Greater Bengaluru Authority & karnataka hc  
ಸುದ್ದಿಗಳು

ಸೊಳ್ಳೆ ನಿಯಂತ್ರಣಕ್ಕೆ ಕರೆಯಲಾಗಿರುವ ಟೆಂಡರ್‌ ರದ್ದತಿಗೆ ಮನವಿ: ಜಿಬಿಎಗೆ ನೋಟಿಸ್‌ ಜಾರಿಗೊಳಿಸಿದ ಹೈಕೋರ್ಟ್‌

“ನಿಮ್ಮ ಸಂಘದಲ್ಲಿ ೧೦೦ ಮಂದಿ ಇಡೀ ಬೆಂಗಳೂರಿನಲ್ಲಿ ನಿಗಾ ವಹಿಸಲು ಸಾಕೆ? ಡೆಂಗಿ, ಚಿಕನ್‌ಗುನ್ಯಾ ಬರುತ್ತಿವೆ. ಇದನ್ನು ನಿಗ್ರಹಿಸಲು ೧೦೦ ಜನರು ಸಾಕೆ?” ಎಂದ ಪೀಠ.

Bar & Bench

ರಾಜಧಾನಿ ಬೆಂಗಳೂರು ನಗರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕರೆಯಲಾಗಿರುವ ಟೆಂಡರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ (ಜಿಬಿಎ) ಕರ್ನಾಟಕ  ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

ಗ್ರೇಟರ್ ಬೆಂಗಳೂರುಸೊಳ್ಳೆ ನಿಯಂತ್ರಣ ಗುತ್ತೆದಾರರ ಸಂಘ (ರಿ) ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Justice Suraj Govindraj

ಕೆಲ ಕಾಲ ಅರ್ಜಿ ಆಲಿಸಿದ ಪೀಠವು ಜಿಬಿಎ ಮುಖ್ಯ ಆಯುಕ್ತ, ಪಶ್ಚಿಮ ಪಾಲಿಕೆ, ಕೇಂದ್ರ ಪಾಲಿಕೆ, ಉತ್ತರ ಪಾಲಿಕೆ, ದಕ್ಷಿಣ ಪಾಲಿಕೆ, ಜಿಬಿಎ ವಿಶೇಷ ಆಯುಕ್ತ (ಆರೋಗ್ಯ), ಜಿಬಿಎ ಮುಖ್ಯ ಅರೋಗ್ಯಾಧಿಕಾರಿ, ಪಶ್ಚಿಮ, ಕೇಂದ್ರ, ಉತ್ತರ, ದಕ್ಷಿಣ ಪಾಲಿಕೆಗಳ ಆರೋಗ್ಯಾಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 7ಕ್ಕೆ ಮುಂದೂಡಿತು.

ಅರ್ಜಿದಾರರ ಸಂಘದ ಸದಸ್ಯರು ಬಿಬಿಎಂಪಿಯ ಮೃತ ಹಾಗೂ ನಿವೃತ್ತ ನೌಕರರ ಕುಟುಂಬದ ಸದಸ್ಯರಾಗಿದ್ದಾರೆ. ಇವರ ಸೇವೆಯನ್ನು ಪರಿಗಣಿಸುವ ಸಂಬಂಧ 2013ರಲ್ಲಿ ಬಿಬಿಎಂಪಿ (ಜಿಬಿಎ) ನಿರ್ಣಯ ಕೈಗೊಂಡಿದೆ. ಅರ್ಜಿದಾರರ ಸಂಘದ ಕೆಲವು ದೂರುಗಳಿದ್ದವು, ಅದನ್ನು ಆಧರಿಸಿ ಜಿಬಿಎ ವಿಶೇಷ ಆಯುಕ್ತರು (ಆರೋಗ್ಯ) 2026ರ ಜೂನ್ 15ರಂದು ಕೆಲವು ಶಿಫಾರಸುಗಳನ್ನು ಮಾಡಿ, ಟೆಂಡರ್ ಅಧಿಸೂಚನೆ ಹೊರಡಿಸುವ ಮೊದಲು ಈ ಶಿಫಾರಸುಗಳನ್ನು ಜಿಬಿಎ ಮುಖ್ಯ ಆಯುಕ್ತರ ಗಮನಕ್ಕೆ ತರಬೇಕು ಎಂದು ಹೇಳಿದ್ದರು. ಆದರೆ, ಅದನ್ನು ಪರಿಗಣಿಸದೆ, ಸೊಳ್ಳೆ ನಿಯಂತ್ರಣಕ್ಕೆ 2026 ಜುಲೈ 24ರಂದು ಟೆಂಡರ್ ಆಹ್ವಾನಿಸಲಾಗಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ವಿಚಾರಣೆಯ ಒಂದು ಹಂತದಲ್ಲಿ ಪೀಠವು ಅರ್ಜಿದಾರರ ಪರ ವಕೀಲ ಎಸ್‌ ಬಿ ಮುಕ್ಕಣ್ಣಪ್ಪ ಅವರನ್ನು ಕುರಿತು ಪೀಠವು “ನಿಮ್ಮ ಸಂಘದಲ್ಲಿ ೧೦೦ ಮಂದಿ ಇಡೀ ಬೆಂಗಳೂರಿನಲ್ಲಿ ನಿಗಾ ವಹಿಸಲು ಸಾಕೆ? ಡೆಂಗಿ, ಚಿಕನ್‌ಗುನ್ಯಾ ಬರುತ್ತಿವೆ. ಇದನ್ನು ನಿಗ್ರಹಿಸಲು ೧೦೦ ಜನರು ಸಾಕೆ? ಟೆಂಡರ್‌ಗೆ ಬದಲಾಗಿ ನಿಮಗೆ ಸೊಳ್ಳೆ ನಿಗ್ರಹಿಸುವ ಜವಾಬ್ದಾರಿ ನೀಡಬೇಕು ಎಂಬುದು ನಿಮ್ಮ ಕೋರಿಕೆ. ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ” ಎಂದಿತು.

ವಕೀಲ ಎಸ್‌ ಬಿ ಮುಕ್ಕಣ್ಣಪ್ಪ ಅವರು “ಜಿಬಿಎ ವಿಶೇಷ ಆಯುಕ್ತರು (ಆರೋಗ್ಯ) ಮೇ 16, 2026ರಂದು ಸಭೆ ನಡೆಸಿದ್ದು, ಅರ್ಜಿದಾರರ ಅಹವಾಲುಗಳನ್ನು ಸೇರಿಸಿ ಕೆಲವು ಶಿಫಾರಸ್ಸು ಮಾಡಿದ್ದಾರೆ. ಟೆಂಡರ್‌ ಕರೆಯುವಾಗ ಇವುಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿತ್ತು. 2013ರಲ್ಲಿ ಬಿಬಿಎಂಪಿಯು ನಿರ್ಣಯವೊಂದನ್ನು ಕೈಗೊಂಡಿದ್ದು, ಇದರ ಪ್ರಕಾರ ಸೊಳ್ಳೆ ನಿಯಂತ್ರಣ ಕೆಲಸವನ್ನು ಬಿಬಿಎಂಪಿಯ ಸಾವನ್ನಪ್ಪಿದ ಸಿಬ್ಬಂದಿಯನ್ನು ಅವಲಂಬಿಸಿರುವವರು ಮತ್ತು ಬಿಬಿಎಂಪಿ ನಿವೃತ್ತ ಸಿಬ್ಬಂದಿಗೆ ನೀಡಬೇಕು ಎಂದು ನಿರ್ಧರಿಸಲಾಗಿದೆ. ಅಂದಿನಿಂದಲೂ ಬಿಬಿಎಂಪಿ ನಿರ್ಣಯದ ಪ್ರಕಾರವೇ ನಡೆಯಲಾಗುತ್ತಿದೆ. ಈ ಕುರಿತು ಹಾಲಿ ಟೆಂಡರ್‌ ಪ್ರಕ್ರಿಯೆ ಸಂಬಂಧ ಕೆಲವು ಅಹವಾಲುಗಳಿವೆ. ಇದನ್ನು ಒಳಗೊಂಡ ಶಿಫಾರಸ್ಸುಗಳನ್ನು ಟೆಂಡರ್‌ ಕರೆಯುವಾಗ ಪರಿಗಣಿಸಬೇಕಿತ್ತು” ಎಂದರು.