KSBC election 
ಸುದ್ದಿಗಳು

ಕೆಎಸ್‌ಬಿಸಿ ಚುನಾವಣೆ: ಅನಿರ್ದಿಷ್ಟಾವಧಿಗೆ ವಿಚಾರಣೆ ಮುಂದೂಡಲಾಗದು, ಕ್ರಮಕೈಗೊಳ್ಳುವಂತೆ ಬಿಸಿಐಗೆ ಹೈಕೋರ್ಟ್‌ ಸೂಚನೆ

“ಈ ಅರ್ಜಿಯನ್ನು ವರ್ಗಾವಣೆಯ ಮೂಲಕ ಹಿಂಪಡೆಯಲು ಕೋರಲಾಗಿದೆ ಎಂದು ಬಿಸಿಐ ಹೇಳುತ್ತಿದೆ. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಕೋರುವ ಮುನ್ನ ವರ್ಗಾವಣೆ ಅರ್ಜಿಗೆ ಸುಪ್ರೀಂನಲ್ಲಿ ತಡೆ ಪಡೆಯಬೇಕು” ಎಂದು ಅರ್ಜಿದಾರರನ್ನು ಕುರಿತು ಪೀಠ ಹೇಳಿತು.

Bar & Bench

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಚುನಾವಣೆಗೆ ಸಂಬಂಧಿಸಿದ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗದು. ಈ ಸಂಬಂಧ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಕ್ರಮಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಬುಧವಾರ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

ಕೆಎಸ್‌ಬಿಸಿಯ ಅಧಿಕಾರಾವಧಿಯನ್ನು 2023ರ ಜೂನ್‌ 23ರಂದು ಎರಡು ವರ್ಷಗಳಿಗೆ ಸ್ವೇಚ್ಛೆಯಿಂದ ವಿಸ್ತರಿಸಿ ಬಿಸಿಐ ಮಾಡಿರುವ ಆಕ್ಷೇಪಾರ್ಹವಾದ ಆದೇಶ ಹಿಂಪಡೆಯವಂತೆ ಕೋರಿ 2023ರ ಡಿಸೆಂಬರ್‌ 6ರಂದು ಸಲ್ಲಿಸಿರುವ ಮನವಿ ಪರಿಗಣಿಸುವಂತೆ ಮತ್ತು ಬಿಸಿಐ ಆಕ್ಷೇಪಾರ್ಹವಾದ ಅಧಿಸೂಚನೆ ವಜಾ ಮಾಡುವಂತೆ ಕೋರಿ ಬೆಂಗಳೂರಿನ ವಕೀಲ ರಹಮತುಲ್ಲಾ ಕೊತ್ವಾಲ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ಏಕಸದಸ್ಯ ಪೀಠ ನಡೆಸಿತು.

ಪಾರ್ಟಿ ಇನ್‌ ಪರ್ಸನ್‌ ವಕೀಲ ರಹಮತುಲ್ಲಾ ಕೊತ್ವಾಲ್‌ ಅವರು “ಕೆಎಸ್‌ಬಿಸಿ ಅಧಿಕಾರಾವಧಿಯನ್ನು 2023ರ ಜೂನ್‌ನಿಂದ ಅನ್ವಯಿಸುವಂತೆ ಬಿಸಿಐ ವಿಸ್ತರಿಸಿರುವುದು ಅಕ್ರಮ” ಎಂದರು.

ಆಗ ಪೀಠವು “ಸಂಬಂಧಿತ ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವಾಗ ಈ ಅರ್ಜಿಯನ್ನು ಪರಿಗಣಿಸುವುದು ಹೇಗೆ? ನಿಮ್ಮ ಕೋರಿಕೆಗಳನ್ನು ಪೀಠದ ಮುಂದೆ ಇಡಿ, ಅದನ್ನು ಪರಿಶೀಲಿಸಲಾಗುವುದು” ಎಂದಿತು.

ಇದಕ್ಕೆ ಕೊತ್ವಾಲ್‌ ಅವರು “ಕೆಎಸ್‌ಬಿಸಿಗೆ ಸಂಬಂಧಿಸಿದ ವಿಚಾರವನ್ನು ಸ್ವತಂತ್ರವಾಗಿ ಹೈಕೋರ್ಟ್‌ ಪರಿಗಣಿಸಬಹುದು. ಈ ಪ್ರಕರಣವನ್ನು ಪದೇಪದೇ ಮುಂದೆ ಒಯ್ಯುತ್ತಿರುವುದಕ್ಕೆ ಬಿಸಿಐ ವಿರುದ್ಧ ಸುಪ್ರೀಂ ಕೋರ್ಟ್‌ ಕಿಡಿಕಾರಿದೆ. ಇದು ವಿಭಿನ್ನ ಪ್ರಕರಣವಾಗಿದೆ” ಎಂದರು.

ಆಗ ಪೀಠವು “ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಬಿಟ್ಟು ಇದನ್ನು ಸ್ವತಂತ್ರವಾಗಿ ಪರಿಗಣಿಸುವುದು ಹೇಗೆ? ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ನಮ್ಮ ಮುಂದೆ ಇಡಬೇಕು” ಎಂದರು.

ಈ ನಡುವೆ ಬಿಸಿಐ ಪ್ರತಿನಿಧಿಸಿದ್ದ ವಕೀಲೆ “ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಹೈಕೋರ್ಟ್‌ನಿಂದ ಅರ್ಜಿ ಹಿಂಪಡೆಯುವ ಸಂಬಂಧ ವರ್ಗಾವಣೆ ಅರ್ಜಿಯನ್ನೂ ದಾಖಲಿಸಲಾಗಿದೆ” ಎಂದರು.

ಆಗ ಪೀಠವು “ಅರ್ಜಿದಾರರು ಅದಕ್ಕೂ ಇದಕ್ಕೂ ಭಿನ್ನತೆ ಇದೆ ಎನ್ನುತ್ತಿದ್ದಾರೆ” ಎಂದರು. ಅಲ್ಲದೇ, ಅರ್ಜಿದಾರರನ್ನು ಕುರಿತು, “ಈ ಅರ್ಜಿಯನ್ನು ವರ್ಗಾವಣೆಯ ಮೂಲಕ ಹಿಂಪಡೆಯಲು ಕೋರಲಾಗಿದೆ ಎಂದು ಬಿಸಿಐ ಹೇಳುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ವರ್ಗಾವಣೆ ಅರ್ಜಿ ಸಲ್ಲಿಸಿದಾಗ ನಾವೇನು ಮಾಡಲಾಗದು. ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಕೋರುವ ಮುನ್ನ ವರ್ಗಾವಣೆ ಅರ್ಜಿಗೆ ಸುಪ್ರೀಂ ಕೋರ್ಟ್‌ನಲ್ಲಿ ತಡೆಯಾಜ್ಞೆ ಪಡೆಯಬೇಕು” ಎಂದಿತು.

ಅಂತಿಮವಾಗಿ ಬಿಸಿಐ ಕುರಿತು ಪೀಠವು “ನೀವು ಕ್ರಮಕೈಗೊಳ್ಳಬೇಕು. ಅನಿರ್ದಿಷ್ಟಾವಧಿಗೆ ಪ್ರಕರಣದ ವಿಚಾರಣೆ ಮುಂದೂಡಲಾಗದು” ಎಂದು ಜೂನ್‌ 18ಕ್ಕೆ ವಿಚಾರಣೆ ಮುಂದೂಡಿತು.

2018ರ ಮಾರ್ಚ್‌ 27ರಂದು ಕೆಎಸ್‌ಬಿಸಿ ಚುನಾವಣೆ ನಡೆದಿತ್ತು. ವಕೀಲ ಕಾಯಿದೆ 1961ರ ಸೆಕ್ಷನ್‌ 8ರ ಅನ್ವಯ 2023ರ ಜೂನ್‌ ವೇಳೆಗೆ ಕೆಎಸ್‌ಬಿಸಿಯ ಐದು ವರ್ಷಗಳ ಅವಧಿ ಮುಗಿದಿತ್ತು. ಆದರೆ, ಹೊಸದಾಗಿ 2023ರ ಜೂನ್‌ನಲ್ಲಿ ಚುನಾವಣೆ ನಡೆಸುವ ಬದಲಿಗೆ ಬಿಸಿಐಯು 2023ರ ಜೂನ್‌ 23ರಂದು ಸ್ವೇಚ್ಛೆಯಿಂದ ಕೆಎಸ್‌ಬಿಸಿ ಅಧಿಕಾರಾವಧಿಯನ್ನು ಎರಡು ವರ್ಷಗಳ ಕಾಲ ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ. 2015ರಲ್ಲಿ ಆರಂಭವಾಗಿರುವ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಳಿಸಲು 18 ತಿಂಗಳು ಮತ್ತು ಹೊಸದಾಗಿ ಚುನಾವಣೆ ನಡೆಸಲು ಆರು ತಿಂಗಳು ಕಾಲಾವಕಾಶವನ್ನು ಬಿಸಿಐ ನೀಡಿತ್ತು.

ಈ ಹಿನ್ನೆಲೆಯಲ್ಲಿ 2023ರ ನವೆಂಬರ್‌ 25ರಂದು ಕೆಎಸ್‌ಬಿಸಿಯು ಸರ್ಟಿಫಿಕೇಟ್‌ ಆಫ್‌ ಪ್ರಾಕ್ಟೀಸ್‌ (ಸಿಒಪಿ) ಅರ್ಜಿ ಸಲ್ಲಿಸಲು 2023ರ ಡಿಸೆಂಬರ್‌ 31 ಕೊನೆಯ ದಿನ ಎಂದು ಸುತ್ತೋಲೆ ಹೊರಡಿಸಿತ್ತು. ಇದರಿಂದ ವಕೀಲರ ಹಿತರಕ್ಷಣೆ ಮಾಡುವ ಉದ್ದೇಶದಿಂದ 2023ರ ಜೂನ್‌ 23ರ ಆಕ್ಷೇಪಾರ್ಹವಾದ ಅಧಿಸೂಚನೆ ಹಿಂಪಡೆಯುವಂತೆ ಕೋರಿ ಬಿಸಿಐಗೆ ಮತ್ತು ಅದರ ಪ್ರತಿಯನ್ನು ಕೆಎಸ್‌ಬಿಸಿಗೆ ಕಳುಹಿಸಿಕೊಡಲಾಗಿತ್ತು. ಇದಕ್ಕೆ ಬಿಸಿಐ ಕಿಮ್ಮತ್ತು ನೀಡದ ಹಿನ್ನೆಲೆಯಲ್ಲಿ ಹೈಕೋರ್ಟ್‌ ಮೆಟ್ಟಿಲೇರಲಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ. ಈ ನಡುವೆ ಕೆಎಸ್‌ಬಿಸಿಯು ಸಿಒಪಿ ಸಲ್ಲಿಸಲು ಮಾರ್ಗಸೂಚಿ ರೂಪಿಸಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.