Yuva Rajkumar and Sridevi Yuva Twitter
ಸುದ್ದಿಗಳು

ಯುವ-ಶ್ರೀದೇವಿ ವಿಚ್ಛೇದನ ಪ್ರಕರಣ: ಮಧ್ಯಸ್ಥಿಕೆ ಸಮಾಲೋಚನೆಗೆ ಶಿಫಾರಸ್ಸು ಮಾಡಿದ ಕೌಟುಂಬಿಕ ನ್ಯಾಯಾಲಯ

ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು 1ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಎಂ ಎಸ್ ಅವರು ವಿಚಾರಣೆ ನಡೆಸಿದರು.

Bar & Bench

ಮೇರುನಟ ಡಾ. ರಾಜ್‌ಕುಮಾರ್‌ ಅವರ ಮೊಮ್ಮಗ ಯುವ ರಾಜ್‌ಕುಮಾರ್‌ ಮತ್ತು ಅವರ ಪತ್ನಿ ಶ್ರೀದೇವಿ ಅವರ ವಿಚ್ಛೇದನ ಪ್ರಕರಣದ ಮಧ್ಯಸ್ಥಿಕೆ ಸಮಾಲೋಚನೆಯನ್ನು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯವು ಆಗಸ್ಟ್‌ 23ಕ್ಕೆ ನಿಗದಿಪಡಿಸಿ ಗುರುವಾರ ಆದೇಶಿಸಿದೆ. ಮಧ್ಯಸ್ಥಿಕೆದಾರರು ಪತಿ-ಪತ್ನಿಯರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.

ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು 1ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶೆ ಕಲ್ಪನಾ ಎಂ ಎಸ್ ಅವರು ವಿಚಾರಣೆ ನಡೆಸಿದರು.

ಶ್ರೀದೇವಿ ಪರ ವಕೀಲೆ ದೀಪ್ತಿ ಅವರು ಯುವ ರಾಜ್‌ ಅವರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ, ವಾದ ಮಂಡಿಸಲು ಅವಕಾಶ ಕೋರಿದರು.

ಆಗ ಪೀಠವು ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಮೊದಲು ಪತಿ-ಪತ್ನಿಯರ ಸಮಾಲೋಚನೆ ನಡೆಸಲಾಗುತ್ತದೆ. ಅಲ್ಲಿ ಪ್ರಕ್ರಿಯೆ ಮುಗಿದ ಬಳಿಕ ಪಕ್ಷಕಾರರ ತೀರ್ಮಾನದ ವರದಿ ಪಡೆಯಲಾಗುತ್ತದೆ. ಆನಂತರ ವಿಚ್ಛೇದನಕ್ಕೆ ಸಲ್ಲಿಕೆಯಾಗಿರುವ ಆಕ್ಷೇಪಣೆಯ ಕುರಿತು ವಾದ ಆಲಿಸಲಾಗುವುದು ಎಂದಿತು. ಅಂತಿಮವಾಗಿ ವಿಚಾರಣೆಯನ್ನು ಆಗಸ್ಟ್‌ 23ಕ್ಕೆ ಮುಂದೂಡಿತು.

ನಟ ರಾಘವೇಂದ್ರ ರಾಜ್‌ಕುಮಾರ್ ಪುತ್ರ ಯುವ ಮತ್ತು ಶ್ರೀದೇವಿ ಪ್ರೀತಿಸಿ 2019ರ ಮೇ 25ರಂದು ಅದ್ಧೂರಿಯಾಗಿ ಮದುವೆಯಾಗಿದ್ದರು. ವಿಚ್ಛೇದನ ಪಡೆಯುವ ವಿಚಾರವಾಗಿ ಪತ್ನಿಗೆ ಯುವ ರಾಜ್‌ಕುಮಾರ್‌ ಲೀಗಲ್‌ ನೋಟಿಸ್ ನೀಡಿದ್ದರು. ಅದಕ್ಕೆ ಶ್ರೀದೇವಿ ಉತ್ತರ ನೀಡಿದ್ದರು. ಈಗ ವಿವಾಹ ರದ್ದತಿ ಕೋರಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್‌ 13(1)(ಐಎ) ಅಡಿಯಲ್ಲಿ ಯುವ ರಾಜ್‌ಕುಮಾರ್‌ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ 2024ರ ಜೂನ್‌ 6ರಂದು ಅರ್ಜಿ ಸಲ್ಲಿಸಿದ್ದರು.