Third Eye YouTube channel and Supreme Court  
ಸುದ್ದಿಗಳು

ಧರ್ಮಸ್ಥಳ ಪ್ರಕರಣ: ಮಾಧ್ಯಮ ನಿರ್ಬಂಧ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಯೂಟ್ಯೂಬ್ ವಾಹಿನಿ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕರೊಬ್ಬರು ಮಾಡಿದ ಆರೋಪಗಳನ್ನು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು.

Bar & Bench

ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಸಹೋದರ ಹರ್ಷೇಂದ್ರ ಕುಮಾರ್ ಡಿ ಅವರ ವಿರುದ್ಧ ಯಾವುದೇ ಅವಹೇಳನಕಾರಿ ವಸ್ತು ವಿಷಯ ಪ್ರಕಟಿಸದಂತೆ ಹಾಗೂ ಪ್ರಸಾರ ಮಾಡದಂತೆ ಮಾಧ್ಯಮ ಸಂಸ್ಥೆಗಳು ಮತ್ತು ಯೂಟ್ಯೂಬ್‌ ವಾಹಿನಿಗಳಿಗೆ ನಿರ್ಬಂಧ ವಿಧಿಸಿದ್ದ ಬೆಂಗಳೂರು ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಪ್ರಶ್ನಿಸಿ ಯೂಟ್ಯೂಬ್‌ ವಾಹಿನಿ ʼಥರ್ಡ್‌ ಐʼ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಸೆಷನ್ಸ್ ನ್ಯಾಯಾಲಯದಿಂದ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ಹರ್ಷೇಂದ್ರ ಕುಮಾರ್‌ ಅವರು ನ್ಯಾಯಾಂಗ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದು ತಪ್ಪು ಮಾಹಿತಿ ನೀಡಿ ಸೆಷನ್ಸ್‌ ನ್ಯಾಯಾಲಯದಿಂದ ಆದೇಶ ಪಡೆದಿದ್ದಾರೆ ಎಂದು ಅರ್ಜಿ ದೂರಿದೆ.

ಇದು ಧರ್ಮಸ್ಥಳದಲ್ಲಿ ಕೊಲೆಯಾದ ಶವಗಳನ್ನು ಹೂತಿಟ್ಟ ಪ್ರಕರಣ ಮತ್ತಿತರ ಗಂಭೀರ ಅಪರಾಧಗಳ ಕುರಿತು ಸರ್ಕಾರ ನಡೆಸುತ್ತಿರುವ ಉನ್ನತ ಮಟ್ಟದ ತನಿಖೆಗೆ ನೇರವಾಗಿ ಅಡ್ಡಿ ಉಂಟುಮಾಡುತ್ತದೆ ಎಂದು ಅದು ಹೇಳಿದೆ.

ಇದು ವಾಕ್ ಮತ್ತು ಪತ್ರಿಕಾ (ಸಂವಿಧಾನದ 19(1)(ಎ) ವಿಧಿ) ಸ್ವಾತಂತ್ರ್ಯ,  ಸ್ವಾಭಾವಿಕ ನ್ಯಾಯ ಮತ್ತು ನ್ಯಾಯ ಪ್ರಕ್ರಿಯೆಗೆ ಸಂಬಂಧಿಸಿದ ಮೂಲಭೂತ ಹಕ್ಕುಗಳ (ಸಂವಿಧಾನದ 21ನೇ ವಿಧಿ) ಮೇಲಿನ ನೇರ ದಾಳಿ ಎಂದು ಅರ್ಜಿ ವಿವರಿಸಿದೆ.

ಧರ್ಮಸ್ಥಳದಲ್ಲಿ ಕೊಲೆಯಾದ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಸ್ವಚ್ಛತಾ ಕಾರ್ಮಿಕರೊಬ್ಬರು ಮಾಡಿದ ಆರೋಪಗಳನ್ನು ವಿವಿಧ ಮಾಧ್ಯಮಗಳು ವರದಿ ಮಾಡಿದ್ದವು. ಧರ್ಮಸ್ಥಳ ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದಾಗ ಮೇಲ್ವಿಚಾರಕರು ತನಗೆ ಬೆದರಿಕೆ ಹಾಕಿ ಶವಗಳನ್ನು ಹೂಳುವಂತೆ ಒತ್ತಾಯಿಸಿದ್ದಾರೆ ಎಂದು ಸ್ವಚ್ಛತಾ ಕಾರ್ಮಿಕ ದೂರು ದಾಖಲಿಸಿದ್ದರು. ಆದರೆ ಕೃತ್ಯದಲ್ಲಿ ನಿರ್ದಿಷ್ಟ ವ್ಯಕ್ತಿಗಳನ್ನು ಅವರು ಹೆಸರಿಸಿರಲಿಲ್ಲ.

ಧರ್ಮಸ್ಥಳದ ಶ್ರೀ ಮಂಜುನಾಥಸ್ವಾಮಿ ದೇವಾಲಯ ಹಾಗೂ ಸಂಸ್ಥೆಗಳ ಕಾರ್ಯದರ್ಶಿಯಾಗಿರುವ ಹರ್ಷೇಂದ್ರ ಕುಮಾರ್ ಅವರು ಆ ಬಳಿಕ ಮಾನಹಾನಿ ಮೊಕದ್ದಮೆ ಹೂಡಿದ್ದರು. 4,140 ಯೂಟ್ಯೂಬ್ ವಿಡಿಯೋಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡ್ಡಿಟ್ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳು ಸೇರಿದಂತೆ 8,842 ಲಿಂಕ್‌ಗಳ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಎಫ್‌ಐಆರ್‌ನಲ್ಲಿ ತಮ್ಮ ವಿರುದ್ಧ ಆರೋಪಗಳು ಇಲ್ಲದಿದ್ದರೂ ತಮ್ಮ ಕುಟುಂಬ, ದೇವಾಲಯ ಹಾಗೂ ಸಂಸ್ಥೆಗಳ ವಿರುದ್ಧ ಆನ್‌ಲೈನ್‌ನಲ್ಲಿ ಮತ್ತು ಮಾಧ್ಯಮಗಳಲ್ಲಿ ಸುಳ್ಳು ಹಾಗೂ ಮಾನಹಾನಿಕರ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಹರ್ಷೇಂದ್ರ ಕುಮಾರ್‌ ಆರೋಪಿಸಿದ್ದರು. 

2012ರ ಎಫ್‌ಐಆರ್‌ನಲ್ಲಿ ತಮ್ಮನ್ನು ದೋಷಮುಕ್ತಗೊಳಿಸಲಾಗಿದ್ದು ಇತ್ತೀಚಿನ ಮತ್ತೊಂದು ಎಫ್‌ಐಆರ್‌ನಲ್ಲಿ ತಮ್ಮ ಅಥವಾ ತಮ್ಮ ಸಂಸ್ಥೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಅವರು ತಿಳಿಸಿದ್ದರು.

ವಾದ ಆಲಿಸಿದ್ದ ಹೆಚ್ಚುವರಿ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶ  ವಿಜಯ ಕುಮಾರ್ ರೈ ಅವರು, ಮುಂದಿನ ವಿಚಾರಣೆಯವರೆಗೆ ಡಿಜಿಟಲ್, ಸಾಮಾಜಿಕ ಅಥವಾ ಮುದ್ರಣ ಮಾಧ್ಯಮಗಳಲ್ಲಿ ಯಾವುದೇ ಮಾನಹಾನಿಕರ ವಸ್ತುವಿಷಯ ಪ್ರಕಟಿಸದಂತೆ ಇಲ್ಲವೇ ಹಂಚದಂತೆ ಪ್ರತಿವಾದಿಗಳು ಮತ್ತು ಅಪರಿಚಿತ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸಿದ್ದರು.

ಇದೇ ವೇಳೆ, ಈಗಾಗಲೇ ಪ್ರಕಟವಾಗಿರುವ ಮಾನಹಾನಿಕರ ವಿಷಯಗಳನ್ನು ಕಡ್ಡಾಯವಾಗಿ ತೆಗೆದು ಹಾಕಲು ಸೂಚಿಸಿದ ನ್ಯಾಯಾಲಯವು ಮರು ಇಂಡೆಕ್ಸ್‌ ಮಾಡುವ ಮೂಲಕ ಇದೇ ಸುದ್ದಿಗಳನ್ನು ಪ್ರಕಟಿಸುವುದನ್ನು ಸಹ ನಿರ್ಬಂಧಿಸಿತು.

ಮುಂದುವರೆದು, "ಪ್ರತಿಯೊಬ್ಬ ನಾಗರಿಕರ ಖ್ಯಾತಿಯು ಬಹಳ ಮುಖ್ಯವಾದದ್ದಾಗಿದೆ. ಸಂಸ್ಥೆ ಮತ್ತು ದೇವಾಲಯಗಳ ವಿರುದ್ಧ ಆರೋಪ ಬಂದಾಗ, ಅದು ವಿವಿಧ ಕಾಲೇಜುಗಳು ಮತ್ತು ಶಾಲೆಗಳಲ್ಲಿ ಓದುತ್ತಿರುವ ಉದ್ಯೋಗಿಗಳು ಮತ್ತು ವಿದ್ಯಾರ್ಥಿಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಜನರ ಮೇಲೆ ಪರಿಣಾಮ ಬೀರುತ್ತದೆ ಎಂಬ ಅಂಶವನ್ನು ನ್ಯಾಯಾಲಯವು ನಿರ್ಲಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ, ಒಂದೇ ಒಂದು ಸುಳ್ಳು ಮತ್ತು ಮಾನಹಾನಿಕರ ಪ್ರಕಟಣೆಯು ಸಹ ಸಂಸ್ಥೆಗಳ ಕಾರ್ಯನಿರ್ವಹಣೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ" ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ದಾಖಲಿಸಿದೆ..