಯಕ್ರಮವೊಂದರಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿದ ಪ್ರಕರಣದಲ್ಲಿ ಯತಿ ನರಸಿಂಗಾನಂದ ಅವರಿಗೆ ಹರಿದ್ವಾರ ಸೆಷನ್ಸ್ ನ್ಯಾಯಾಲಯವು ಸೋಮವಾರ ಜಾಮೀನು ನೀಡಿದೆ.

ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಭರತ್ ಭೂಷಣ್ ಪಾಂಡೆ ಈ ಆದೇಶ ಹೊರಡಿಸಿದ್ದಾರೆ. ₹ 50,000 ಮೊತ್ತದ ಎರಡು ಶ್ಯೂರಿಟಿ ಮತ್ತು ಅಷ್ಟೇ ಮೊತ್ತದ ವೈಯಕ್ತಿಕ ಬಾಂಡ್ ಸಲ್ಲಿಸುವಂತೆ ಆರೋಪಿಗೆ ಸೂಚಿಸಲಾಗಿದೆ.

ಅಂತಹ ಘಟನೆಗಳಲ್ಲಿ ಮತ್ತೆ ಭಾಗಿಯಾಗಬಾರದು, ತನಿಖಾಧಿಕಾರಿಗಳೊಂದಿಗೆ ಸಹಕರಿಸಬೇಕು, ತನಿಖೆಯಲ್ಲಿ ನೇರವಾಗಿ ಇಲ್ಲವೇ ಪರೋಕ್ಷವಾಗಿ ಹಸ್ತಕ್ಷೇಪ ಮಾಡಬಾರದು, ವಿದೇಶ ಪ್ರಯಾಣ ಮಾಡುವಂತಿಲ್ಲ ಇತ್ಯಾದಿ ಷರತ್ತುಗಳನ್ನು ವಿಧಿಸಲಾಗಿದೆ.

ಈ ಹಿಂದೆ ಮ್ಯಾಜಿಸ್ಟ್ರೇಟ್‌ ಅವರು ನರಸಿಂಗಾನಂದರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು,. ದ್ವೇಷಭಾಷಣ ವಿರುದ್ಧ ದಾಖಲಿಸಲಾಗಿರುವ ಎಫ್‌ಐಆರ್‌ ಹಿಂಪಡೆಯಬೇಕು ಎಂದು ಕೋರಿರುವ ಅರ್ಜಿಯ ವಿಚಾರಣೆ ಉತ್ತರಾಖಂಡ ಹೈಕೋರ್ಟ್‌ನಲ್ಲಿ ಬಾಕಿ ಇದೆ. ಘಟನೆಗೆ ಸಂಬಂಧಿಸಿದಂತೆ ಎಸ್‌ಐಟಿಯಿಂದ ತನಿಖೆ ನಡೆಸಬೇಕು ಎಂದು ಕೋರಿರುವ ಮತ್ತೊಂದು ಅರ್ಜಿಯನ್ನು ಸುಪ್ರೀಂಕೋರ್ಟ್‌ ಆಲಿಸುತ್ತಿದೆ.

ಇದೇ ವೇಳೆ ಸುಪ್ರೀಂಕೋರ್ಟ್‌ ವಿರುದ್ಧ ನರಸಿಂಗಾನಂದ ಅವರು ಇತ್ತೀಚೆಗೆ ನೀಡಿದ್ದ ಅವಹೇಳನಕಾರಿ ಹೇಳಿಕೆಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಸಾಮಾಜಿಕ ಹೋರಾಟಗಾರ್ತಿ ಶಚಿ ನೆಲ್ಲಿ ಅವರಿಗೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಇತ್ತೀಚೆಗೆ ಅನುಮತಿ ನೀಡಿದ್ದಾರೆ.