Liquor  Image for representative purpose
ಸುದ್ದಿಗಳು

[ಕಿರಾಣಿ ಅಂಗಡಿಯಲ್ಲಿ ಮದ್ಯ ಮಾರಾಟ] ಟೊಮೊಟೊ ಸಾಸ್ ಪಕ್ಕ ಲಿಕ್ಕರ್ ಇಟ್ಟು ಮಾರಾಟ ಮಾಡಿದರೆ ಒಪ್ಪಲಾಗದು: ಹೈಕೋರ್ಟ್‌

 “ಕೃಷಿ ಕೆಲಸಗಾರರಿಗೆ ಲಿಕ್ಕರ್?  ಓಹೋ.. ಹಾಗಾದರೆ ಕೃಷಿ ಕೆಲಸಗಾರರು ಹೆಚ್ಚು ಕೆಲಸ ಮಾಡಲಿ ಎಂಬುದು ಅರ್ಜಿದಾರರು ಬಯಸುತ್ತಿದ್ದರೇ?” ಎಂದು ಪ್ರಶ್ನಿಸಿದ ಪೀಠ.

Bar & Bench

ಕೃಷಿ ಕೆಲಸದಿಂದ ದಣಿದು ಬಂದ ಕೆಲಸಗಾರಿಗೆ ನೀಡಲು ಪ್ರಾವಿಷನ್ ಸ್ಟೋರ್‌ನಲ್ಲಿ ಬಿಯರ್-ಲಿಕ್ಕರ್ ಇರಿಸಲಾಗಿತ್ತು ಎಂಬ ವಾದ ಕೇಳಿ ಅಚ್ಚರಿ ವ್ಯಕ್ತಪಡಿಸಿದ ಕರ್ನಾಟಕ ಹೈಕೋರ್ಟ್, ‌ಪರವಾನಗಿ ಪಡೆಯದೆ; ಟೊಮೊಟೊ ಸಾಸ್ ಪಕ್ಕದಲ್ಲಿ ಲಿಕ್ಕರ್ ಇಟ್ಟು ಮಾರಾಟ ಮಾಡಿದರೆ ಒಪ್ಪಲಾಗದು” ಎಂದು ಲಘುದಾಟಿಯಲ್ಲಿ ನುಡಿಯಿತು.

ಅಲ್ಲದೇ, ಅಕ್ರಮವಾಗಿ ಮದ್ಯ ಮಾರಾಟ ಆರೋಪದ ಮೇಲೆ ತುಮಕೂರು ಜಿಲ್ಲೆಯ ಮಣಿಕುಪ್ಪೆ ಗ್ರಾಮದ ಯಶೋಧಮ್ಮ ವಿರುದ್ಧ ಗುಬ್ಬಿ ವಲಯದ ಅಬಕಾರಿ ಪೊಲೀಸರು ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಡೆ ನೀಡಿತು.

Justice M Nagaprasanna

ಅರ್ಜಿಯಲ್ಲಿ ಪ್ರತಿವಾದಿಯಾದ ಅಬಕಾರಿ ಇಲಾಖೆ ಗುಬ್ಬಿ ವಲಯದ ಉಪ ನಿರೀಕ್ಷಕರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.‌  

ಅರ್ಜಿ ವಿಚಾರಣೆಗೆ ಬರುತ್ತಿದ್ದಂತೆಯೇ ನ್ಯಾಯಮೂರ್ತಿಗಳು “ಎಷ್ಟು ಪ್ರಮಾಣದ ಮದ್ಯ ಜಪ್ತಿ ಮಾಡಿದ್ದಾರೆ?” ಎಂದು ಅರ್ಜಿದಾರ‌ ಪರ ವಕೀಲೆಯನ್ನು ಕೇಳಿದರು.

ಇದಕ್ಕೆ ವಕೀಲೆಯು “ಅರ್ಜಿದಾರರ ವಿರುದ್ಧ ಅಬಕಾರಿ‌ ಇಲಾಖೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. 7.8 ಲೀಟರ್ ಬಿಯರ್ ಹಾಗೂ 22 ಲೀಟರ್ ವಿವಿಧ ಬಗೆಯ ಲಿಕ್ಕರ್” ಎಂದು ಉತ್ತರಿಸಿದರು.

ಆಗ ಪೀಠವು “ಅದೆನ್ನೆಲ್ಲಾ ಇಟ್ಟುಕೊಂಡು ನೀವೇನು ಮಾಡ್ತುತ್ತೀರಿ?” ಎಂದು ಪೊಲೀಸರ ಪರ ಸರ್ಕಾರಿ ಅಭಿಯೋಜಕರನ್ನು ಪ್ರಶ್ನಿಸಿತು.

ಸರ್ಕಾರಿ ಅಭಿಯೋಜಕರು “ಅರ್ಜಿದಾರರು ಮದ್ಯವನ್ನು ಪ್ರಾವಿಷನ್ ಸ್ಟೋರ್ (ದಿನಸಿ ಅಂಗಡಿ)‌ ನಲ್ಲಿ ಮಾರಾಟ ಮಾಡುತ್ತಿದ್ದರು” ಎಂದರು.

ಅದಕ್ಕೆ  ಆಶ್ಚರ್ಯ ವ್ಯಕ್ತಪಡಿಸಿದ ಪೀಠವು “ಪ್ರಾವಿಷನ್ ಸ್ಟೋರಾ? ಅರ್ಜಿದಾರರು ಪ್ರಾವಿಷನ್ ಸ್ಟೋರ್ ಹೊಂದಿದ್ದಾರೆಯೇ? ಏಕೆ ಅದರಲ್ಲಿ ಮದ್ಯ ಮಾರಾಟ ಮಾಡುತ್ತಿದ್ದೀರಿ?” ಎಂದು ಪ್ರಶ್ನಿಸಿತಯ.

ಅರ್ಜಿದಾರರು ವಕೀಲರು ಉತ್ತರಿಸಿ “ಕೃಷಿ ಕೆಲಸಗಾರರಿಗೆ ವಿತರಿಸಲು ಅರ್ಜಿದಾರರು ಬಯಸಿದ್ದೆವು” ಎಂದರು.

ಈ ಉತ್ತರ ಕೇಳಿ ಮತ್ತಷ್ಟು ಆಶ್ವರ್ಯಕ್ಕೆ‌ ಒಳಗಾದ ಪೀಠವು “ಕೃಷಿ ಕೆಲಸಗಾರರಿಗೆ ಲಿಕ್ಕರ್?  ಓಹೋ.. ಹಾಗಾದರೆ ಕೃಷಿ ಕೆಲಸಗಾರರು ಹೆಚ್ಚು ಕೆಲಸ ಮಾಡಲಿ ಎಂಬುದು ಅರ್ಜಿದಾರರು ಬಯಸುತ್ತಿದ್ದರೇ?” ಎಂದು ಪ್ರಶ್ನಿಸಿತು.

ಅರ್ಜಿದಾರರ ಪರ ವಕೀಲೆ, “ಸ್ವಾಮಿ.. ಹಳ್ಳಿಗಳಿಂದ ಬರುವ ಕೆಲಸಗಾರರು ಎಂದು ಹೇಳುತ್ತಿದ್ದನ್ನು ತಡೆದ ಪೀಠವು,  ‌ಓಹೋ ಪಾಪ; ಹಳ್ಳಿಗಳಿಂದ ಕೆಲಸಗಾರರು ಸುಸ್ತಾಗಿ ಬಂದಿರುತ್ತಾರೆ. ಅದಕ್ಕೆ ಬಿಯರ್ ಕೊಡೋಣ ಅಂತಾನಾ? ಏನ್ರಿ ಇದೆಲ್ಲಾ? ಇದು ಸದುದ್ದೇಶ.  ಪರವಾನಗಿ ಪಡೆದಿದ್ದರೆ ಪರವಾಗಿರಲಿಲ್ಲ. ಆದರೆ, ಟೊಮೊಟೊ ಸಾಸ್ ಪಕ್ಕ ಲಿಕ್ಕರ್ ಇಟ್ಟು ಮಾರಾಟ ಮಾಡಿದರೆ; ಅದು ಆಗುವುದಿಲ್ಲ” ಎಂದು ತೀಕ್ಷ್ಣವಾಗಿ ನುಡಿದರು.

“ಇದು ಅಬಕಾರಿ ಕಾಯಿದೆಯ ಸ್ಪಷ್ಟ ಉಲ್ಲಂಘನೆ.‌ ಕಾನೂನು ಅನುಮತಿಸದೇ ಅರ್ಜಿದಾರರು ಪ್ರಾವಿಷನ್ ಸ್ಟೋರ್ ಅಲ್ಲಿ ಲಿಕ್ಕರ್ ಮಾರಾಟ ಮಾಡಲು ಆಗುವುದಿಲ್ಲ. ಆ ರೀತಿಯ ಕಾನೂನೇ ಇಲ್ಲ” ಎಂದಿತು.

ಅರ್ಜಿದಾರರ ಪರ ವಕೀಲೆ “ಪ್ರಕರಣದಲ್ಲಿ ಪೊಲೀಸರು ಅಬಕಾರಿ ಕಾಯಿದೆ ಸೆಕ್ಷನ್ 53 ಅನ್ನು ದಾಳಿ ಮಾಡಲು (ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಶೋಧನಾ ವಾರೆಂಟ್ ಪಡೆಯದಿರುವುದು) ಪಾಲಿಸಿಲ್ಲ” ಎಂದು ಸಮಜಾಯಿಷಿ ನೀಡಿದರು.

ಆಗ ಪೀಠವು “ಅರ್ಜಿದಾರರು ಮದ್ಯ ಕೊಡುತ್ತಿರುವುದು ಯಾರಿಗೆ? ಹಳ್ಳಿಗಳಿಂದ ಕೃಷಿ ಕೆಲಸಗಾರರು ಬರುತ್ತಾರೆ. ಅವರಿಗೆ ವಿತರಣೆ ಮಾಡಲೆಂದು ಮದ್ಯ ಇಟ್ಟುಕೊಂಡಿದ್ದೀರಲ್ಲವೇ. ಸತ್ಯ ಹೇಳಬೇಕು. ಇಷ್ಟೊಂದು ಸತ್ಯ ಹೇಳಬಾರದು” ಎಂದು ಹಾಸ್ಯಭರಿತವಾಗಿ ಹೇಳಿತು: “ಈ ಆರೋಪವು ದೂರಿನಲ್ಲಿ ಇಲ್ಲ. ಪ್ರಾವಿಷನ್ ಸ್ಟೋರ್ ಅಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು ಎಂದಷ್ಟೇ ಉಲ್ಲೇಖಿಸಲಾಗಿತ್ತು. ಅರ್ಜಿದಾರರ ಪರ ವಕೀಲರು ಈಗ ನಿಜ ಹೇಳಿದರು.‌ ನಿಮ್ಮದು ಸದುದ್ದೇಶ ಬಿಡಿ” ಎಂದು ಪೀಠ ಹೇಳಿತು.

ನಂತರ ಪ್ರಕರಣದಲ್ಲಿ ಪೊಲೀಸರು ಅಬಕಾರಿ ಕಾಯಿದೆ ಸೆಕ್ಷನ್ 53 ‌ಅನ್ನು ಪಾಲನೆ ಮಾಡಿಲ್ಲ ಎಂಬ ಆಧಾರದಲ್ಲಿ ಅರ್ಜಿದಾರರ ವಿರುದ್ಧದ  ಪ್ರಕರಣಕ್ಕೆ ತಡೆ ನೀಡಿದ ನ್ಯಾಯಮೂರ್ತಿಗಳು, ರಾಜ್ಯ ಅಬಕಾರಿ‌ ಇಲಾಖೆಗೆ ನೋಟಿಸ್ ಜಾರಿ ಮಾಡಿದರು. ಹಾಗೆಯೇ, “ಈಗಲೂ ಪ್ರಾವಿಷನ್ ಸ್ಟೋರ್ ನಲ್ಲಿ ಲಿಕ್ಕರ್ ಇಟ್ಟೀದ್ದೀರಾ? ಇಲ್ಲ ನಿಲ್ಲಿಸಿದ್ದೀರಾ? ಎಂದು ಪ್ರಶ್ನಿಸುವ ಜೊತೆಗೆ ಮತ್ತೆ ಇಡಬೇಡಿ” ಎಂದು ಸೂಚಿಸಿ ಅರ್ಜಿ ವಿಚಾರಣೆ ಮುಂದೂಡಿದರು.