ಶಾಸಕ ವಿನಯ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿರುವ ಕಾರಣ ಈ ಸಂಬಂಧ ಸಿಬಿಐ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುವ ವ್ಯಾಪ್ತಿಯನ್ನು ತಾನು ಹೊಂದಿಲ್ಲ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ವಿನಯ್ ಕುಲಕರ್ಣಿ ಜಾಮೀನು ಅರ್ಜಿ ರದ್ದುಪಡಿಸಲು ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಧಾರವಾಡ ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ವಿನಯ ಕುಲಕರ್ಣಿ ಅವರ ಜಾಮೀನು ರದ್ದುಪಡಿಸುವಂತೆ ಕೋರಿ ಕೇಂದ್ರಿಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ವಿಚಾರಣೆ ನಡೆಸಿದರು.
ಇದೇ ವೇಳೆ, ಯೋಗೀಶ್ ಗೌಡ ಕೊಲೆ ಪ್ರಕರಣದ 16ನೇ ಆರೋಪಿ ಚಂದ್ರಶೇಖರ ಇಂಡಿ ಅವರಿಗೆ ಮಂಜೂರು ಮಾಡಲಾಗಿದ್ದ ಷರತ್ತುಬದ್ಧ ಜಾಮೀನನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ರದ್ದುಪಡಿಸಿತು.
ಉಳಿದಂತೆ 9ನೇ ಆರೋಪಿ ಅಶ್ವತ್ಥ ಮತ್ತು 15ನೇ ಆರೋಪಿ ವಿನಯ ಕುಲಕರ್ಣಿ ಅವರ ಜಾಮೀನುಗಳನ್ನು ರದ್ದುಪಡಿಸುವಂತೆ ಕೋರಿದ್ದ ಅರ್ಜಿಗಳನ್ನು ನ್ಯಾಯಾಧೀಶರು ತಿರಸ್ಕರಿಸಿದರು.