ಮಹಾಯುದ್ಧದಿಂದ ಮಹತ್ವದ ಪ್ರಕರಣಗಳವರೆಗೆ: ಚರಿತ್ರೆಯನ್ನೇ ಉಸಿರಾಡುತ್ತಿರುವ ಮದ್ರಾಸ್ ಹೈಕೋರ್ಟ್

ನ್ಯಾಯಾಲಯದ ಅಂಗಳದಲ್ಲಿ ದ್ವೈಮಾಸಿಕ ಪಾರಂಪರಿಕ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅಂತಹ ಒಂದು ನಡಿಗೆಯ ಅನುಭವವನ್ನು ಹಂಚಿಕೊಂಡಿದ್ದಾರೆ ಆಯೇಶಾ ಅರವಿಂದ್. ಅವರ ಲೇಖನದ ಸಂಗ್ರಹಾನುವಾದ ಇಲ್ಲಿದೆ...
Madras Heritage Walk
Madras Heritage Walk

ಮೊದಲನೆಯ ಮಹಾಯುದ್ಧ ಆರಂಭವಾಗಿ ಎರಡು ತಿಂಗಳುಗಳಷ್ಟೇ ಕಳೆದಿದ್ದವು. 1914ರ ಸೆಪ್ಟೆಂಬರ್ 22ರ ರಾತ್ರಿ, ಎಸ್‌ಎಂಎಸ್ ಎಮ್ಡೆನ್‌ ಎಂಬ ಜರ್ಮನ್ ಕ್ರೂಸರ್ ಹಡಗು 'ಮದ್ರಾಸ್' ಬಂದರನ್ನು ಪ್ರವೇಶಿಸಿ ಮನಬಂದಂತೆ ಸಿಡಿಗುಂಡುಗಳನ್ನು ಹಾರಿಸಲಾರಂಭಿಸಿತು. ದಾಳಿಯಲ್ಲಿ ಐವರು ಪ್ರಾಣಬಿಟ್ಟಿದ್ದರು. ಮದ್ರಾಸ್ ಹೈಕೋರ್ಟ್‌ನ ಪೂರ್ವ ಗಡಿ ಗೋಡೆಯ ಒಂದು ಭಾಗ ಈ ದಾಳಿಗೆ ತುತ್ತಾಯಿತು. ಹಾಗೆ ಹಾನಿಗೊಳಗಾದ ಜಾಗದಲ್ಲೇ ಆ ದಾಳಿಯ ಕತೆ ಹೇಳುವ ಫಲಕವೊಂದು ಎದ್ದಿದೆ.

ಸಾರ್ವಜನಿಕರಿಗೆ ಇಂತಹ ರೋಚಕ ಇತಿಹಾಸ ಪರಿಚಯಿಸುವ ದೇಶದ ಏಕೈಕ ಪಾರಂಪರಿಕ  ನ್ಯಾಯಾಲಯ ಮದ್ರಾಸ್‌ ಹೈಕೋರ್ಟ್‌. ಹಾಗೆಂದೇ ಇಲ್ಲಿ ಹಿರಿಯ ನ್ಯಾಯವಾದಿ ಎನ್‌ ಎಲ್‌ ರಾಜಾ ಅವರ ನೇತೃತ್ವದಲ್ಲಿ ದ್ವೈಮಾಸಿಕ ಪಾರಂಪರಿಕ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಇತಿಹಾಸ ಆಸಕ್ತರು, ಕಾನೂನು ವಿದ್ಯಾರ್ಥಿಗಳು, ಹಿರಿಯ ಕಿರಿಯ ನ್ಯಾಯವಾದಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅಂತಹ ಒಂದು ನಡಿಗೆಯ ಅನುಭವವನ್ನು ಹಂಚಿಕೊಂಡಿದ್ದಾರೆ ಆಯೇಶಾ ಅರವಿಂದ್‌.

ನ್ಯಾಯಾಲಯವನ್ನು ಆಗಸ್ಟ್ 15, 1862 ರಂದು ಸ್ಥಾಪಿಸಲಾಯಿತು. ನ್ಯಾಯಾಲಯವು ಜುಲೈ 12, 1892 ರಂದು ಈಗ ಕಾರ್ಯ ನಿರ್ವಹಿಸುತ್ತಿರುವ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಅದಕ್ಕೂ ಮೊದಲು ಬೇರೊಂದು ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ಪಾರಂಪರಿಕ ಕಟ್ಟಡದ ನಿರ್ಮಾತೃ ವಾಸ್ತುಶಿಲ್ಪಿ ಹೆನ್ರಿ ಇರ್ವಿನ್ . ಬ್ರಿಟಿಷರು ಮೂರಿಶ್, ಇಸ್ಲಾಮಿಕ್, ಹಿಂದೂ, ಗೋಥಿಕ್ ಶೈಲಿಯ ಸಂಗಮ ಎಂದು ಭಾವಿಸಿದ ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದ ಅತ್ಯುತ್ತಮ ಉದಾಹರಣೆಯಾಗಿ ನಿಂತಿದೆ ಇದು.

ಆಗಿನ ಕಾಲದಲ್ಲಿಯೇ ಈ ಕಟ್ಟಡ ನಿರ್ಮಾಣಕ್ಕೆ ₹ 13 ಲಕ್ಷ ವೆಚ್ಚವಾಗಿತ್ತು. ಕೆಂಪು ಮೇಲ್ಮೈ ಇಟ್ಟಿಗೆಗಳಿರುವ ಈ ಕಟ್ಟಡದಲ್ಲಿ ಲೆಕ್ಕಕ್ಕೆ ಸಿಗದಷ್ಟು ಕಮಾನುಗಳು, 23 ಗುಮ್ಮಟದ ಮಿನಾರ್‌ಗಳು, ಕೈಯಿಂ ಚಿತ್ರಿಸಲಾದ ಛಾವಣಿಗಳು, ಇಂಗ್ಲೆಂಡ್‌ನಿಂದ ಆಮದು ಮಾಡಿಕೊಂಡ ವರ್ಣಲೇಪಿತ ಗಾಜಿನ ಕಿಟಕಿಗಳು, ಸಂಕೀರ್ಣ ಮರದ ಚೌಕಟ್ಟುಗಳಿಂದ ಕೂಡಿದೆ.

ಈ ನ್ಯಾಯಾಲಯಕ್ಕೆಂದೇ ಪ್ರತ್ಯೇಕ ಪಿನ್‌ ಕೋಡ್‌ (ಪೋಸ್ಟಲ್ ಇಂಡೆಕ್ಸ್ ಸಂಖ್ಯೆ) ಇದೆ ಎಂದರೆ ಅಚ್ಚರಿ ಎನಿಸುವುದಿಲ್ಲವೇ? 600104 ಪಿನ್‌ ಕೋಡ್‌ಗೆ ನೀವು ಅಂಚೆಪತ್ರ ಕಳಿಸಿದರೆ ಅದು ಮದ್ರಾಸ್‌ ಹೈಕೋರ್ಟ್‌ಗೆ ತಲುಪುತ್ತದೆ.

ಮದ್ರಾಸ್‌ ನ್ಯಾಯಾಂಗದ ಇತಿಹಾಸ ಇಲ್ಲಿಗೇ ನಿಲ್ಲುವುದಿಲ್ಲ. ಬ್ರಿಟಿಷರೊಂದಿಗೆ ನ್ಯಾಯವ್ಯವಸ್ಥೆಯೂ ಬಂದಿತ್ತು ಎಂಬುದಕ್ಕೆ ಜುಲೈ 10, 1686 ರಂದು, ಮದ್ರಾಸ್‌ನಲ್ಲಿ ಅಡ್ಮಿರಾಲ್ಟಿ ನ್ಯಾಯಾಲಯವನ್ನು ಸ್ಥಾಪಿಸಿದ್ದು ಸಾಕ್ಷಿ. ಒಂದು ವರ್ಷದ ನಂತರ, ಈಸ್ಟ್ ಇಂಡಿಯಾ ಕಂಪನಿಯು ಅಡ್ಮಿರಾಲ್ಟಿ ನ್ಯಾಯಾಲಯದ ಜಡ್ಜ್‌-ಅಡ್ವೊಕೇಟ್ ಆಗಿ ಕಾರ್ಯನಿರ್ವಹಿಸಲು ಇಂಗ್ಲೆಂಡ್‌ನಿಂದ ಸರ್ ಜಾನ್ ಬಿಗ್ಸ್ ಅವರನ್ನು ಕಳುಹಿಸಿತು.

ನಂತರ, ಸೇಂಟ್ ಜಾರ್ಜ್ ಪಟ್ಟಣವನ್ನು ರೂಪಿಸಲು ಕಂಪನಿಯನ್ನು ಅನುಮತಿಸಿದ ಅದೇ ಚಾರ್ಟರ್ ಮೂಲಕ ಮೇಯರ್ ನ್ಯಾಯಾಲಯವನ್ನು ಸ್ಥಾಪಿಸಲಾಯಿತು. ಅಂತಿಮವಾಗಿ, ಕೋರ್ಟ್ ಆಫ್ ಗವರ್ನರ್ ಮತ್ತು ಕೌನ್ಸಿಲ್ ಅನ್ನು ನ್ಯಾಯಾಂಗದ ಹೈಕೋರ್ಟ್ ಎಂದು ಹೆಸರಿಸಲಾಯಿತು. ನ್ಯಾಯಾಲಯ ಆಗ ವಾರಕ್ಕೆ ಎರಡು ಬಾರಿ ಕಾರ್ಯ ನಿರ್ವಹಿಸುತ್ತಿತ್ತು. ಇದು 12 ತೀರ್ಪುಗಾರರ ಸಹಾಯದಿಂದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ನಿರ್ಧರಿಸುತ್ತಿತ್ತು.

ಬ್ರಿಟಿಷರು 1753ರಲ್ಲಿ ಹೊರಡಿಸಿದ ಮೂಲ ಸನ್ನದಿನ ಪ್ರಕಾರ ಬಾಂಬೆ, ಕಲ್ಕತ್ತಾ ಮತ್ತು ಮದ್ರಾಸ್‌ನಲ್ಲಿ ಪ್ರೆಸಿಡೆನ್ಸಿ ಕೋರ್ಟ್‌ಗಳನ್ನು ಸ್ಥಾಪಿಸಲಾಯಿತು, ಈ ಸನ್ನದಿನ ಪ್ರತಿ ಈಗಲೂ ಮದ್ರಾಸ್ ಉಚ್ಚ ನ್ಯಾಯಾಲಯದ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಇದೇ ಅಂಗಳದಲ್ಲಿ ಈಗ ಬಳಕೆಯಲ್ಲಿ ಇಲ್ಲದ ಲೈಟ್‌ಹೌಸ್‌ (ದೀಪಸ್ತಂಭ) ಕೂಡ ಇದೆ. ಇದು ಇಲ್ಲಿರುವ ಅತ್ಯಂತ ಹಳೆಯ ನಿರ್ಮಿತಿ. ಇದನ್ನು 1838ರಲ್ಲಿ ಕಟ್ಟಲಾಯಿತು. 135-ಅಡಿ-ಎತ್ತರದ ಕಲ್ಲಿನ ರಚನೆಯು ಸುರುಳಿಯಾಕಾರದ ಮೆಟ್ಟಿಲನ್ನು ಒಳಗೊಂಡಿದ್ದು ಮೂಲದಲ್ಲಿ ಎಣ್ಣೆ ಮತ್ತು ಬತ್ತಿಯ ಸಹಾಯದಿಂದ ಬೆಳಗಿ ಹಡಗುಗಳಿಗೆ ಮಾರ್ಗದರ್ಶನ ಮಾಡುತ್ತಿತ್ತು.

ಉಚ್ಚ ನ್ಯಾಯಾಲಯದ ಮುಖ್ಯ ಕಟ್ಟಡದಲ್ಲಿರುವ ಕೇಂದ್ರ ಗುಮ್ಮಟದ ಮಿನಾರ್‌ ಕೂಡ ಲೈಟ್‌ಹೌಸ್‌ ಆಗಿತ್ತು. ಇದು ನಗರದ ಮೂರು ಹಳೆಯ ಲೈಟ್‌ಹೌಸ್‌ಗಳಲ್ಲಿ ಎರಡನೆಯದು. ಸೀಮೆಎಣ್ಣೆ ಸಹಾಯದಿಂದ ಇಲ್ಲಿ ದೀಪ ಬೆಳಗಿಸಲಾಗುತ್ತಿತ್ತು. ಇದರ ಬೆಳಕು 32 ಕಿಲೋಮೀಟರ್ ದೂರದವರೆಗೆ ಗೋಚರಿಸುತ್ತಿತ್ತು. ಲೈಟ್‌ಹೌಸ್‌ ಬುಡದಲ್ಲಿ ಪಾರಂಪರಿಕ ಸಮಿತಿ ಎರಡು ಬಗೆಯ ಛಾಯಾಚಿತ್ರ ಪ್ರದರ್ಶನಗಳಿಗೆ ವ್ಯವಸ್ಥೆ ಮಾಡಿದೆ: ಮೊದಲನೆಯದು ಮದ್ರಾಸ್ ಹೇಗೆ ಭಾರತದ ಮೊದಲ ಆಧುನಿಕ ನಗರ ಎಂಬುದನ್ನು ಬಿಂಬಿಸಿದರೆ ಎರಡನೆಯದು ಜನರ ಕಲ್ಯಾಣಕ್ಕಾಗಿ ಕಾನೂನು ದಿಗ್ಗಜರ ಕೊಡುಗೆಗಳನ್ನು ಬಿಂಬಿಸುತ್ತದೆ.

162 ವರ್ಷಗಳ ಇತಿಹಾಸದಲ್ಲಿ, ಮದ್ರಾಸ್ ಅನೇಕ ಮಹತ್ವದ ತೀರ್ಪುಗಳನ್ನು ನೀಡಿದೆ. ಅವುಗಳಲ್ಲಿ ಗಮನಸೆಳೆಯುವಂತಹವು ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರ ಪಾಲನಾ ಪ್ರಕರಣ (1914), ಥಿಯೋಸಫಿಕಲ್‌ ಸೊಸೈಟಿ ಸ್ಥಾಪಕಿ ಅನ್ನಿ ಬೆಸೆಂಟ್‌ ಅವರು ಖ್ಯಾತ ತತ್ವಜ್ಞಾನಿ ಜಿಡ್ಡು ಕೃಷ್ಣಮೂರ್ತಿ ಅವರನ್ನು ದತ್ತುಮಗನನ್ನಾಗಿ ಸ್ವೀಕರಿಸಿದ್ದರು.  ಅದಕ್ಕೆ ಸಂಬಂಧಿಸಿದ ವಿವಾದವೊಂದು ಈ ನ್ಯಾಯಾಲಯದ ಮೆಟ್ಟಿಲೇರಿತ್ತು. ಲಕ್ಷ್ಮೀಕಾಂತನ್‌ ಕೊಲೆ ಪ್ರಕರಣದಲ್ಲಿ ಇಬ್ಬರು ಸಿನಿಮಾ ಸೂಪರ್‌ ಸ್ಟಾರ್‌ಗಳಾದ ಎನ್‌ಎಸ್ ಕೃಷ್ಣನ್ ಮತ್ತು ಎಂಕೆ ತ್ಯಾಗರಾಜ ಭಾಗವತರ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು (1945) .

ನ್ಯಾಯಾಲಯವು ಟಿ ಮುತ್ತುಸ್ವಾಮಿ ಅಯ್ಯರ್, ಪಿ ವಿ ರಾಜಮನ್ನಾರ್, ವಿ ಎಲ್ ಎಥಿರಾಜ್, ವಿ ಒ ಚಿದಂಬರಂ ಹಾಗೂ ಸಿ ರಾಜಗೋಪಾಲಾಚಾರಿ ಅವರಂತಹ ಕಾನೂನು ದಿಗ್ಗಜರನ್ನೂ ಕಂಡಿದೆ.

Related Stories

No stories found.
Kannada Bar & Bench
kannada.barandbench.com