Justice M Nagaprasanna 
ಸುದ್ದಿಗಳು

ಪೊಕ್ಸೋ ಪ್ರಕರಣದಲ್ಲಿ ಅಸಿಂಧು ಮದುವೆಯ ವಿಚಾರ ತರಬೇಡಿ: ವಕೀಲರಿಗೆ ಹೈಕೋರ್ಟ್‌ ಮೌಖಿಕ ಸಲಹೆ

“ನಿನ್ನೆ ಕರೆಂಟ್‌ ಇಲ್ಲದಿದ್ದರಿಂದ ತೀರ್ಪಿನ ಪ್ರತಿ ಪ್ರಿಂಟ್‌ ತೆಗೆಯಲಾಗಲಿಲ್ಲ. ನಮ್ಮ ಏರಿಯಾದಲ್ಲಿ ಕರೆಂಟ್‌ ಇರಲಿಲ್ಲ” ಎಂದು ಪೀಠಕ್ಕೆ ತಿಳಿಸಿದ ಅರ್ಜಿದಾರರ ಪರ ವಕೀಲರು!

Bar & Bench

“ಪೋಕ್ಸೊ ಪ್ರಕರಣದಲ್ಲಿ ಹಿಂದೂ ವಿವಾಹ ಕಾಯಿದೆಯ ಅಸಿಂಧು ಮದುವೆಯ ವಿಚಾರ ತರಬೇಡಿ. ನೀವು ಅಸಿಂಧು ಮದುವೆಯ ವಿಚಾರ ತರದೆ ಇರುವುದು ಉತ್ತಮ” ಎಂದು ಪೋಕ್ಸೋ ಪ್ರಕರಣವೊಂದರಲ್ಲಿ ಅರ್ಜಿದಾರರ ಪರ ವಕೀಲರನ್ನು ಕುರಿತು ಕರ್ನಾಟಕ ಹೈಕೋರ್ಟ್‌ ಮೌಖಿಕವಾಗಿ ಹೇಳಿತು.

ಹಾಸನದ ಯುವಕನ ತನ್ನ ವಿರುದ್ಧದ ಪೋಕ್ಸೊ, ಬಾಲ್ಯ ವಿವಾಹ ನಿಷೇಧ ಕಾಯಿದೆ ಹಾಗೂ ಅತ್ಯಾಚಾರ ಆರೋಪದಡಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು. ಈ ಸಂದರ್ಭದಲ್ಲಿ ಪೀಠ ಮತ್ತು ಅರ್ಜಿದಾರರ ನಡುವಿನ ಮಾತಿನ ವಿನಿಮಯ ಆಸಕ್ತಿ ಕೆರಳಿಸಿತು.

ಅರ್ಜಿದಾರರ ಪರ ವಕೀಲ ಡಿ ಅಶ್ವಥಪ್ಪ ಅವರು “ಸಂತ್ರಸ್ತೆಗೆ 17.4 ವರ್ಷವಾಗಿದ್ದಾಗ ಮದುವೆಯಾಗಿದೆ. ಆನಂತರ ಆಕೆ ಪ್ರೌಢ ವಯಸ್ಕಳಾದ ನಂತರ ಇನ್ನೊಂದು ಮದುವೆಯಾಗಿದ್ದಾರೆ. ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 5ರ ಅಡಿ ಅರ್ಜಿದಾರರ ಜೊತೆಗಿನ ಮದುವೆ ಅಸಿಂಧುವಾದರೂ ಬಾಲ್ಯ ವಿವಾಹ ನಿಷೇಧ ಕಾಯಿದೆ ಅಡಿ ಮದುವೆ ಬರುತ್ತದೆ. ಅದನ್ನೂ ಪರಿಗಣಿಸಬೇಕು. ಈ ಸಂಬಂಧ ತೀರ್ಪು ನೋಡಿದ್ದೆ, ಆದರೆ ನಿನ್ನೆ ಕರೆಂಟ್‌ ಇಲ್ಲದಿದ್ದರಿಂದ ಅದನ್ನು ಪ್ರಿಂಟ್‌ ತೆಗೆಯಲಾಗಲಿಲ್ಲ. ನಮ್ಮ ಏರಿಯಾದಲ್ಲಿ ಕರೆಂಟ್‌ ಇರಲಿಲ್ಲ” ಎಂದು ನಸುನಕ್ಕರು.

ಇದಕ್ಕೆ ಪೀಠವು “ಇದು ಪೋಕ್ಸೊ ಪ್ರಕರಣ. ಇಲ್ಲಿ ಅಸಿಂಧು ಮದುವೆ ವಿಚಾರ ತರಬೇಡಿ. ನೀವು ಅಸಿಂಧು ಮದುವೆ ವಿಚಾರವನ್ನು ತರದೆ ಇರುವುದು ಉತ್ತಮ” ಎಂದರು.

ಈ ವೇಳೆ ಅರ್ಜಿದಾರ ಪರ ವಕೀಲರು ನ್ಯಾಯಾಲಯದಲ್ಲಿ ಮದುವೆಯನ್ನು ಅಸಿಂಧು ಎಂದು ತೀರ್ಮಾನಿಸುವವರೆಗೂ ಮದುವೆ ಮದುವೆಯೇ ಆಗಿರುತ್ತದೆ ಎಂದು ವಾದಿಸಲು ಮುಂದಾದರು. ಆಗ ಪೀಠವು ಇದು ಪೋಕ್ಸೋ ಪ್ರಕರಣ, ನೀವು ಹೇಳುವುದು ಈ ಪ್ರಕರಣಕ್ಕೆ ಅನ್ವಯಿಸುವುದಿಲ್ಲ ಎಂದಿತು.

ವಾದದ ವೇಳೆ ಅಶ್ವಥಪ್ಪ ಅವರು “ಇದು ಎಂಥ ಪ್ರಕರಣ (ಪೋಕ್ಸೊ) ಎಂದರೆ ಜಾಮೀನು ಸಿಗದಿದ್ದರೆ ಎಲ್ಲಾ ಹುಡುಗರು ಜೈಲಿನಲ್ಲಿರುತ್ತಾರೆ. ಇಂದು ಒಂದು ಜಿಲ್ಲೆಯಲ್ಲಿ (ಪೋಕ್ಸೊ ಆರೋಪದಡಿ) ಸುಮಾರು 300 ಹುಡುಗರು ಜೈಲಿನಲ್ಲಿದ್ದಾರೆ” ಎಂದು ಬೀಸು ವಾದ ಮಂಡಿಸಿದರು.

ಆಗ ಪೀಠವು “ಒಂದು ಜಿಲ್ಲೆಯಲ್ಲಿ 300 ಹುಡುಗರು ಜೈಲಿನಲ್ಲಿದ್ದಾರಾ? ನೀವು ಏಕೆ ಸಮೀಕ್ಷೆ ನಡೆಸಿದ್ದಿರಿ?” ಎಂದು ಪೀಠವು ಕಿಚಾಯಿಸಿತು. ಅದಕ್ಕೆ ವಕೀಲರು “ನನಗೆ ಹೇಗೋ ಮಾಹಿತಿ ಸಿಕ್ಕಿತು. ಸಂತ್ರಸ್ತೆ ಇನ್ನೊಬ್ಬ ವ್ಯಕ್ತಿಯನ್ನು ಮದುವೆಯಾಗಿದ್ದಾರೆ. ಸುಪ್ರೀಂ ಕೋರ್ಟ್‌ ತೀರ್ಪನ್ನು ನೋಡಿ. ಆನಂತರ ನೀವು ಏನು ಬೇಕಾದರೂ ಬರೆಯಿರಿ” ಎಂದರು.

ನಂತರ ಪೀಠವು “ಅಪರಾಧ ಅಪರಾಧವಷ್ಟೆ. ವಿಚಾರಣೆ ಎದುರಿಸಿ, ಆರೋಪಮುಕ್ತವಾಗವಾಗಬಹುದು. ಸಂತ್ರಸ್ತೆಯು ಸಿಆರ್‌ಪಿಸಿ ಸೆಕ್ಷನ್‌ 164ರ ಅಡಿ ನೀಡಿರುವ ಹೇಳಿಕೆಯಲ್ಲಿ ಅರ್ಜಿದಾರ ಬಲವಂತವಾಗಿ ಎಲ್ಲವನ್ನೂ ಮಾಡಿದ್ದಾರೆ ಎಂದು ವಿವರಿಸಲಾಗಿದೆ. ಇದೆಲ್ಲವೂ ವಿಚಾರಣೆಯಲ್ಲಿ ನಿರ್ಧಾರವಾಗಬೇಕು” ಎಂದರು. ಅಂತಿಮವಾಗಿ ಪೀಠವು ವಿಚಾರಣೆಯನ್ನು ಆಗಸ್ಟ್‌ 28ಕ್ಕೆ ಮುಂದೂಡಿತು.