[ಉಪರಾಷ್ಟ್ರಪತಿ ಚುನಾವಣೆ] ಜಗದೀಪ್ ಧನಕರ್, ಮಾರ್ಗರೇಟ್ ಆಳ್ವ ಮುಖಾಮುಖಿ: ವಿಶೇಷವೆನಿಸುವ ವಕೀಲಿಕೆಯ ರಾಜಕಾರಣದ ಸೊಗಡು

ಇಬ್ಬರೂ ಚುನಾವಣಾ ರಾಜಕಾರಣದ ಸವಿ ಉಂಡವರು. ರಾಜ್ಯಪಾಲ ಹುದ್ದೆ ಇಬ್ಬರಿಗೂ ಒಲಿದು ಬಂದಿದೆ. ವಿವಾದಗಳು ಇಬ್ಬರ ಉಡಿಯಲ್ಲೂ ಇವೆ...
[ಉಪರಾಷ್ಟ್ರಪತಿ ಚುನಾವಣೆ] ಜಗದೀಪ್ ಧನಕರ್, ಮಾರ್ಗರೇಟ್ ಆಳ್ವ ಮುಖಾಮುಖಿ: ವಿಶೇಷವೆನಿಸುವ ವಕೀಲಿಕೆಯ ರಾಜಕಾರಣದ ಸೊಗಡು

ವಕೀಲಿಕೆ ಮಾಡಿದವರೆಲ್ಲಾ ರಾಜಕಾರಣಿಗಳಾಗಲು ಸಾಧ್ಯವಿಲ್ಲ. ರಾಜಕಾರಣಿಗಳೆಲ್ಲಾ ವಕೀಲಿಕೆ ಮಾಡಿರುವುದಿಲ್ಲ. ಹಾಗೆಂದು ರಾಜಕಾರಣದಲ್ಲಿ ಮಿಂಚಿದ ವಕೀಲರಿಗೇನೂ ಕೊರತೆ ಇಲ್ಲ. ಇದನ್ನು ಮತ್ತೆ ನೆನಪಿಸುವಂತೆ ಮಾಡಿರುವುದು ಈ ಬಾರಿಯ ಉಪರಾಷ್ಟ್ರಪತಿ ಚುನಾವಣೆ.

ಬಿಜೆಪಿ ಮುಂದಾಳತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಜಗದೀಪ್‌ ಧನಕರ್‌ ಸ್ಪರ್ಧಿಸುತ್ತಿದ್ದರೆ, ವಿರೋಧಪಕ್ಷಗಳ ಒಕ್ಕೂಟ ಯುಪಿಎ, ಮಾರ್ಗರೇಟ್‌ ಆಳ್ವ ಅವರನ್ನು ಮುಂದಿರಿಸಿ ದಾಳ ಉರುಳಿಸಿದೆ. ಕಣದಲ್ಲಿ ಪೈಪೋಟಿ ಒಡ್ಡುತ್ತಿರುವ ಈ ಇಬ್ಬರೂ ವೃತ್ತಿಯಿಂದ ನ್ಯಾಯವಾದಿಗಳು.

ಇಬ್ಬರೂ ಚುನಾವಣಾ ರಾಜಕಾರಣದ ಸವಿ ಉಂಡವರು. ರಾಜ್ಯಪಾಲ ಹುದ್ದೆ ಇಬ್ಬರಿಗೂ ಒಲಿದು ಬಂದಿದೆ. ಒಬ್ಬರು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದರೆ ಮತ್ತೊಬ್ಬರು ಅದೇ ಖಾತೆಯ ರಾಜ್ಯ ಸಚಿವರಾಗಿದ್ದರು. ಇದೀಗ ಆ ಇಬ್ಬರೂ ಉಪರಾಷ್ಟ್ರಪತಿ ಹುದ್ದೆಗೆ ಸೆಣೆಸುತ್ತಿದ್ದಾರೆ. ಒಬ್ಬರಿಗೆ ರಾಜಸ್ಥಾನ ತವರು ನೆಲವಾದರೆ, ಮತ್ತೊಬ್ಬರು ಅದೇ ರಾಜಸ್ಥಾನದ ರಾಜ್ಯಪಾಲರಾಗಿದ್ದವರು. ವಿವಾದಗಳು ಇಬ್ಬರ ಉಡಿಯಲ್ಲೂ ಇವೆ. ಮತ್ತೊಂದು ವಿಶೇಷ ಎಂದರೆ ಇಬ್ಬರದ್ದೂ ರಾಜಕಾರಣದ ಹಿನ್ನೆಲೆ ಇರುವ ಕುಟುಂಬ.

ಜಗದೀಪ್‌ ಧನಕರ್‌ ವಕೀಲರಾಗಿ ದೀರ್ಘ ಕಾಲ ದುಡಿದು ಬಳಿಕ ರಾಜಕಾರಣ ಪ್ರವೇಶಿಸಿದರೆ ಮಾರ್ಗರೇಟ್‌ ಆಳ್ವ ತಮ್ಮ ಆರಂಭದ ದಿನಗಳಲ್ಲಿ ವಕೀಲರಾಗಿದ್ದರೂ ಸುದೀರ್ಘ ಕಾಲದಿಂದ ರಾಜಕಾರಣದ ಪಡಸಾಲೆಯಲ್ಲಿ ಇರುವವರು. ಧನಕರ್‌ ಚಿಕ್ಕ ವಯಸ್ಸಿನಲ್ಲೇ ರಾಜಸ್ಥಾನ ಹೈಕೋರ್ಟ್‌ ವಕೀಲರ ಸಂಘದ ಚುಕ್ಕಾಣಿ ಹಿಡಿದವರು. 1990ರಿಂದ ಪಶ್ಚಿಮ ಬಂಗಾಳದ ರಾಜ್ಯಪಾಲರಾಗುವವರೆಗೆ ಸುಪ್ರೀಂ ಕೋರ್ಟ್‌ ನ್ಯಾಯವಾದಿಯಾಗಿ ಸದ್ದು ಮಾಡಿದವರು.

ಮಾರ್ಗರೇಟ್‌ ಅವರಿಗೆ ಕಾನೂನು ಅಧ್ಯಯನ ವಕೀಲಿಕೆ ಎಂಬುದು ಅವರ ರಾಜಕೀಯ ಜೀವನಕ್ಕೊಂದು ಚಿಮ್ಮು ಹಲಗೆಯಾಗಿತ್ತು. ಮಂಗಳೂರಿನಲ್ಲಿ ಜನಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದ ಸರ್ಕಾರಿ ಕಾನೂನು ಕಾಲೇಜಿನ ವಿದ್ಯಾರ್ಥಿನಿ. ವಿದ್ಯಾರ್ಥಿದೆಸೆಯಿಂದಲೂ ಹೋರಾಟ, ಸಂಘಟನೆಗಳಲ್ಲಿ ತೊಡಗಿಕೊಂಡಿದ್ದವರು. ವಯಸ್ಸು ಮತ್ತು ರಾಜಕೀಯ ಅನುಭವ ಎರಡರಲ್ಲೂ ಮಾರ್ಗರೇಟ್‌ ಅವರದ್ದು ಒಂದು ಕೈ ಮೇಲು. ಹಾಗೆಂದು ಉಪರಾಷ್ಟ್ರಪತಿ ಹುದ್ದೆ ಅವರಿಗೆ ಸುಲಭದ ತುತ್ತಲ್ಲ. ಸಂಖ್ಯೆ ಎಂಬುದು ಆಟವೊಂದರ ಗೆಲುವಿನಲ್ಲಿ ಹೇಗೆ ಮುಖ್ಯವೋ ಹಾಗೆಯೇ ರಾಜಕಾರಣದಲ್ಲಿ ಕೂಡ ಮುಖ್ಯ.

Also Read
ಉಪ ರಾಷ್ಟ್ರಪತಿ ಚುನಾವಣಾ ಕಣದಲ್ಲಿ ʼಒಲ್ಲದ ಮನಸಿನ ರಾಜಕಾರಣಿʼ ಜಗದೀಪ್ ಧನಕರ್

ಜಗದೀಪ್‌ ರಾಜಸ್ಥಾನದ ಝುಂಝುನು ಲೋಕಸಭಾ ಕ್ಷೇತ್ರ ಮತ್ತು ಕಿಶನ್‌ಗಢ್‌ ವಿಧಾನಸಭಾ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಾರ್ಗರೇಟ್‌ ಉತ್ತರ ಕನ್ನಡದ ಸಂಸದೆಯಾಗಿದ್ದರೂ ರಾಜ್ಯಸಭಾ ಸದಸ್ಯರಾಗಿ ದೊಡ್ಡ ಛಾಪು ಒತ್ತಿದವರು. ಸಂಸದೀಯ ವ್ಯವಹಾರಗಳ ಸಚಿವರಾಗಿ, ಮಾನವ ಸಂಪನ್ಮೂಲ ಸಚಿವರಾಗಿ, ಕೆಲಸ ಮಾಡಿದ ಅವರು ಮಹಿಳೆಯರ ಪ್ರಾತಿನಿಧ್ಯದ ವಿಚಾರದಲ್ಲಿ ಬಹಳಷ್ಟು ಶ್ರಮಿಸಿದವರು. ದೇಶದ ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಿರುವುದರ ಹಿಂದೆ ಮಾರ್ಗರೇಟ್‌ ಅವರ ಶ್ರಮವೂ ಇದೆ.

ಕಾಂಗ್ರೆಸ್‌ ಬೆಂಬಲದೊಂದಿಗೆ ಜೆಡಿಎಸ್‌ನ ಚಂದ್ರಶೇಖರ್‌ ಅವರು ಪ್ರಧಾನಮಂತ್ರಿಯಾಗಿದ್ದ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾಗಿ ಜಗದೀಪ್‌ ಧನಕರ್‌ ಅವರು ಸೇವೆ ಸಲ್ಲಿಸಿದ್ದಾರೆ. ನದಿ ವಿವಾದದಂತಹ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ಬಗೆಹರಿಸುತ್ತಿದ್ದ ಧನಕರ್‌ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ವಿವಾದಗಳನ್ನು ಮೈಮೇಲೆ‌ ಎಳೆದುಕೊಂಡವರು. ಮಮತಾ ಬ್ಯಾನರ್ಜಿ ಅವರ ಕಟು ಟೀಕಾಕಾರರಾಗಿದ್ದ ಧನಕರ್‌ ʼರಾಜಭವನದಲ್ಲಿ ಕುಳಿತ ವಿರೋಧಪಕ್ಷʼ ಎಂದು ಟಿಎಂಸಿಯಿಂದ ಬಣ್ಣಿಸಿಕೊಂಡವರು.

ಮಾರ್ಗರೇಟ್‌ ಆಳ್ವ ಅವರಿಗೂ ವಿವಾದಗಳು ಹೊಸತಲ್ಲ. ಇಂದಿರಾ ಗಾಂಧಿ ಅವರ ನಂಬಿಕಸ್ಥೆ ಎನಿಸಿಕೊಂಡಿದ್ದ ಮಾರ್ಗರೇಟ್‌ ಒಂದು ಹಂತದಲ್ಲಿ ಇಂದಿರಾ ಪಾಳೆಯದಿಂದ ಹೊರಬಂದು ದೇವರಾಜ್‌ ಅರಸು ಮತ್ತು ಶರದ್‌ ಪವಾರ್‌ ಅವರೊಂದಿಗೆ ಗುರುತಿಸಿಕೊಂಡವರು. ರಾಜೀವ್‌ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಮತ್ತೆ ಕಾಂಗ್ರೆಸ್‌ನತ್ತ ಹೊರಳಿದರು. ಅವರ ಆತ್ಮಕತೆ ʼಕರೇಜ್‌ ಅಂಡ್‌ ಕಮಿಟ್‌ಮೆಂಟ್‌ʼ ವಿವಾದಗಳಿಗೆ ತಿದಿ ಒತ್ತಿದ ಕೃತಿ. ಕಾಂಗ್ರೆಸ್‌ ನಾಯಕತ್ವವನ್ನು ಪ್ರಶ್ನಿಸಿದ್ದು, ಆಗಸ್ಟಾವೆಸ್ಟ್‌ಲ್ಯಾಂಡ್‌ ಹಗರಣದಲ್ಲಿ ಕಾಂಗ್ರೆಸ್‌ ನಂಟನ್ನು ಸಾರಿ ಹೇಳಿದ್ದು ಅವರ ದಿಟ್ಟ ನಡೆಗಳಿಗೆ ಸಾಕ್ಷಿ. 2008ರಲ್ಲಿ ತಮ್ಮ ಪುತ್ರನಿಗೆ ಕಾಂಗ್ರೆಸ್ ಟಿಕೆಟ್‌ ಕೈ ತಪ್ಪಿದಾಗ ಎಂಎಲ್‌ಎ ಟಿಕೆಟ್‌ಗಳನ್ನು ಕರ್ನಾಟಕ ಕಾಂಗ್ರೆಸ್‌ ಮಾರಿಕೊಳ್ಳುತ್ತಿದೆ ಎನ್ನುತ್ತ ಎಲ್ಲರ ಹುಬ್ಬೇರುವಂತೆ ಮಾಡಿದ್ದವರು. ಪಕ್ಷದ ನಾಯಕತ್ವದೊಂದಿಗೆ ಅಭಿಪ್ರಾಯಭೇದ ಉಂಟಾದಾಗ ತಮ್ಮ ಹೇಳಿಕೆಗಳ ಮೂಲಕ ಸುದ್ದಿಯಾದವರು.

ಮಾರ್ಗರೇಟ್ ಅವರ ರಾಜಕೀಯ ಜೀವನದುದ್ದಕ್ಕೂ ಕುಟುಂಬ ರಾಜಕಾರಣ ಹಾಸು ಹೊಕ್ಕಾಗಿದೆ. ಅತ್ತೆ ವೈಲೆಟ್‌ ಆಳ್ವ (ಅವರು ಕೂಡ ವಕೀಲೆ. ಹೈಕೋರ್ಟ್‌ ಪೂರ್ಣ ಪೀಠದಲ್ಲಿ ವಾದ ಮಂಡಿಸಿದ ದೇಶದ ಮೊದಲ ಮಹಿಳಾ ನ್ಯಾಯವಾದಿ) ಅವರ ನೆರಳಲ್ಲಿ ಬೆಳೆದ ಮಾರ್ಗರೇಟ್‌ ತಮ್ಮ ಮಗನಿಗೆ ಟಿಕೆಟ್‌ ದೊರೆಯಲಿಲ್ಲ ಎಂದು ಅಸಮಾಧಾನ ತೋಡಿಕೊಳ್ಳುವವರೆಗೆ ಕುಟುಂಬ ರಾಜಕಾರಣ ಅವರ ಜೊತೆ ಇದೆ. ಜಗದೀಪ್‌ ಧನಕರ್‌ ಕುಟುಂಬಕ್ಕೆ ಕೂಡ ಅಷ್ಟಿಷ್ಟು ರಾಜಕಾರಣದ ಸ್ಪರ್ಶ ಇದೆ. ರಾಜಕಾರಣದ ದಾಳಗಳೇನೇ ಇದ್ದರೂ ಕಾನೂನು ಕಲಿಕೆ, ವಕೀಲಿಕೆಯ ಹಿನ್ನೆಲೆಯಿಂದ ಬಂದ ಈ ಇಬ್ಬರೂ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮುಖಾಮುಖಿಯಾಗುತ್ತಿರುವುದು ವಿಶೇಷವಾಗಿದೆ.

Kannada Bar & Bench
kannada.barandbench.com