ಜಾತ್ಯತೀತ ಸಂವಿಧಾನದ ಅಡಿಯಲ್ಲಿ ಹಿಂದೂ ರಾಷ್ಟ್ರ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಹೇಳಿದ್ದಾರೆ.
ನ್ಯಾ. ಸುನಂದಾ ಭಂಡಾರೆ ಪ್ರತಿಷ್ಠಾನ ಶುಕ್ರವಾರ ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಸುನಂದಾ ಭಂಡಾರೆ ಸ್ಮಾರಕ29ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಔಪಚಾರಿಕ ತಿದ್ದುಪಡಿಗಳಿಲ್ಲದೆ ಅದರಲ್ಲಿಯೂ ಶಾಸಕಾಂಗ ಮತ್ತು ನ್ಯಾಯಾಂಗ ಪದ್ಧತಿಗಳ ಮೂಲಕ ಭಾರತೀಯ ಸಂವಿಧಾನವನ್ನು ಮರುರೂಪಿಸುವ ಹಿಂಬಾಗಿಲಿನ ಯತ್ನಗಳನ್ನು ಅವರು ಖಂಡಿಸಿದರು.
ಜಾತ್ಯತೀತತೆಯನ್ನು ಸಮರ್ಥಿಸಿಕೊಳ್ಳುವಾಗ ಅದನ್ನು ನಾವು ಮುಸ್ಲಿಮರ ಓಲೈಕೆಗಾಗಿ ಮಾಡದೆ ದೇಶದ ಹಿತದೃಷ್ಟಿಯಿಂದ ಮಾಡುತ್ತಿರುತ್ತೇವೆ.ಇಂದಿರಾ ಜೈಸಿಂಗ್
ಇಂದಿರಾ ಅವರ ಉಪನ್ಯಾಸದ ಪ್ರಮುಖ ಅಂಶಗಳು
ಬಹುಸಂಖ್ಯಾತರ ಸಿದ್ಧಾಂತಕ್ಕೆ ಅನುಗುಣವಾಗಿ ಕಾಯಿದೆಗಳನ್ನು ಮರು ವ್ಯಾಖ್ಯಾನಿಸುವುದು ಭಾರತದ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವ್ಯವಸ್ಥೆಗೆ ಅಪಾಯಕಾರಿ.
ಧರ್ಮ, ಶ್ರದ್ಧೆಗಳು ಕಾನೂನು ವ್ಯವಸ್ಥೆಯ ಆಧಾರವಾಗಲು ಸಾಧ್ಯವಿಲ್ಲ.
ಭಾರತಕ್ಕೆ ಭದ್ರತೆ ಮತ್ತು ಸಮಗ್ರತೆಯನ್ನು ಕಲ್ಪಿಸುವ ಏಕೈಕ ಖಾತರಿ ಜಾತ್ಯತೀತತೆ ಆಗಿರುವುದರಿಂದ ಅದನ್ನು ಅಳವಡಿಸಿಕೊಳ್ಳಲಾಗಿದೆ ಎಂಬುದು ನನ್ನ ಅಭಿಪ್ರಾಯ.
ದೇಶದೊಳಗಿನ ಆಂತರಿಕ ದ್ವೇಷದ ಸಮರ ಬಾಹ್ಯದಾಳಿಗೆ ಸೂಕ್ತ ಸನ್ನಿವೇಶ ಸೃಷ್ಟಿಸುವ ಅಪಾಯವಿದೆ.
ಜಾತ್ಯತೀತತೆಯನ್ನು ಸಮರ್ಥಿಸಿಕೊಳ್ಳುವಾಗ ಅದನ್ನು ನಾವು ಮುಸ್ಲಿಮರ ಓಲೈಕೆಗಾಗಿ ಮಾಡದೆ ದೇಶದ ಹಿತದೃಷ್ಟಿಯಿಂದ ಮಾಡುತ್ತಿರುತ್ತೇವೆ.
ಜಾತ್ಯತೀತ ಸಂವಿಧಾನದ ಅಡಿಯಲ್ಲಿ ನೀವು ಎಂದಿಗೂ ಹಿಂದೂ ರಾಷ್ಟ್ರವನ್ನು ಹೊಂದಲು ಸಾಧ್ಯವಿಲ್ಲ.
ಸಂವಿಧಾನವನ್ನು ಔಪಚಾರಿಕವಾಗಿ ತಿದ್ದುಪಡಿ ಮಾಡದಿದ್ದರೂ ನಿತ್ಯದ ಆಚರಣೆಯಲ್ಲಿ ಅದರ ಜಾರಿ ನಿರಾಕರಿಸಲಾಗುತ್ತಿದೆ. ಮೌನವಾಗಿ ಮಾಡುವ ಬದಲಾವಣೆಗಳನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಕಷ್ಟ.
ಸಂವಿಧಾನವನ್ನು ನಿರ್ಲಕ್ಷಿಸಿದರೆ ಅದನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದು ಕಷ್ಟಕರವಾಗುವ ಕಾರಣಕ್ಕೆ ಅಂತಹ ಅನೌಪಚಾರಿಕ ಬದಲಾವಣೆಗಳ ಮೊರೆ ಹೋಗಲಾಗುತ್ತಿದೆ.
ಇಂತಹ ಸಂಗತಿಗಳ ಬಗ್ಗೆ ದೇಶದಲ್ಲಿ ಭಾರಿ ಪ್ರತಿರೋಧ ವ್ಯಕ್ತವಾಗುತ್ತಿದೆ. ನಮಗೆ ನಗರ ನಕ್ಸಲರು/ಭಯೋತ್ಪಾದಕರು ಎಂಬ ಹಣೆಪಟ್ಟಿ ಹಚ್ಚಲಾಗುತ್ತಿದೆ.
ಮತಾಂತರ ವಿರೋಧಿ ಕಾಯಿದೆ, ಪೌರತ್ವ ತಿದ್ದುಪಡಿ ಕಾಯಿದೆಯಂತಹ ಬೆಳವಣಿಗೆಗಳು ಸಂವಿಧಾನದ ಅನೌಪಚಾರಿಕ ನಿರಾಕರಣೆಗೆ ಉದಾಹರಣೆಗಳು. ಸಾಂಸ್ಕೃತಿಕ ರಾಷ್ಟ್ರೀಯತೆ ಹೆಸರಿನಲ್ಲಿ ಇದನ್ನು ಮಾಡಲಾಗುತ್ತಿದೆ.
ಭಾರತದ ಕಾನೂನು ವ್ಯವಸ್ಥೆಯನ್ನು ವಸಾಹತುಶಾಹಿಯಿಂದ ಮುಕ್ತಗೊಳಿಸದೆ ವಸಾಹತುಶಾಹಿ ಪರಂಪರೆಗಳನ್ನು ಉಳಿಸಿಕೊಳ್ಳುವ ಮೂಲಕ ಪ್ರಭುತ್ವದ ಅಧಿಕಾರವನ್ನು ಬಲಪಡಿಸಲಾಗುತ್ತಿದೆ.
ವೈವಾಹಿಕ ಅತ್ಯಾಚಾರ ಕಾನೂನುಗಳು ಮತ್ತು ಸಲಿಂಗ ವಿವಾಹದ ವಿರುದ್ಧದ ಧ್ವನಿಗಳು ದೊಡ್ಡಮಟ್ಟದಲ್ಲಿ ಪುರುಷ ನೆಲೆಯಿಂದ ಬಂದಿವೆ.
ಸಲಿಂಗತೆಯ ವಿರೋಧಿ ಮನಸ್ಥಿತಿಯನ್ನು ವಸಾಹತುಶಾಹಿ ಕಾನೂನುಗಳಿಂದ ಸಾಂಸ್ಥೀಕರಣಗೊಳಿಸಲಾಗಿದೆ. ವೈವಾಹಿಕ ಅತ್ಯಾಚಾರವನ್ನು ಸಹ ವಸಾಹತುಶಾಹಿ ಕಾನೂನುಗಳಿಂದಲೇ ಸಾಂಸ್ಥೀಕರಣಗೊಳಿಸಲಾಗಿದೆ. ಆದರೆ, ಯಾರು ಇಂದು ನಿರ್ವಸಾಹತೀಕರಣದ ಬಗ್ಗೆ ಮಾತನಾಡುತ್ತಿದ್ದಾರೋ ಅವರೇ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಣಗೊಳಿಸಬಾರದು ಎನ್ನುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವಿಭು ಭಕ್ರು ಅಧ್ಯಕ್ಷತೆ ವಹಿಸಿದ್ದರು.