Calcutta High Court 
ಸುದ್ದಿಗಳು

ದೇಶದಲ್ಲಿ ಅತಿಯಾದ ನಿರುದ್ಯೋಗ ಸಮಸ್ಯೆ; ತಾಂತ್ರಿಕ ಕಾರಣ ನೀಡಿ ಸಂಸ್ಥೆಗಳಿಂದ ಉದ್ಯೋಗ ನಿರಾಕರಣೆ: ಕಲ್ಕತ್ತಾ ಹೈಕೋರ್ಟ್‌

ಉದ್ಯೋಗ ಸೃಷ್ಟಿಸುವಲ್ಲಿ ವ್ಯವಸ್ಥೆಯಲ್ಲಿ ಲೋಪ ಉಂಟಾಗಿದ್ದು, ಯುವ ಜನತೆ ಉದ್ಯೋಗ ಹುಡುಕುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಯುವಕರ ನಿರುದ್ಯೋಗವು ಮಿತಿಮೀರಿದೆ ಎಂದು ನ್ಯಾ. ಶೇಖರ್‌ ಬಿ. ಸರಾಫ್‌ ಬೇಸರಿಸಿದರು.

Bar & Bench

ಉದ್ಯೋಗ ಸೃಷ್ಟಿಸಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ವ್ಯಾಪಕವಾಗುತ್ತಿದೆ ಎಂದು ಗುರುವಾರ ಕಲ್ಕತ್ತಾ ಹೈಕೋರ್ಟ್‌ ಕಳಕಳಿ ವ್ಯಕ್ತಪಡಿಸಿದೆ [ಅರ್ನಬ್‌ ರಾಯ್‌ ವರ್ಸಸ್‌ ಪಶ್ಚಿಮ ಬಂಗಾಳ ರಾಜ್ಯ].

ಉದ್ಯೋಗ ಸೃಷ್ಟಿಸಲು ವ್ಯವಸ್ಥೆ ವಿಫಲವಾಗಿರುವುದರಿಂದ ಯುವಕರು ಉದ್ಯೋಗ ಹುಡುಕುವುದನ್ನು ನಿಲ್ಲಿಸಿದ್ದಾರೆ. ನಿರುದ್ಯೋಗ ಸಮಸ್ಯೆಯು ಮಿತಿಮೀರಿದೆ ಎಂದು ನ್ಯಾಯಮೂರ್ತಿ ಶೇಖರ್‌ ಬಿ. ಸರಾಫ್‌ ಹೇಳಿದ್ದಾರೆ.

“ಭಾರತದಲ್ಲಿ ನಿರುದ್ಯೋಗ ಸಮಸ್ಯೆಯು ವ್ಯಾಪಕವಾಗಿದ್ದು, ಉದ್ಯೋಗ ಸೃಷ್ಟಿಗೆ ಸೂಕ್ತವಾದ ವ್ಯವಸ್ಥೆ ಇಲ್ಲದಿರುವುದರಿಂದ ಅಪಾರ ಪ್ರಮಾಣದ ಜನತೆಯು ನಿರುದ್ಯೋಗಿಗಳಾಗಿದ್ದಾರೆ. ವ್ಯವಸ್ಥೆಯಿಂದ ರೋಸಿ ಹೋಗಿರುವ ಹಲವರು ಉದ್ಯೋಗ ಹುಡುಕುವುದನ್ನು ನಿಲ್ಲಿಸಿದ್ದಾರೆ. ಯುವಕರ ನಿರುದ್ಯೋಗವು ಹಿಂದೆಂದಿಗಿಂತಲೂ ಅತಿ ಹೆಚ್ಚು ಪ್ರಮಾಣದಲ್ಲಿದೆ” ಎಂದು ಪೀಠ ಹೇಳಿದೆ.

ಸಂಸ್ಥೆಗಳು ಜನತೆಯು ಸಕ್ರಿಯವಾಗಿ ಉದ್ಯೋಗ ಹುಡುಕಾಟದಲ್ಲಿ ತೊಡಗುವಂತೆ ಮಾಡುವ ಮೂಲಕ ರಾಷ್ಟ್ರ ನಿರ್ಮಾಣ ಮಾಡುವುದಕ್ಕೆ ಬದಲಾಗಿ ಕೇವಲ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಉದ್ಯೋಗ ನಿರಾಕರಿಸುವ ಮೂಲಕ ಯುವಕರನ್ನು ಹತಾಶಗೊಳಿಸುತ್ತಿವೆ. ಈ ಸಂಸ್ಥೆಗಳು ವಿಶೇಷ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿವೆ ಎಂದು ನ್ಯಾಯಾಲಯ ಹೇಳಿದೆ.

ಗುಮಾಸ್ತ ಮತ್ತು ಪ್ರಯೋಗಾಲಯದ ಸಹಾಯಕರ ಹುದ್ದೆಗಳಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಮೇಲಿನಂತೆ ಹೇಳಿದೆ.