Mohammed Zubair, Delhi High Court
Mohammed Zubair, Delhi High Court 
ಸುದ್ದಿಗಳು

ನಿರ್ದಿಷ್ಟ ಸಮುದಾಯದ ವಿರುದ್ಧ ಜುಬೈರ್ ಟ್ವೀಟ್, ದ್ವೇಷ ಕೆರಳಿಸಲು ಇಷ್ಟು ಸಾಕು: ದೆಹಲಿ ಹೈಕೋರ್ಟ್‌ಗೆ ಪೊಲೀಸರ ವಿವರಣೆ

Bar & Bench

ಪತ್ರಕರ್ತ, ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರು 1983ರ ಹಿಂದಿ ಚಲನಚಿತ್ರ ದೃಶ್ಯವೊಂದಕ್ಕೆ ಸಂಬಂಧಿಸಿದಂತೆ ಹಂಚಿಕೊಂಡ ಟ್ವೀಟ್ ನಿರ್ದಿಷ್ಟ ಧಾರ್ಮಿಕ ಸಮುದಾಯವನ್ನು ಪ್ರಚೋದಿಸುತ್ತದೆ ಎಂದು ದೆಹಲಿ ಪೊಲೀಸರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.

ಈ ಟ್ವೀಟ್ ಅನ್ನು ಉದ್ದೇಶಪೂರ್ವಕವಾಗಿ ಪ್ರಕಟಿಸಲಾಗಿದ್ದು ಜನರಲ್ಲಿ ದ್ವೇಷದ ಭಾವನೆ  ಹುಟ್ಟುಹಾಕಲು ಇಷ್ಟು ಸಾಕಾಗುತ್ತದೆ ಮತ್ತು ಸಮಾಜದಲ್ಲಿನ ಶಾಂತಿ ಮತ್ತು ನೆಮ್ಮದಿಗೆ ಇದು ಧಕ್ಕೆ ತರುತ್ತದೆ ಎಂದು ಪೊಲೀಸರು ವಿವರಿಸಿದ್ದಾರೆ.

ಹನುಮಾನ್ ಭಕ್ತ್ (@balajikijaiin) ಹೆಸರಿನ ಟ್ವಿಟರ್ ಹ್ಯಾಂಡಲ್ ಮೂಲಕ ಜುಬೈರ್ ಟ್ವೀಟ್‌ನ ವಿರುದ್ಧ ತಮ್ಮ ಕೋಪ, ನೋವು ವ್ಯಕ್ತಪಡಿಸಿದ್ದ ಪೋಸ್ಟ್ ಆಧರಿಸಿ ಜುಬೈರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಜುಬೈರ್‌ ತನಿಖೆಯ ದಿಕ್ಕುತಪ್ಪಿಸಲು ಯತ್ನಿಸಿದ್ದರು. ಒಂದೇ ಪ್ರಶ್ನೆಗೆ ವಿಭಿನ್ನ ಉತ್ತರಗಳನ್ನು ನೀಡಿದ್ದರು. ಕಡೆಗೆ ತನ್ನ ಲ್ಯಾಪ್‌ಟಾಪ್‌ ಮತ್ತೊ ಮೊಬೈಲ್‌ ಬೆಂಗಳೂರಿನ ನಿವಾಸದಲ್ಲಿದೆ ಎಂದು ಬಹಿರಂಗಪಡಿಸಿದ್ದರು. ತನ್ನನ್ನು ಬಂಧಿಸಿದರೆ ತನ್ನ ಫೋನ್ ಮತ್ತು ಲ್ಯಾಪ್‌ಟಾಪ್‌ ನಾಶಪಡಿಸುವಂತೆ ತಮ್ಮ ಕುಟುಂಬಕ್ಕೆ ತಿಳಿಸಿದ್ದರು ಎಂದು ತನಿಖಾಧಿಕಾರಿಗಳು ದೂರಿದ್ದಾರೆ.

ಲ್ಯಾಪ್‌ಟಾಪ್‌ ವಶಪಡಿಸಿಕೊಳ್ಳಲು ಪಟಿಯಾಲಾ ಹೌಸ್ ನ್ಯಾಯಾಲಯ ನೀಡಿದ್ದ ಆದೇಶ ಪ್ರಶ್ನಿಸಿ ಜುಬೈರ್‌ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಈ ಪ್ರತಿಕ್ರಿಯೆ ನೀಡಿದ್ದಾರೆ. ಜುಬೈರ್‌ ಅವರಿಂದ ವಶಪಡಿಸಿಕೊಂಡ ಸಾಧನಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅವುಗಳಲ್ಲಿನ ಮಾಹಿತಿಯನ್ನು ಟ್ವೀಟ್‌ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಡಿಸಬೇಕಿರುವುದರಿಂದ ಅರ್ಜಿಯನ್ನು ಇತ್ಯರ್ಥಪಡಿಸಬೇಕು ಎಂದು ಪೊಲೀಸರು ವಾದಿಸಿದರು. ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 31, 2022ರಂದು ನಡೆಯಲಿದೆ.