Karnataka HC and election 
ಸುದ್ದಿಗಳು

ಜಿಲ್ಲಾ, ತಾಲ್ಲೂಕು ಪಂಚಾಯಿತಿ ಚುನಾವಣೆ ವಿಳಂಬ: ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿ ಕಾಲಾವಕಾಶ ವಿಸ್ತರಿಸಿದ ಹೈಕೋರ್ಟ್‌

ತಲಾ ಎರಡು ಲಕ್ಷ ರೂಪಾಯಿಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರು ವಕೀಲರ ಸಂಘ ಹಾಗೂ ಒಂದು ಲಕ್ಷ ರೂಪಾಯಿಯನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಯಲ್ಲಿ ಠೇವಣಿ ಇಡಬೇಕು ಎಂದು ಆದೇಶಿಸಿರುವ ನ್ಯಾಯಾಲಯ.

Bar & Bench

ರಾಜ್ಯದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕ್ಷೇತ್ರಗಳ ಪುನರ್‌ ವಿಂಗಡಣೆ ಮತ್ತು ಹಿಂದುಳಿದ ವರ್ಗಗಳೂ ಸೇರಿದಂತೆ ಇತರೆ ಸಮುದಾಯಗಳಿಗೆ ಕಾಲಮಿತಿಯಲ್ಲಿ ಮೀಸಲಾತಿ ನಿಗದಿಪಡಿಸಲು ವಿಫಲವಾಗಿರುವ ರಾಜ್ಯ ಸರ್ಕಾರಕ್ಕೆ ಬುಧವಾರ ₹5 ಲಕ್ಷ ದಂಡ ವಿಧಿಸಿರುವ ಕರ್ನಾಟಕ ಹೈಕೋರ್ಟ್‌, ಇಡೀ ಪ್ರಕ್ರಿಯೆ ಪೂರ್ಣಗೊಳಿಸಲು ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗಕ್ಕೆ ಫೆಬ್ರವರಿವರೆಗೆ ಕಾಲಾವಕಾಶ ನೀಡಿದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವು ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಅರ್ಜಿ ಸಲ್ಲಿಸಿದೆ. ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ, ಅರ್ಜಿ ಮಾನ್ಯ ಮಾಡಲಾಗಿದೆ. ಅರ್ಜಿದಾರರಿಗೆ ಅರ್ಜಿಯಲ್ಲಿ ತಿದ್ದುಪಡಿ ಮಾಡಿ, ಸೀಮಾ ನಿರ್ಣಯ ಆಯೋಗವನ್ನು ಪಕ್ಷಕಾರರನ್ನಾಗಿಸಲು ಆದೇಶಿಸಲಾಗಿದೆ. ಶುಕ್ರವಾರದೊಳಗೆ ಅರ್ಜಿ ತಿದ್ದುಪಡಿ ಮಾಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ಸೂಚಿಸಿದೆ.

“ರಾಜ್ಯ ಸರ್ಕಾರ ಮತ್ತು ಸೀಮಾ ನಿರ್ಣಯ ಆಯೋಗದ ಕಾರ್ಯವೈಖರಿಗೆ ನಮ್ಮ ಸಹಮತವಿಲ್ಲ. ನ್ಯಾಯದಾನದ ದೃಷ್ಟಿಯಿಂದ 2023ರ ಫೆಬ್ರವರಿ 2ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವುದಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ನಿಗದಿಪಡಿಸುವುದರ ಕುರಿತು ಫೆಬ್ರವರಿ 1ರ ಒಳಗೆ ಆಯೋಗ ಮತ್ತು ರಾಜ್ಯ ಸರ್ಕಾರವು ಅಗತ್ಯವಾದ ಎಲ್ಲಾ ಕ್ರಮಕೈಗೊಳ್ಳಬೇಕು. ಫೆಬ್ರವರಿ 2ರ ಒಳಗೆ ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಸ್ಪಷ್ಟಪಡಿಸಿದೆ.

“2023ರ ಜನವರಿ 28ರ ಒಳಗೆ ಐದು ಲಕ್ಷ ರೂಪಾಯಿ ದಂಡದ ಮೊತ್ತವನ್ನು ಪಾವತಿಸುವುದನ್ನು ಆಧರಿಸಿ ರಾಜ್ಯ ಸರ್ಕಾರದ ಕಾಲಾವಕಾಶ ವಿಸ್ತರಣೆ ಮನವಿಯನ್ನು ಪರಿಗಣಿಸಲಾಗಿದೆ. ಈ ಪೈಕಿ ತಲಾ ಎರಡು ಲಕ್ಷ ರೂಪಾಯಿಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಬೆಂಗಳೂರು ವಕೀಲರ ಸಂಘ ಹಾಗೂ ಒಂದು ಲಕ್ಷ ರೂಪಾಯಿಯನ್ನು ವಕೀಲರ ಗುಮಾಸ್ತರ ಕಲ್ಯಾಣ ನಿಧಿಯಲ್ಲಿ ಠೇವಣಿ ಇಡಬೇಕು” ಎಂದು ಆದೇಶದಲ್ಲಿ ವಿವರಿಸಲಾಗಿದೆ.

“ಆರು ತಿಂಗಳ ಕಾಲಾವಕಾಶ ನೀಡಿದರೂ ಸರ್ಕಾರವು ನ್ಯಾಯಾಲಯದ ಆದೇಶ ಪಾಲಿಸಿಲ್ಲ. ಸರ್ಕಾರದ ಪ್ರಾಧಿಕಾರಗಳು ಬಸವನ ಹುಳದ ರೀತಿಯಲ್ಲಿ ಸಾಗುತ್ತಿವೆ. ರಾಜ್ಯ ಸರ್ಕಾರವು ಎರಡು ಬಾರಿ ಕಾಲಾವಕಾಶ ವಿಸ್ತರಣೆ ಕೋರಿದ್ದು, ಸೆಪ್ಟೆಂಬರ್‌ 23ರಂದು ರಾಜ್ಯ ಚುನಾವಣಾ ಆಯೋಗದ ಸಮನ್ವಯದೊಂದಿಗೆ 12 ವಾರಗಳಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಮತ್ತು ಮೀಸಲಾತಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಅಡ್ವೊಕೇಟ್‌ ಜನರಲ್‌ ಅವರು ತಿಳಿಸಿದ್ದರು. ಈಗ ಹೊಸ ಪಕ್ಷಕಾರರಾಗಲು ಕೋರಿ ಮಧ್ಯಪ್ರವೇಶ ಮನವಿ ಸಲ್ಲಿಸಿರುವ ಸೀಮಾ ನಿರ್ಣಯ ಆಯೋಗವು ಈಗ ಮೂರು ತಿಂಗಳ ಕಾಲಾವಕಾಶ ಕೋರುತ್ತಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ರಾಜ್ಯ ಸರ್ಕಾರ ಮತ್ತು ಕ್ಷೇತ್ರ ಪುನರ್‌ ವಿಂಗಡಣಾ ಆಯೋಗದ ಕಾರ್ಯವೈಖರಿಯು ಸೂಕ್ತ ಕ್ರಮಕೈಗೊಳ್ಳಲು, ಕಾನೂನು ಪಾಲಿಸಲು ಮತ್ತು ಸುಪ್ರೀಂ ಕೋರ್ಟ್‌ ಆದೇಶ ಪಾಲಿಸುವ ನಿಟ್ಟಿನಲ್ಲಿ ಸಕಾರಾತ್ಮಕವಾಗಿಲ್ಲ. ಒಂದಲ್ಲಾ ಒಂದು ನೆಪವೊಡ್ಡಿ ಕಾಲಾವಕಾಶ ಕೋರುವುದು ಮತ್ತು ಈ ನ್ಯಾಯಾಲಯದ ಆದೇಶವನ್ನು ನಿಷ್ಕ್ರಿಯಗೊಳಿಸುವ ಕೆಲಸ ಮಾಡಲಾಗಿದೆ ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲ” ಎಂದು ಪೀಠ ಆದೇಶದಲ್ಲಿ ಹೇಳಿದೆ.

ಕರ್ನಾಟಕ ಪಂಚಾಯತ್‌ ರಾಜ್‌ ಸೀಮಾ ನಿರ್ಣಯ ಆಯೋಗವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್‌ ಎಸ್‌ ಪಾಟೀಲ್‌ ಅವರು “ಕ್ಷೇತ್ರ ಪುನರ್‌ ವಿಂಗಡಣೆ ಕರಡು ಪೂರ್ಣಗೊಳಿಸಲು ಮತ್ತು ಕ್ಷೇತ್ರ ಪುನರ್‌ ವಿಂಗಡಣೆ ಅಂತಿಮ ಅಧಿಸೂಚನೆ ಪ್ರಕಟಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು” ಎಂದು ಕೋರಿದರು.

ರಾಜ್ಯ ಚುನಾವಣಾ ಆಯೋಗವನ್ನು ಹಿರಿಯ ವಕೀಲ ಕೆ ಎನ್‌ ಫಣೀಂದ್ರ, ರಾಜ್ಯ ಸರ್ಕಾರವನ್ನು ವಕೀಲೆ ಪ್ರತಿಮಾ ಹೊನ್ನಾಪುರ ಪ್ರತಿನಿಧಿಸಿದ್ದರು.