ದೇಶದ ಯುವಜನರು ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡುತ್ತಿದ್ದು ಈ ವಿಧದಲ್ಲಿ ನಿಜವಾದ ಆತ್ಮ ಸಂಗಾತಿಯನ್ನು ಹುಡುಕಿಕೊಳ್ಳಲು ವಿಫಲವಾದರೂ ಕೂಡ ವಿರುದ್ಧ ಲಿಂಗದವರೊಂದಿಗೆ ಮುಕ್ತ ಸಂಬಂಧ ಬೆಳೆಸುವ ಆಮಿಷಕ್ಕೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಅಲಾಹಾಬಾದ್ ಹೈಕೋರ್ಟ್ ಈಚೆಗೆ ಕಳವಳ ವ್ಯಕ್ತಪಡಿಸಿದೆ [ಜೈ ಗೋವಿಂದ್ ಮತ್ತು ಸರ್ಕಾರ ನಡುವಣ ಪ್ರಕರಣ].
ಸಾಮಾಜಿಕ ಮಾಧ್ಯಮಗಳು, ಚಲನಚಿತ್ರಗಳು, ಟಿವಿ ಧಾರಾವಾಹಿಗಳು ಮತ್ತು ವೆಬ್ ಸರಣಿಗಳ ಪ್ರಭಾವಕ್ಕೆ ಒಳಗಾಗಿರುವ ದೇಶದ ಯುವಜನರು ಆಗಾಗ್ಗೆ ತಪ್ಪು ವ್ಯಕ್ತಿಗಳ ಸಹವಾಸ ಮಾಡುತ್ತಾರೆ ಎಂದು ನ್ಯಾಯಾಲಯ ಹೇಳಿದೆ.
ಪರಿಣಾಮ ಮದುವೆಯಾಗುವ ಸುಳ್ಳು ಭರವಸೆ ಮೇಲೆ ಅತ್ಯಾಚಾರ ಎಸಗುವ, ಆತ್ಮಹತ್ಯೆಗೆ ಪ್ರಚೋದನೆ ನೀಡುವ, ಕೊಲೆ ಅಥವಾ ಅಪರಾಧಿಕ ನರಹತ್ಯೆ ಮತ್ತು ಆ ಸಂಬಂಧದ ವೇಳೆ ಉಂಟಾದ ಭಿನ್ನಾಭಿಪ್ರಾಯಗಳಿಗೆ ಸುಳ್ಳು ದೂರು ನೀಡುವಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂಬುದಾಗಿ ನ್ಯಾ. ಸಿದ್ಧಾರ್ಥ್ ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯೊಬ್ಬಳ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿಗೆ ಜಾಮೀನು ನೀಡುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ʼಆಕೆ ಬೇರೆ ಬೇರೆ ಯುವಕರೊಂದಿಗೆ ಸಂಬಂಧ ಹೊಂದಿದ್ದರುʼ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
"ದೇಶದ ಯುವಜನರು ಪಾಶ್ಚಾತ್ಯ ಸಂಸ್ಕೃತಿ ಅನುಕರಣೆ ಮಾಡುತ್ತಿದ್ದು ನಿಜವಾದ ಆತ್ಮ ಸಂಗಾತಿಯನ್ನು ಹುಡುಕಿಕೊಳ್ಳಲು ವಿಫಲವಾದರೂ ವಿರುದ್ಧ ಲಿಂಗದವರೊಂದಿಗೆ ಮುಕ್ತ ಸಂಬಂಧ ಬೆಳೆಸುವ ಆಮಿಷಕ್ಕೆ ಬಲಿಯಾಗಿ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ" ಎಂದು ಪೀಠ ಆತಂಕ ವ್ಯಕ್ತಪಡಿಸಿದೆ.
"ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ತಿಳಿದಿಲ್ಲದ ಯುವ ಪೀಳಿಗೆಯು ಸಾಮಾಜಿಕ ಮಾಧ್ಯಮ, ಚಲನಚಿತ್ರ ಇತ್ಯಾದಿಗಳಲ್ಲಿ ಪ್ರಸಾರವಾಗುವ ಸಂಬಂಧಗಳನ್ನು ಅನುಕರಣೆ ಮಾಡಿ ನಂತರ ತಮ್ಮ ಸಂಗಾತಿಯ ಆಯ್ಕೆಯನ್ನು ಸಮಾಜ ನಿರಾಕರಿಸಿದಾಗ ಭ್ರಮನಿರಸನಕ್ಕೊಳಗಾಗಿ ಕೆಲವೊಮ್ಮೆ ಸಮಾಜದ ವಿರುದ್ಧ, ಕೆಲವೊಮ್ಮೆ ಪೋಷಕರ ವಿರುದ್ಧ ಹಾಗೂ ಇನ್ನೂ ಕೆಲವೊಮ್ಮೆ ತಮ್ಮ ಸಂಗಾತಿಯ ವಿರುದ್ಧ ವರ್ತಿಸಲು ತೊಡಗುತ್ತಾರೆ" ಎಂದು ಕೂಡ ನ್ಯಾಯಾಲಯ ತಿಳಿಸಿದೆ.
ತಾವು ಬೆಳೆಸಿದ ಸಂಬಂಧಗಳ ಬಗ್ಗೆ ಸ್ಪಷ್ಟ ಮಾರ್ಗ ಕಂಡುಕೊಳ್ಳಲು ವಿಫಲವಾದ ಕಾರಣಕ್ಕೆ ಮಹಿಳೆ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ತಿಳಿಸಿದ ಪೀಠ ಅರ್ಜಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಅವಕಾಶ ಮಾಡಿಕೊಟ್ಟಿತು. ಜೊತೆಗೆ ವಿಚಾರಣೆಯನ್ನು ತ್ವರಿತಗೊಳಿಸಿ ಎರಡು ವರ್ಷಗಳ ಒಳಗೆ ಅದನ್ನು ಮುಕ್ತಾಯಗೊಳಿಸುವಂತೆ ಕೆಳ ನ್ಯಾಯಾಲಯಕ್ಕೆ ನಿರ್ದೇಶಿಸಿತು.