ಸುದ್ದಿಗಳು

ಯೆಸ್ ಬ್ಯಾಂಕ್ ಹಗರಣ: ಆರೋಪಿಯನ್ನು ಮುಂಬೈ ಕೋರ್ಟ್‌ಗೆ ಹಾಜರುಪಡಿಸುವ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಪ್ರಕರಣವನ್ನು ಮರುಹೊಂದಿಸಿ, ಆರೋಪಿ ಸುಮೀತ್ ಕುಮಾರ್‌ಗೆ ವಿಧಿಸಲಾಗಿದ್ದ ಪೊಲೀಸ್ ಕಸ್ಟಡಿಯನ್ನು ಸಿಬಿಐಗೆ ನೀಡಬಹುದೇ ಎಂದು ನಿರ್ಧರಿಸುವಂತೆ ನ್ಯಾ. ಅನು ಮಲ್ಹೋತ್ರಾ ಅವರು ಸಿಬಿಐ ವಿಶೇಷ ನ್ಯಾಯಾಲಯವನ್ನು ಕೇಳಿದರು.

Bar & Bench

ಯೆಸ್‌ ಬ್ಯಾಂಕ್‌ ಹಗರಣದ ಆರೋಪಿ ಸುಮಿತ್‌ ಕುಮಾರ್‌ನನ್ನು ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸಿಬಿಐಗೆ ನಿರ್ದೇಶಿಸಿದ್ದ ವಿಶೇಷ ನ್ಯಾಯಾಲಯದ ಆದೇಶವನ್ನು ದೆಹಲಿ ಹೈಕೋರ್ಟ್‌ ತಳ್ಳಿಹಾಕಿದ್ದು ಈ ಬೆಳವಣಿಗೆಯಿಂದ ಸಿಬಿಐಗೆ ರಿಲೀಫ್‌ ದೊರೆತಂತಾಗಿದೆ.

ಪ್ರಕರಣವನ್ನು ಸಿಬಿಐ ನ್ಯಾಯಾಲಯಕ್ಕೆ ಮರಳಿಸಿದ ನ್ಯಾ. ಅನು ಮಲ್ಹೋತ್ರಾ ಅವರು ಆರೋಪಿಯ ಪೊಲೀಸ್‌ ಕಸ್ಟಡಿಯನ್ನು ಸಿಬಿಐಗೆ ವಹಿಸಬಹುದೇ ಎಂದು ನಿರ್ಧರಿಸುವಂತೆ ಕೇಳಿದರು.

ಸಿಬಿಐನ ಭ್ರಷ್ಟಾಚಾರ ನಿಗ್ರಹ ಶಾಖೆಯ ಮುಂಬೈ ಕಚೇರಿಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಆರೋಪಿ ಬ್ಯಾಂಕ್ ಪ್ರಕರಣದ ಕಡತದಲ್ಲಿ ನೋಟು ಇರಿಸಿ ಅದರ ಫೋಟೋಗಳನ್ನು ದೆಹಲಿ ಮೂಲದ ಮೋಹಿತ್ ಕುಮಾರ್‌ಗೆ ಕಳುಹಿಸಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ದೆಹಲಿಯ ರೋಸ್‌ ಅವೆನ್ಯೂ ರಸ್ತೆಯಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆದರೆ ಆರೋಪಿಯನ್ನು ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದ್ದ ವಿಶೇಷ ನ್ಯಾಯಾಲಯವು ಮುಂಬೈ ನ್ಯಾಯಲಯವೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಾರ ಪ್ರಕಟಿಸಲಿದೆ ಎಂದಿತ್ತು.

ಆದರೆ ರಿಯಾ ಚಕ್ರವರ್ತಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ತೀರ್ಪಿನ ಪ್ರಕಾರ ಈ ಪ್ರಕರಣವನ್ನು ವಿಚಾರಣೆ ನಡೆಸುವುದು ದೆಹಲಿ ನ್ಯಾಯಾಲಯಗಳ ಅಧಿಕಾರ ವ್ಯಾಪ್ತಿಗೆ ಬರುತ್ತದೆ ಎಂದು ಸಿಬಿಐ ದೆಹಲಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿತ್ತು.