ನ್ಯಾಯಮೂರ್ತಿ ಅರುಣ್ ಮಿಶ್ರಾ: ಒಂದು ಮೌಲ್ಯಮಾಪನ

ಕಾವಲುಗಾರರು ಅಡ್ಡಾದಿಡ್ಡಿ ವರ್ತಿಸಿದಾಗ ಎಂಥ ಅಪಾಯ ಎದುರಾಗುತ್ತದೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ ನ್ಯಾಯಮೂರ್ತಿ ಮಿಶ್ರಾ ಅವರಿಗೆ ನಾವು ಧನ್ಯವಾದ ಹೇಳಬೇಕು ಎಂದು ಬರೆಯುತ್ತಾರೆ ಹಿರಿಯ ವಕೀಲ ಶ್ರೀರಾಮ್ ಪಂಚು.
Justice Arun Mishra
Justice Arun Mishra

ತಮ್ಮ ಅಧಿಕಾರಾವಧಿಯುದ್ದಕ್ಕೂ ನ್ಯಾಯಾಧೀಶರು ಅನೇಕ ತೀರ್ಪುಗಳನ್ನು ನೀಡುತ್ತಾರೆ. ಒಂದು ಸಂದರ್ಭದಲ್ಲಿ ಮಾತ್ರ ಅವರು ತೀರ್ಪು ಪಡೆಯಬೇಕಾದ ಸ್ಥಾನದಲ್ಲಿ ನಿಂತಿರುತ್ತಾರೆ. ಆ ಸಂದರ್ಭ ಒದಗಿಬರುವುದು ಅವರು ಕಛೇರಿ ತೊರೆಯುವಾಗ. ಆಗ ತಮ್ಮ ಕಾರ್ಯಕ್ಷಮತೆ ಕುರಿತಂತೆ ಅವರು ವಕೀಲ ವರ್ಗದ, ಕಾನೂನು ವಿಶ್ಲೇಷಕರ ತೀರ್ಪಿಗಾಗಿ ಕಾಯಬೇಕು.

ಹಾಗೆ ನೀಡುವ ತೀರ್ಪು ನ್ಯಾಯದಾನದ ಗುಣಮಟ್ಟವನ್ನು ಸರಿಗಟ್ಟುವಂತಿರಬೇಕು. ಕಾನೂನಿನಲ್ಲಿ ಅದು ನ್ಯಾಯಯುತ, ಪಕ್ಷಪಾತರಹಿತ, ನಿಖರ ಹಾಗೂ ಒಳನೋಟಗಳಿಂದ ಕೂಡಿರಬೇಕು. ಜೊತೆಗೆ ಭಯವಿಲ್ಲದೆ, ಯಾರ ಪರವೂ ನಿಲ್ಲದಂತೆ ನಿರೂಪಿತವಾಗಿರಬೇಕು. ಅಲ್ಲದೆ ಆ ತೀರ್ಪು ಗೌರವಯುತವಾಗಿ ಸ್ವೀಕೃತವಾಗಬೇಕು. ಸೂಕ್ತ ನ್ಯಾಯ ನಿರ್ವಹಣೆಯ ಹಿತದೃಷ್ಟಿಯಿಂದ ಇಂತಹ ಅಂಕಗಳನ್ನು ನೀಡಬೇಕಾಗುತ್ತದೆ. ಅವು ಗುಣಮಟ್ಟವನ್ನು ಕಾಪಾಡಿದ, ಸುಧಾರಿಸಿದ ಅಥವಾ ಅದರಲ್ಲಿ ವಿಫಲಗೊಂಡ ಸಂಗತಿಗಳ ಜ್ಞಾಪಕಪತ್ರಗಳಾಗಿದ್ದು ಎಚ್ಚರಿಕೆಯ ಕರೆಗಂಟೆ ಹಾಗೂ ಪುರಸ್ಕಾರದ ರೂಪದಲ್ಲಿ ಇರುತ್ತವೆ. ಹಿರಿಯ ವಕೀಲ ದುಷ್ಯಂತ್ ದವೆ ಇತ್ತೀಚೆಗೆ ನಮಗೆ ನೆನಪಿಸಿದಂತೆ, ‘ನ್ಯಾಯಾಧೀಶರು ಬರುತ್ತಾರೆ, ಹೋಗುತ್ತಾರೆ ಆದರೆ ನ್ಯಾಯವಾದಿ ವೃಂದ (ಬಾರ್) ಸದಾ ಇರುತ್ತದೆ’. ಸುಪ್ರೀಂಕೋರ್ಟಿನ ಹಿರಿಯ ನ್ಯಾಯಮೂರ್ತಿ ಅರುಣ್ ಮಿಶ್ರಾ ಅಭಿಪ್ರಾಯಪಟ್ಟಂತೆ, ‘ನ್ಯಾಯವಾದಿ ವೃಂದ (ಬಾರ್) ಎಂಬುದು ನ್ಯಾಯಾಂಗದ ತಾಯಿ’.

2020ರ ಸೆಪ್ಟೆಂಬರ್ 2ರಂದು ಅಧಿಕಾರದಿಂದ ನಿರ್ಗಮಿಸಿದ ಅರುಣ್ ಮಿಶ್ರಾ ದೇಶದ ಬಹು ವಿವಾದಿತ ನ್ಯಾಯಮೂರ್ತಿಗಳಲ್ಲಿ ಒಬ್ಬರು ಎಂಬುದರಲ್ಲಿ ಅನುಮಾನವಿಲ್ಲ, ‘ದ ಹಿಂದೂ’ ಪತ್ರಿಕೆಯಲ್ಲಿ ನ್ಯಾ. ಎ ಪಿ ಶಾ ಅವರು ಬರೆದ ಅಂಕಣಗಳು, ಇಂಡಿಯನ್ ಎಕ್ಸ್ ಪ್ರೆಸ್ ‌ನಲ್ಲಿ ನ್ಯಾ. ರೇಖಾ ಶರ್ಮಾ ಅವರು ಬರೆದ ಲೇಖನಗಳು, ‘ದ ವೈರ್’ ಜಾಲತಾಣದಲ್ಲಿ ವಿ ವೆಂಕಟೇಶನ್ ಬರೆದ ಬರಹ, ಅನೂಪ್ ಸುರೇಂದ್ರನಾಥ್, ಅಪರ್ಣ ಚಂದ್ರ ಮತ್ತು ಸುಚೀಂದ್ರನ್ ಭಾಸ್ಕರನ್ ಅವರು ‘ಆರ್ಟಿಕಲ್- 14’ ಜಾಲತಾಣದಲ್ಲಿ ಬರೆದ ಲೇಖನಗಳಲ್ಲಿ ನಿರ್ದಯವಾಗಿ ಇಂತಹ ತೀರ್ಪು ನೀಡಿದ್ದಾರೆ.

Supreme Court Justices Chelameswar, Ranjan Gogoi, Madan Lokur and Kurian Joseph held a press conference in January 2018
Supreme Court Justices Chelameswar, Ranjan Gogoi, Madan Lokur and Kurian Joseph held a press conference in January 2018

ಒಬ್ಬ ನಿರ್ದಿಷ್ಟ ಕಿರಿಯ ನ್ಯಾಯಮೂರ್ತಿಗೆ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣಗಳನ್ನು ವಹಿಸುತ್ತಿದ್ದಾರೆ ಎಂದು ಪ್ರತಿಭಟಿಸಿ ಸುಪ್ರೀಂ ಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಮೂರ್ತಿಗಳು 2018ರಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಿದಾಗ ಜಸ್ಟೀಸ್ ಮಿಶ್ರಾ ಇದ್ದಕ್ಕಿದ್ದಂತೆ ಬೆಳಕಿಗೆ ಬಂದರು. ನ್ಯಾ. ಲೋಯಾ ನಿಗೂಢ ಸಾವಿನ ಪ್ರಕರಣವನ್ನು ಮಿಶ್ರಾ ಅವರಿಗೆ ವಹಿಸಿದ್ದು ನ್ಯಾಯಾಂಗ ವಲಯದಲ್ಲಿ ಸಂಚಲನ ಉಂಟುಮಾಡಿತ್ತು. ಇದರೊಂದಿಗೆ ಇನ್ನೂ ಅನೇಕ ಸಂಗತಿಗಳು ಸೇರಿಕೊಂಡು, ಇವರು ಮುಖ್ಯ ನ್ಯಾಯಮೂರ್ತಿಗಳ ಆಯ್ಕೆಯಾಗಿದ್ದು ಹಿತಕರವಲ್ಲದ ಪ್ರಕರಣಗಳಲ್ಲಿ ಸಾರಾಸಗಟು ತೀರ್ಪುಗಳನ್ನು ನೀಡುತ್ತಾರೆ ಎಂಬ ಮಾತುಗಳು ಕೇಳಿಬಂದವು. ಸೇವಾ ಹಿರಿತನದೊಂದಿಗೆ ಅವರು ಸುಪ್ರೀಂಕೋರ್ಟಿನ ಕೊಲಿಜಿಯಂ ಪ್ರವೇಶಿಸುತ್ತಿದ್ದಂತೆ ವಿವಾದಗಳು ಹೆಚ್ಚಾದವು.

ಗುಜರಾತ್ ಗೃಹ ಸಚಿವರಾಗಿದ್ದ ಹರೇನ್ ಪಾಂಡ್ಯ ಅವರನ್ನು ಹಾಡುಹಗಲೇ ಗುಂಡಿಕ್ಕಿ ಕೊಲ್ಲಲಾಗಿತ್ತು. ಮುಸ್ಲಿಂ ಗುಂಪೊಂದರ ಮೇಲೆ ತಕ್ಷಣ ಅನುಮಾನಗಳು ಮೊಳೆತು ಸೆಷನ್ಸ್ ನ್ಯಾಯಾಲಯ ಶಿಕ್ಷೆಗೆ ಒಳಪಡಿಸಿತು. ಸೂಕ್ತ ಸಾಕ್ಷ್ಯಗಳಿಲ್ಲ ಎಂಬ ಕಾರಣಕ್ಕೆ ಹೈಕೋರ್ಟ್ ಆರೋಪಗಳನ್ನು ತಿರಸ್ಕರಿಸಿ ತೀರ್ಪು ನೀಡಿತು. ಆದರೆ ಇದು ಗುಜರಾತಿನಲ್ಲಿ ಅಧಿಕಾರದಲ್ಲಿದ್ದವರಿಗೆ ರುಚಿಸಲಿಲ್ಲ. ನ್ಯಾಯಮೂರ್ತಿ ಮಿಶ್ರಾ ಈ ತೀರ್ಪನ್ನು ಅಲ್ಲಗಳೆದರು. ಆದರೆ ಹಾಗೆ ಮಾಡುತ್ತಲೇ ಅವರು, ಸುಪ್ರೀಂ ಕೋರ್ಟ್ ತತ್ವಗಳಿಗೆ ಅನುಗುಣವಾಗಿ ಹೆಜ್ಜೆ ಇರಿಸಲಿಲ್ಲ ಎನ್ನುವಂತೆ ತೋರಿತು. ಇನ್ನೂ ಕೆಟ್ಟದ್ದೆಂದರೆ ಅದಕ್ಕೆ ಅವರು ನೀಡಿದ ಕಾರಣಗಳು ತಾರ್ಕಿಕ ನ್ಯೂನತೆಗಳಿಂದ ಕೂಡಿದ್ದವು.

ರಜೆಕಾಲದ ನ್ಯಾಯಪೀಠದಲ್ಲಿ ತೀರ್ಪು ನೀಡುವಾಗ ಅವರ ಒಂದು ನಡೆ ಗಮನ ಸೆಳೆಯಿತು. ಆಗ ತೆರಿಗೆ ಪ್ರಕರಣವೊಂದನ್ನು ಅವರು ಅಂತಿಮ ಆದೇಶದ ರೂಪದಲ್ಲಿ ನೀಡಿದ್ದರು. ರಜೆಕಾಲದ ಕೋರ್ಟುಗಳು ತುರ್ತು ನ್ಯಾಯದಾನಕ್ಕಾಗಿ ಇರುವಂತಹವೇ ಹೊರತು ಅಂತಿಮ ತೀರ್ಪು ನೀಡಲು ಅಲ್ಲ. ಇದರ ಜೊತೆಗೆ ಮತ್ತೊಂದು ಪ್ರಕರಣದಲ್ಲಿ ಅದಾನಿ ಹೆಸರಿನ ವಾಣಿಜ್ಯ ಸಂಸ್ಥೆಗೆ ಲಾಭದಾಯಕವಾಗುವಂತಹ ತೀರ್ಪು ನೀಡಿದರು. ಅದಾನಿ ಸಮೂಹಕ್ಕೆ ಸಂಬಂಧಿಸಿದ ಇತರೆ ಪ್ರಕರಣಗಳು ಸುಪ್ರೀಂಕೋರ್ಟಿನ ವಿವಿಧ ಪೀಠಗಳ ಎದುರು ಇತ್ಯರ್ಥವಾಗಬೇಕಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಇವರ ಪೀಠದ ಮುಂದೆಯೇ ಪ್ರಕರಣಗಳು ಬಂದವು. ಜಸ್ಟೀಸ್ ಮಿಶ್ರಾ ಅವರು ಅದಾನಿ ಸಮೂಹಕ್ಕೆ ನೀಡಿದ ತೀರ್ಪುಗಳು ಸಾವಿರಾರು ಕೋಟಿ ರೂಪಾಯಿಗಳಿಗೆ ಸಂಬಂಧಿಸಿದ್ದಾಗಿವೆ. ವಾಸ್ತವದಲ್ಲಿ ಮಿಶ್ರಾ ನ್ಯಾಯಾಲಯದಲ್ಲಿ ಅದಾನಿ ಸಮೂಹ ತನ್ನ ಕನಸಿನ ಓಟವನ್ನು ಮುಂದುವರೆಸಿತು.

ಪರಿಸರ ಇಲಾಖೆ ಅನುಮತಿ ಪಡೆಯಲಿಲ್ಲ ಎಂಬ ಕಾರಣಕ್ಕೆ ಕೊಚ್ಚಿನ್ ನ ಮರಡು ಎಂಬಲ್ಲಿ ನಿರ್ಮಿಸಲಾಗಿದ್ದ 343 ಅಪಾರ್ಟಮೆಂಟುಗಳಿದ್ದ ನಾಲ್ಕಂತಸ್ತಿನ ಕಟ್ಟಡವನ್ನು ಉರುಳಿಸುವ ತೀರ್ಪು ನೀಡಿದ ನ್ಯಾ.ಮಿಶ್ರಾ ಅವರು ಎಲ್ಲರ ಹುಬ್ಬೇರುವಂತೆ ಮಾಡಿದರು. ಅಂತಹ ಕಟ್ಟಡಗಳಿಗೆ ಅನುಮತಿಸಬಹುದಾದ ಪ್ರದೇಶ ಎಂದು ಮೊದಲೇ ವರ್ಗೀಕರಿಸಿದ್ದರಿಂದ ಅದೊಂದು ಮುಕ್ತ ಪ್ರಕರಣವಾಗಿತ್ತು. ಹೈಕೋರ್ಟ್ ಅದಾಗಲೇ ಮಾಲೀಕರ ಪರವಾಗಿ ತೀರ್ಪು ನೀಡಿತ್ತು. ಪ್ರಕರಣಕ್ಕೆ ಸಿಆರ್ ಜಡ್ ಅಧಿಸೂಚನೆ ಅನ್ವಯಿಸುವ ತೀರ್ಮಾನ ಕೈಗೊಳ್ಳುವ ಮೊದಲು ಸುಪ್ರೀಂಕೋರ್ಟಿನ ತಾಂತ್ರಿಕ ಸಮಿತಿ ಎಲ್ಲಾ ಮಾಲೀಕರ ವಿಚಾರಣೆ ನಡೆಸಿರಲಿಲ್ಲ. ವಾಸ್ತವದಲ್ಲಿ ಸೀಮಿತ ವಾಸ್ತವ್ಯಕ್ಕೆ ಅನುಕೂಲ ಕಲ್ಪಿಸುವ ಸಾಕಷ್ಟು ಅರ್ಹತೆ ಇದೆ ಎಂದು ಮತ್ತೊಂದು ರಜೆಕಾಲದ ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಆದರೆ ಇವುಗಳಲ್ಲಿ ಯಾವುದೂ ನ್ಯಾಯಮೂರ್ತಿ ಮಿಶ್ರಾ ಅವರಿಗೆ ಮುಖ್ಯವಾಗದೆ ಕಟ್ಟಡ ಧ್ವಂಸಗೊಂಡಿತು.

ಬಡವರೂ ಸಹ ತೊಂದರೆ ಅನುಭವಿಸಿದರು; ಯಾವುದೇ ನೋಟೀಸ್ ನೀಡದೆ, ವಿಚಾರಣೆ ನಡೆಸದೆ, ಪರ್ಯಾಯ ವಸತಿ ಕಲ್ಪಿಸದೆ, ನ್ಯಾಯಾಂಗ ಪರಿಹಾರ ಕೂಡ ಒದಗಿಸದೆ ಅವರ ಕೊನೆಯ ತೀರ್ಪೊಂದರಲ್ಲಿ ರೈಲ್ವೆ ಹಳಿಗಳ ಸಮೀಪ ತಲೆ ಎತ್ತಿದ್ದ 48,000 ಗುಡಿಸಲುಗಳನ್ನು ನೆಲಸಮ ಮಾಡಲು ಆದೇಶಿಸಲಾಯಿತು.

ಎಜಿಆರ್ (ಹೊಂದಾಣಿಕೆಯ ಒಟ್ಟು ಆದಾಯ) ವಿಚಾರದಲ್ಲಿ, ಪರವಾನಗಿ ಶುಲ್ಕವನ್ನು ಲೆಕ್ಕಾಚಾರ ಮಾಡುವ ಉದ್ದೇಶದಿಂದ ಟೆಲಿಕಾಂ ಕಂಪನಿಗಳ ಆದಾಯವನ್ನು ಇತರ ಮೂಲಗಳಿಂದ ಸೇರಿಸಬೇಕು ಎಂದು ನ್ಯಾಯಮೂರ್ತಿ ಮಿಶ್ರಾ ಅಭಿಪ್ರಾಯಪಟ್ಟರು. ಇದು ಎರಡು ಕಾರಣಗಳಿಗಾಗಿ ಉದ್ಯಮಕ್ಕೆ ತೀವ್ರ ಹೊಡೆತ ನೀಡಿತು – ಉದ್ಯಮದ ಎರಡು ಪ್ರಮುಖ ಕಂಪೆನಿಗಳಿಗೆ ವಿಧಿಸಲಾದ ಶುಲ್ಕ, ದಿಗ್ಭ್ರಮೆ ಹುಟ್ಟಿಸುವಂತಿತ್ತು. ವೊಡಾಫೋನ್‌ ಕಂಪೆನಿಗೆ 58,000 ಕೋಟಿ ರೂ. ಮತ್ತು ಏರ್‌ಟೆಲ್‌ನಿಂದ 43,000 ಕೋಟಿ ರೂ ಶುಲ್ಕ ವಿಧಿಸಲಾಗಿತ್ತು. (ಟೆಲಿಕಾಂ ಕ್ಷೇತ್ರದ ಮೂರನೇ ದೈತ್ಯ ಕಂಪೆನಿ ರಿಲಯನ್ಸ್ ಜಿಯೋ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ).

ತೀರ್ಪಿನಲ್ಲಿರುವ ತಾರ್ಕಿಕ ಅರ್ಹತೆಯ ಅಂಶಗಳನ್ನು ಬಿಡಿ, ಅದೇನು ಹೆಚ್ಚು ಚರ್ಚಾಸ್ಪದ ವಿಚಾರವಲ್ಲ. ನ್ಯಾಯಮೂರ್ತಿ ಮಿಶ್ರಾ, ಈ ಎರಡು ಕಂಪನಿಗಳಿಗೆ ಸಂಪೂರ್ಣ ಬಾಕಿ ಪಾವತಿಸಲು ಕೇವಲ ಮೂರು ತಿಂಗಳ ಸಮಯಾವಕಾಶ ನೀಡಬೇಕು, ತಪ್ಪಿದಲ್ಲಿ ಮುಚ್ಚಬೇಕಾಗುತ್ತದೆ ಎಂದು ತೀರ್ಪು ನೀಡಿದ್ದು ನಂಬಲಸಾಧ್ಯವಾದ ಸಂಗತಿಯಾಗಿತ್ತು. ಅಷ್ಟು ಮೊತ್ತದ ಹಣವನ್ನು ಕೂಡಲೇ ಒದಗಿಸಲು ಸಾಧ್ಯವಿಲ್ಲ ಎಂಬುದು ಅವರಿಗೇ ಇರಲಿ ಅಥವಾ ಉದ್ಯಮದ ಬಗ್ಗೆ ಅಲ್ಪಸ್ವಲ್ಪ ಜ್ಞಾನವಿರುವ ಯಾರಿಗೇ ಇರಲಿ ತಿಳಿದಿರುವ ಸಂಗತಿ. ಜೊತೆಗೆ ಎರಡೂ ಕಂಪೆನಿಯನ್ನು ಮುಚ್ಚುವುದು ರಿಲಯನ್ಸ್ ಜಿಯೋದ ಏಕಸ್ವಾಮ್ಯಕ್ಕೆ ಕೂಡ ಇಂಬು ನೀಡುತ್ತದೆ. ಇಷ್ಟಾದರೂ ಸುಪ್ರೀಂ ಕೋರ್ಟ್‌ನ ಈ ಹಿರಿಯ ನ್ಯಾಯಾಧೀಶರು ಈ ರೀತಿಯ ಗಡುವು ಹೇರಿದ್ದರು. ಅದೃಷ್ಟವಶಾತ್, ಎರಡು ಕಂಪನಿಗಳು ಮತ್ತು ಸರ್ಕಾರ ಪಟ್ಟುಹಿಡಿದು ಮನವಿ ಸಲ್ಲಿಸಿದ್ದರಿಂದ ಈಗ ಅವುಗಳಿಗೆ ಹೆಚ್ಚಿನ ಸಮಯಾವಕಾಶ ದೊರೆತಿದೆ.

ವಿಚಿತ್ರವೆಂದರೆ, ಎಜಿಆರ್ ಗೆ ಸಂಬಂಧಿಸಿದಂತೆ, ತೀರ್ಪಿನಲ್ಲಿ ವ್ಯಕ್ತವಾದ ಅಂಶಗಳನ್ನು ಸಾರ್ವಜನಿಕ ವಲಯದ ಉದ್ಯಮಗಳಿಗೆ ಅನ್ವಯಿಸಬೇಕು ಎಂದು ಸರ್ಕಾರ ಕೋರಿದಾಗ ನ್ಯಾಯಮೂರ್ತಿಗಳ ಕೋಪಕ್ಕೆ ತುತ್ತಾಗಿ ಹಿನ್ನಡೆ ಅನುಭವಿಸಬೇಕಾಯಿತು.

ಇಂದೋರ್ ಅಭಿವೃದ್ಧಿ ಪ್ರಾಧಿಕಾರದ ಪ್ರಕರಣಗಳಲ್ಲಿ, ಜಸ್ಟೀಸ್ ಮಿಶ್ರಾ ಅವರು ಭೂಸ್ವಾಧೀನ ಪ್ರಕರಣಗಳ ನಷ್ಟ ಕಡಿಮೆಗೊಳಿಸಬೇಕು ಎಂಬ ಸರ್ಕಾರದ ನಿಲುವನ್ನು ಬೆಂಬಲಿಸಿದರು. ಇದಕ್ಕೆ ವ್ಯತಿರಿಕ್ತ ಧೋರಣೆ ಹೊಂದಿದ್ದ ಮತ್ತೊಂದು ನ್ಯಾಯಪೀಠದ ಅಭಿಪ್ರಾಯವನ್ನು ಹೋಗಲಾಡಿಸಲು ಅವರು ತೀವ್ರ ಪ್ರಯತ್ನ ಮಾಡಿದರು. ಅದಕ್ಕೆ ಒಪ್ಪದಿದ್ದಾಗ ಇದು ಇಡೀ ಕೋರ್ಟಿನ ಅಭಿಪ್ರಾಯ (Per incuriam) ಎಂದು ಹಣೆಪಟ್ಟಿಹಚ್ಚಿ ತೀವ್ರ ಆಕ್ಷೇಪಣೆ ಹೊರತಾಗಿಯೂ ತಮ್ಮ ನೇತೃತ್ವದ ಐವರು ನ್ಯಾಯಾಧೀಶರ ಪೀಠದ ಎದುರು ವಿಚಾರಣೆಯಾಗುವಂತೆ ಸೂಚಿಸಿದರು. ಖಾಸಗಿ ನಾಗರಿಕರ ದಾವೆ ಹೂಡಿರುವ ಅಸಂಖ್ಯಾತ ಜನರಿಗೆ ಪ್ರಮುಖವಾದ ಇಂತಹ ಮಹತ್ವದ ಪ್ರಕರಣದಲ್ಲಿ ನ್ಯಾಯಪೀಠ ಹೆಚ್ಚು ನಿಷ್ಪಕ್ಷಪಾತವಾಗಿರುವುದು ಮುಖ್ಯವೆಂದು ಅವರಿಗೆ ತೋರಲಿಲ್ಲ.

ಅವರ (ಮಿಶ್ರಾ ಅವರ) ತೀರ್ಪುಗಳನ್ನು ಪರಿಶೋಧಿಸುತ್ತಾ ಹೊರಟಂತೆ, ನ್ಯಾಯಿಕ ಗುಣಮಟ್ಟತೆಯು ಅಲ್ಲಿ ಅಷ್ಟಾಗಿ ಗೋಚರಿಸುವುದಿಲ್ಲ, ಬದಲಿಗೆ ಸರಿಯಾದ ನ್ಯಾಯಿಕ ಮತ್ತು ಕಾನೂನು ಆಚರಣೆಗಳೆಡೆಗೆ ಹಾಗೂ ಸಾಂಸ್ಥಿಕ ಸಂಪ್ರದಾಯಗಳೆಡೆಗೆ ಬೇಕೆಂದೇ ಅಗೌರವವಿರಿಸಿಕೊಂಡಿರುವ ಹಾಗೂ ತಮ್ಮ ಕ್ರಿಯೆಯು ಉಂಟುಮಾಡುವ ಹಾನಿ ಮತ್ತು ಪರಿಣಾಮಗಳ ಬಗ್ಗೆ ಕುರುಡಾಗಿರುವ ಸಂಗತಿ ಗೋಚರಿಸುತ್ತದೆ. ಕಾನೂನನ್ನು ಮೀರುವುದಿಲ್ಲ ಮತ್ತು ಪೂರ್ವನಿರ್ಧರಿತ ರೇಖೆಗಳನ್ನು ದಾಟುವುದಿಲ್ಲ ಎಂಬ ಕಾರಣಕ್ಕಷ್ಟೇ ನಾವು ನಮ್ಮ ನ್ಯಾಯಾಧೀಶರುಗಳಿಗೆ ಅಷ್ಟು ದೊಡ್ಡ ಅಧಿಕಾರವನ್ನು ನೀಡಿಲ್ಲ ಬದಲಿಗೆ ಅವರು ಸಂಯಮ, ಸಮಚಿತ್ತತೆ ಹಾಗೂ ಸಮತೋಲನದ ಮಾದರಿಗಳು ಎಂಬ ಕಾರಣದಿಂದಾಗಿ ಅಷ್ಟೊಂದು ಅಧಿಕಾರವನ್ನು ನೀಡಿಯೂ ನಂಬಬಹುದು ಎಂದುಕೊಂಡಿದ್ದೇವೆ.

ಆದರೆ ಆ ನಂಬಿಕೆಯನ್ನು ತ್ಯಜಿಸಿದಾಗ, ಯಾರು ರಕ್ಷಣೆಗೆ ಬರಬಹುದು; ನ್ಯಾಯಪಾಲಕರನ್ನು ಯಾರು ಕಾಪಾಡುತ್ತಾರೆ? ನಾವು ಒಂದು ವಿಷಯಕ್ಕೆ ನ್ಯಾಯಮೂರ್ತಿ ಮಿಶ್ರಾ ಅವರಿಗೆ ಧನ್ಯವಾದ ಹೇಳಬೇಕು; ಕಾವಲುಗಾರರು ಅಡ್ಡಾದಿಡ್ಡಿ ವರ್ತಿಸಿದಾಗ ಎಂಥ ಅಪಾಯ ಎದುರಾಗುತ್ತದೆ ಎಂದು ತೋರಿಸಿಕೊಟ್ಟಿದ್ದಕ್ಕಾಗಿ.

ಈ ಕುರಿತು ನಮಗೆ ಅತ್ಯುತ್ತಮ ಒಳನೋಟ ದಕ್ಕಿದ್ದು ಅವರು ಮೇಲಿನ ಪಟ್ಟಿಯಲ್ಲಿ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣವನ್ನು ಅಗ್ರಸ್ಥಾನದಲ್ಲಿರಿಸಿದಾಗ.

ಈ ಪ್ರಕರಣವು ಎಲ್ಲಿಯವರೆಗೆ ಸರಿಪಡಿಸಲಾಗುವುದಿಲ್ಲವೋ ಅಲ್ಲಿಯವರೆಗೆ ನ್ಯಾಯಾಲಯದ ದಾಖಲೆಯಲ್ಲಿ ಕಲೆಯಾಗಿಯೇ ಉಳಿಯಲಿದೆ, ಏಕೆಂದರೆ, ಇದರಲ್ಲಿ ಮಿಶ್ರಾ ಅವರು ಭೂಷಣ್‌ ಅವರ ಬೆನ್ನುಹತ್ತಿದರು ಎಂದು ಸರಳವಾಗಿ ಹೇಳಬಹುದು. ಈ ಇಬ್ಬರ ನಡುವೆ ನ್ಯಾಯಾಲಯದಲ್ಲಿ ಚಕಮಕಿಗಳಿಗೇನು ಕೊರತೆ ಇರಲಿಲ್ಲ. ಈ ನ್ಯಾಯಮೂರ್ತಿಗಳು ತಮ್ಮ ಪ್ರಕರಣಗಳನ್ನು ಆಲಿಸಬಾರದು ಎಂದು ಪ್ರಶಾಂತ್ ಭೂಷಣ್ ಸ್ವಲ್ಪಕಾಲದ ಹಿಂದೆಯೇ ಕೋರಿದ್ದರು ಕೂಡ. ಆದರೆ, ಈ ಬಾರಿ ಮಿಶ್ರಾ ನ್ಯಾಯಾಂಗ ನಿಂದನೆಯ ರಣಾಂಗಣವನ್ನು ಆಯ್ಕೆ ಮಾಡಿಕೊಂಡರು, ಇದರರ್ಥ ವಕೀಲರಾದ ಪ್ರಶಾಂತ್ ಭೂಷಣ್ ಅವರು ಎರಡು ಕೈಗಳನ್ನೂ ಹಿಂದೆ ಕಟ್ಟಿಕೊಂಡು ಹೋರಾಡಬೇಕಿತ್ತು. ಏಕೆಂದರೆ, ಇದರಲ್ಲಿ ನ್ಯಾಯಾಧೀಶರೇ ಆರೋಪಿಸುವವರೂ, ವಿಚಾರಣೆ ನಡೆಸುವವರು, ಸಾಕ್ಷಿದಾರರು ಜೊತೆಗೆ ತೀರ್ಪುಗಾರರೂ ಆಗಿರುತ್ತಾರೆ.

ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಮೋಟಾರ್ ಸೈಕಲ್ ಮೇಲೆ ಕುಳಿತಿದ್ದಕ್ಕೆ ಸಂಬಂಧಿಸಿದಂತೆ ಭೂಷಣ್ ಸಿಡಿಮಿಡಿಯ ಟ್ವೀಟ್ ಮಾಡಿದ್ದರು. ಅದು ತಮ್ಮ ಕೋಪವನ್ನು ಸಿಜೆಐ ಅಥವಾ ಸಂಸ್ಥೆಗೆ ಹಾನಿಯಾಗದ ರೀತಿಯಲ್ಲಿ ಹೊರಹಾಕುವ ಉದಾಹರಣೆಯಾಗಿತ್ತು. ನ್ಯಾಯಾಂಗ ಕುರಿತ ಹಾಗೂ ಈ ಹಿಂದಿನ ನಾಲ್ಕು ಮುಖ್ಯ ನ್ಯಾಯಮೂರ್ತಿಗಳು ದೇಶವನ್ನು ನಿರಾಸೆಗೊಳಿಸಿದ ಬಗೆಯನ್ನು ಕುರಿತ ಅವರ ಆ ಟ್ವೀಟ್ ಅವರ ವೈಯಕ್ತಿಕ ಅಭಿಪ್ರಾಯವಾಗಿತ್ತು. ಅಂತಹ ಅಭಿಪ್ರಾಯ ಹೊಂದುವ ಹಕ್ಕನ್ನು ಅವರು ಮಾತ್ರವೇ ಅಲ್ಲ, ಪ್ರತಿಯೊಬ್ಬ ಪುರುಷ, ಮಹಿಳೆಯೂ ಹೊಂದಿದ್ದಾರೆ. ಇದೇ ಅಭಿಪ್ರಾಯವನ್ನು ಸಂಪೂರ್ಣವಾಗಿ ಅಲ್ಲದೆ ಹೋದರೂ ಗಣನೀಯವಾಗಿ ಅನೇಕ ಮಂದಿ ಹೊಂದಿದ್ದರು. ಅದರಲ್ಲಿ ಸುಪ್ರೀಂಕೋರ್ಟಿನ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಅನೇಕ ಹಿರಿಯ ನಿವೃತ್ತರೂ ಇದ್ದರು.

ಆದರೆ ಮಿಶ್ರಾ, ತಮ್ಮ ರೂಢಿಯಂತೆ ಬಿಡುಬೀಸಾಗಿ ಈ ಪ್ರಕರಣವನ್ನು ಕೈಗೆತ್ತಿಕೊಂಡರು ಮತ್ತು ತ್ವರಿತವಾಗಿ ವಿಚಾರಣೆ ನಡೆಸುವ ಮೂಲಕ ತಮ್ಮ ನಿವೃತ್ತಿಯ ಹಿಂದಿನ ದಿನ, ಒಂದು ತಿಂಗಳೊಳಗೆ ಶಿಕ್ಷೆ ವಿಧಿಸಲು ಮುಂದಾದರು. ವಿಚಾರಣೆ ಸಂಕ್ಷಿಪ್ತವಾಗಿತ್ತು. ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ನಿಭಾಯಿಸುವ ಅಪ್ರತಿಮ ದಾಖಲೆ ಇದ್ದ ವಕೀಲರು ತಮ್ಮ ಸಮರ್ಥನೆಗೆ ಮುಂದಾದರು, ಆದರೆ ಅದನ್ನು ವ್ಯಕ್ತಪಡಿಸುವ ಯಾವ ಅವಕಾಶವೂ ದೊರೆಯಲಿಲ್ಲ. ಅಷ್ಟೇ ಅಲ್ಲ, ನ್ಯಾಯಾಂಗದ ಚಿತ್ರಣದ ಬಗ್ಗೆ ತಮಗೆ ಮತ್ತು ತಮ್ಮಂತಹ ಅನೇಕ ಶ್ರೇಷ್ಠ ಧ್ವನಿಗಳಿಗೆ ಘಾಸಿಯಾಗಿದೆ ಎಂದು ಅಟಾರ್ನಿ ಜನರಲ್ ಕೂಡ ಹೇಳಲು ಪ್ರಾರಂಭಿಸಿದಾಗ ಅವರ ಮಾತುಗಳನ್ನು ತುಂಡರಿಸಲಾಯಿತು.

ನ್ಯಾಯಮೂರ್ತಿ ಮಿಶ್ರಾ ತಮ್ಮ ಕೊನೆಯ ಮಾಸ್ಟರ್‌ಸ್ಟ್ರೋಕ್‌ನಲ್ಲಿ ಇನ್ನೂ ಅನೇಕ ಸಂಸ್ಥೆಗಳನ್ನು ಕೆಡವುತ್ತಾ ಭವ್ಯ ರೀತಿಯಲ್ಲಿ ಮುನ್ನಡೆದರು. ನ್ಯಾಯಾಂಗ ವಿಮರ್ಶೆಗೆ ಮತ್ತು ದುರ್ಬಲರ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಮನ್ನಣೆ ನೀಡುತ್ತದೆ ಎಂಬ ಕಾರಣಕ್ಕೆ ಪ್ರತಿಷ್ಠಿತ ಮತ್ತು ಶಕ್ತಿಶಾಲಿ ಎಂದು ಒಂದು ಕಾಲದಲ್ಲಿ ಅಂತರರಾಷ್ಟ್ರೀಯಮಟ್ಟದಲ್ಲಿ ಹೆಸರಾಗಿದ್ದ ನ್ಯಾಯಾಲಯವನ್ನು ಅವರು ಕೆಳಮಟ್ಟಕ್ಕೆ ಇಳಿಸಿದರು. ವಕೀಲ ವರ್ಗ ಮತ್ತು ನ್ಯಾಯಪೀಠದ ನಡುವಣ ಬಾಂಧವ್ಯ ಅವರಿಂದಾಗಿ ತೀವ್ರ ಒತ್ತಡಕ್ಕೆ ಸಿಲುಕಿತು. ಮಿಶ್ರಾ ಅವರ ದುಸ್ಸಾಹಸಗಳ ಫಲವಾಗಿ ವಕೀಲರು ನ್ಯಾಯಾಲಯದಲ್ಲಿ ಕಟು ಧೋರಣೆ ತಳೆಯುವುದನ್ನು ಹೊರತುಪಡಿಸಿ ಬೇರೆ ದಾರಿ ಉಳಿದಿರಲಿಲ್ಲ. ಮುಂದುವರೆದು, ಅವರು (ಮಿಶ್ರಾ) ಜನರು ತಮಗೆ ತಾವೇ ಕೊಟ್ಟುಕೊಂಡಿರುವ, ಅತ್ಯಮೂಲ್ಯವಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಸಂವಿಧಾನದತ್ತವಾದ ರಕ್ಷಣೆಯನ್ನು ಸುಪ್ರೀಂಕೋರ್ಟ್‌ನ ಸರ್ವಶಕ್ತ, ಸರ್ವಜ್ಞ ನ್ಯಾಯಮೂರ್ತಿಗಳಿಗೆ ಅಹಿತವನ್ನುಂಟು ಮಾಡಿದ ಕಾರಣಕ್ಕಾಗಿ ಮೌನವಾಗಿಸಲು ಮುಂದಾದರು. ಅವರು ಸರ್ವವ್ಯಾಪಿಯಲ್ಲ ಎನ್ನುವುದು ಪುಣ್ಯ.

ಇನ್ನೂ ಒಂದು ಅವಘಡ ಬೆಳಕಿಗೆ ಬಂದಿದೆ. ಸುಪ್ರೀಂಕೋರ್ಟ್ ನಿಗದಿಪಡಿಸಿದ ಮಾನದಂಡಗಳ ಪ್ರಕಾರ, ಹೈಕೋರ್ಟ್‌ಗಳಿಗೆ ನೇಮಕಗೊಳ್ಳುವವರು ಕಡ್ಡಾಯವಾಗಿ 45 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು. ಹಲವಾರು ಬಾರಿ, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಈ ವಯಸ್ಸಿನ ಮಿತಿ ದಾಟುವವರೆಗೆ ಅಭ್ಯರ್ಥಿಗಳ ನೇಮಕವನ್ನು ತಡೆಹಿಡಿಯಬೇಕಾಗುತ್ತದೆ. 1993 ಮತ್ತು 1998 ರ ನ್ಯಾಯಾಧೀಶರ ಪ್ರಕರಣಗಳಲ್ಲಿ, ನ್ಯಾಯಾಧೀಶರನ್ನು ನೇಮಿಸುವ ಅಧಿಕಾರವನ್ನು ಭಾರತದ ಸುಪ್ರೀಂ ಕೋರ್ಟ್ ತನಗೆ ತಾನೇ ನೀಡಿಕೊಂಡಿದೆ.

2015 ರಲ್ಲಿ ನೀಡಿದ ತೀರ್ಪಿನಲ್ಲಿ, ಕೊಲಿಜಿಯಂ ಬದಲಿಸಲು ಉದ್ದೇಶಿಸಿದ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತು. ಮತ್ತು ಅದರ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಹಲವು ದೂರುಗಳನ್ನು ಸಹ ಗಮನಿಸಿತ್ತು. ಅದರಲ್ಲಿ ತಮ್ಮ ಆದ್ಯತೆಯ ಅಭ್ಯರ್ಥಿಗಳಿಗೆ ಕೊಲಿಜಿಯಂನ ಸದಸ್ಯರ ನಡುವೆ ವ್ಯವಹರಿಸುವ ಪ್ರವೃತ್ತಿ ಕೂಡ ಸೇರಿಕೊಂಡಿತ್ತು. ಅಧಿಕಾರ ಉಳಿಸಿಕೊಳ್ಳಬೇಕಾದರೆ ಕೊಲಿಜಿಯಂ ಉತ್ತಮವಾಗಿ ವರ್ತಿಸಬೇಕು ಎಂದು ನ್ಯಾಯಾಲಯ ಒತ್ತಿ ಹೇಳಿತು. ಎಂದಿನಂತೆ ನ್ಯಾಯಮೂರ್ತಿ ಮಿಶ್ರಾ ಈ ಸಂಸ್ಥೆಯನ್ನೂ ಕೆಡವಿ ಹಾಕಿದರು.

ಅರುಣ್ ಅವರ ಕಿರಿಯ ಸಹೋದರ 45 ವರ್ಷಕ್ಕಿಂತ ಕಡಿಮೆ ವಯಸ್ಸಿನ ನ್ಯಾ. ವಿಶಾಲ್ ಮಿಶ್ರಾ ಅವರು ಇತ್ತೀಚೆಗೆ ಮಧ್ಯಪ್ರದೇಶದ ಹೈಕೋರ್ಟ್‌ಗೆ ನೇಮಕವಾದರು. ಮಾನದಂಡಗಳನ್ನು ಅನ್ವಯಿಸಿದ್ದರೆ ಅವರನ್ನು ಆ ಹುದ್ದೆಗೆ ದಿಟ್ಟವಾಗಿ ನಿರಾಕರಿಸಬೇಕಿತ್ತು ಅಥವಾ ನೇಮಕಾತಿ ಮುಂದೂಡಬೇಕಿತ್ತು. ಆದರೆ ವಿಶಾಲ್ ವಯಸ್ಸಿನಲ್ಲಿ ಕಿರಿಯವರಾದರೂ ಕೊಲಿಜಿಯಂ ಪುರಸ್ಕರಿಸಿತು. ಹಿರಿಯ ಸಹೋದರ ಮಿಶ್ರಾ ತನ್ನ ತಮ್ಮನನ್ನು ಆಯ್ಕೆ ಮಾಡಿದ ಮೊದಲ ಮೂರು ನ್ಯಾಯಾಧೀಶರ ಗುಂಪಿನ (ಸಿಜೆಐ ಗೊಗೊಯ್, ನ್ಯಾ. ಬೋಬ್ಡೆ ಮತ್ತು ನ್ಯಾ. ರಮಣ) ಸದಸ್ಯರಾಗಿರಲಿಲ್ಲ, ಆದರೆ ಅರುಣ್ ಅವರು ಸುಪ್ರೀಂ ಕೋರ್ಟ್‌ನ ಹಿರಿಯ ಐದು ನ್ಯಾಯಮೂರ್ತಿಗಳ ಕೊಲಿಜಿಯಂನ ಸದಸ್ಯರಾಗಿದ್ದರು. ಈ ಮೂವರ ಗುಂಪಿನಲ್ಲಿಲ್ಲದ ಕಾರಣ ತನ್ನಿಂದ ಯಾವುದೇ ತಪ್ಪು ಆಗಿಲ್ಲ ಎಂದು ಅವರು ಹೇಳಿದರೆ, ಪ್ರಾಥಮಿಕ ಆಡಳಿತಾತ್ಮಕ ಕಾನೂನು ಪಾಠಗಳನ್ನು, ಪೂರ್ವಗ್ರಹ ಮತ್ತು ಸ್ವಜನಪಕ್ಷಪಾತ ಇಲ್ಲದಿರುವುದನ್ನು, ಯುಕ್ತತೆಯನ್ನು ಮನಗಂಡಿರುವ ಹೊಸದಾಗಿ ನೇಮಕಗೊಂಡ ನ್ಯಾಯಾಧೀಶ ಕೂಡ ತಿರಸ್ಕರಿಸಲು ತೊಂದರೆ ಇಲ್ಲದ ವಾದದಂತೆ ಇದು ಕಂಡುಬರುತ್ತದೆ.

Justice Vishal Mishra, High Court of Madhya Pradesh
Justice Vishal Mishra, High Court of Madhya Pradesh

ಹಿರಿಯ ಸಹೋದರ ಮಿಶ್ರಾ ನಿವೃತ್ತಿಯಾಗುವವರೆಗೂ ಈ ಪ್ರಕರಣವನ್ನು ತಡೆಹಿಡಿದಿದ್ದರೆ ಸ್ವರ್ಗದ ಯಾವ ತುಣುಕು ಜಾರಿ ಬೀಳುತ್ತಿತ್ತು ಎಂದು ಅವರು ಕೇಳಬಹುದಿತ್ತು.

ಪ್ರಾಸಂಗಿಕವಾಗಿ, 2019ರ ಚುನಾವಣಾ ಫಲಿತಾಂಶಗಳು ಬರುವ ಒಂದು ವಾರದ ಮೊದಲು ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶರಾಗಿ ವಿಶಾಲ್ ಮಿಶ್ರಾ ಅವರನ್ನು ಕೊಲಿಜಿಯಂ ಶಿಫಾರಸು ಮಾಡಿತು. ಇದರಿಂದ ಇನ್ನೊಂದು ಸಂಸ್ಥೆಯನ್ನೂ ಮಟ್ಟಹಾಕಿದಂತಾಗಿದೆ. ಆದ್ದರಿಂದ ಪ್ರಿಯ ನಾಗರಿಕರೆ, ಭಾರತದ ಮುಖ್ಯ ನ್ಯಾಯಮೂರ್ತಿ ಕಚೇರಿಗೆ ವಿಶಾಲ್ ಮಿಶ್ರಾ ಅವರಿಗೆ ಪದೋನ್ನತಿ ನೀಡುವುದಕ್ಕೆ ಸ್ವಯಂ ಸಿದ್ಧರಾಗಿರಿ. ಏಕೆಂದರೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ವಿಶಾಲ್‌ ಮಿಶ್ರಾ ಸುದೀರ್ಘವಾಗಿ ಅನುಭವಿಸಲು ಅಗತ್ಯವಿರುವ ರೀತಿಯಲ್ಲಿ ಅವರ ಹಿರಿಯ ಸಹೋದರ ಸಂಪೂರ್ಣವಾಗಿ ವಯೋಮಾನದ ಜೋಡಣೆ ಮಾಡಿದ್ದಾರೆ. ಕೊಲಿಜಿಯಂ ಈ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದಾದರೆ, ನಾವು ಅದನ್ನು ವೇಗವಾಗಿ ಹೊರದಬ್ಬಿ ಎನ್‌ಜೆಎಸಿಯನ್ನು ಪರಿಷ್ಕೃತ ಆವೃತ್ತಿಯನ್ನು ಬೆಂಬಲಿಸಬೇಕಿದೆ.

ಈ ಒಬ್ಬ ನ್ಯಾಯಮೂರ್ತಿ ಮಾಡಿದ ಆಘಾತವನ್ನು ನೋಡುತ್ತಾ ತುಂಬಾ ದುಃಖದಿಂದ ಬರೆಯಲಾದ ತುಣುಕು ಇದು. ಅವರಿಗೆ ಇದರಲ್ಲಿ ಸಹಾಯ ಮಾಡಿದವರು ಕೆಲವರಿದ್ದರು ಎನ್ನುವುದರಲ್ಲಿ ಅನುಮಾನವಿಲ್ಲ, ಅದೇ ರೀತಿ ಮೌನವಾಗಿದ್ದವರು ಕೂಡ. ಆದರೆ ರಿಪೇರಿ ಮಾಡುವ ಕಾರ್ಯಕ್ಕೆ ನಾವೀಗ ಒಡ್ಡಿಕೊಳ್ಳಬೇಕು. ಅದೃಷ್ಟವಶಾತ್, ಅತಿರೇಕದ ಉದಾಹರಣೆಗಳು ಎಚ್ಚರಿಕೆಯ ಗಂಟೆಗಳಾಗಿ ಕೆಲಸ ಮಾಡುತ್ತವೆ, ಈ ಸಂದರ್ಭದಲ್ಲಿ ಇದೊಂದು ದೊಡ್ಡ ಎಚ್ಚರಿಕೆ ಗಂಟೆ. ಅವರ ಅತೃಪ್ತ ಅಧಿಕಾರಾವಧಿಯಿಂದ ಏನಾದರೂ ಕಲಿಯುವುದಿದ್ದರೆ ಅದು ವಾಕ್ ಸ್ವಾತಂತ್ರ್ಯ ಎತ್ತಿಹಿಡಿಯುವುದು, ನ್ಯಾಯಾಧೀಶರ ಆಯ್ಕೆಯಲ್ಲಿ ಸುಧಾರಣೆ ತರುವುದು, ರೋಸ್ಟರ್ ವಿಧಾನದ ಮೇಲೆ ಪ್ರಕರಣಗಳನ್ನು ನಿಯೋಜಿಸುವುದಾಗಿದೆ. ಹಾಗಾದಲ್ಲಿ, ನ್ಯಾ. ಅರುಣ್ ಮಿಶ್ರಾ ಅವರಿಗೆ ಧನ್ಯವಾದ ಹೇಳಲು ನಮಗೆ ಇನ್ನೂ ಒಂದು ಅವಕಾಶ ದೊರೆಯುತ್ತದೆ.

ಇಲ್ಲಿ ಹಾಗೂ ಉಳಿದ ಲೇಖನಗಳಲ್ಲಿ ಉಲ್ಲೇಖಗೊಂಡ ಇತರೆ ನ್ಯೂನತೆಗಳನ್ನು ಕೂಡ ಗಮನಿಸಬಹುದು. ತನ್ನ ದಾರಿಗೆ ಅಡ್ಡಬರುವ ಯಾರನ್ನೇ ಆದರೂ ತರಾಟೆಗೆ ತೆಗೆದುಕೊಳ್ಳುವ, ಬೆದರಿಕೆಯೊಡ್ಡುವ, ಅಥವಾ ಭಿನ್ನಾಭಿಪ್ರಾಯ ಇರುವವರ ಮೇಲೆ ಒರಟಾಗಿ ಸವಾರಿ ಮಾಡುವ ಗುಣ ಅವರದಾಗಿತ್ತು. ಅವರು ಕೇರಳ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ಮೇಲೆ ಅಸಹ್ಯಕರ ಭಾಷೆ ಪ್ರಯೋಗಿಸಿದ್ದರು; ಸೌಜನ್ಯದಿಂದ ಕೇಳಿಸಿಕೊಳ್ಳುವಂತಹ, ಜಾಣ್ಮೆಯಿಂದ ಉತ್ತರಿಸುವಂತಹ, ಉದ್ವೇಗರಹಿತವಾಗಿ ಪರಿಗಣಿಸುವಂತಹ ಮತ್ತು ನಿಸ್ಪಕ್ಷಪಾತ ತೀರ್ಮಾನ ಕೈಗೊಳ್ಳುವಂತಹ ಸಾಕ್ರೆಟಿಸ್‌ ಹೇಳಿದ ಉತ್ತಮ ನ್ಯಾಯಾಧೀಶರಿಗಿರಬೇಕಾದ ಉದಾತ್ತ ಗುಣಗಳಿಗೆ ಅವರು ವಿರುದ್ಧವಾಗಿದ್ದರು.

ಈ ನ್ಯಾಯಾಧೀಶರು ನೀಡಿದ ಪ್ರಚೋದನೆಗಳು ಎಷ್ಟು ಗಂಭೀರವಾಗಿವೆ ಎಂದರೆ, ನ್ಯಾಯಾಂಗ ನಿಂದನೆಯ ಆರೋಪ ಕಾಯಿದೆಯ 16ನೇ ಸೆಕ್ಷನ್‌ ಅಲ್ಲಿ ಉನ್ನತ ನ್ಯಾಯಾಲಯಗಳ ನ್ಯಾಯಮೂರ್ತಿಗಳು, ಉತ್ಕೃಷ್ಟ ಪರಂಪರೆಗೆ ಅನುಗುಣವಾಗಿ ತಮ್ಮದೇ ನ್ಯಾಯಾಲಯದ ನಿಂದನೆಗೊಳಗಾಗುವ ಅಥವಾ ನ್ಯಾಯಾಲಯದ ಘನತೆಯನ್ನು ಕುಗ್ಗಿಸುವಂತಹ ವಿವಾದಕ್ಕೆಳೆಸದೆ ಇರುವುದರರಿಂದ ಅವರಿಗೆ ಈ ಕಾಯಿದೆ ಅನ್ವಯ ಆಗುವುದಿಲ್ಲ ಎನ್ನುವುದನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎನ್ನುವ ಪ್ರಲೋಭನೆ ಹುಟ್ಟುತ್ತದೆ. ಈ ಕಾನೂನಿನ ಸೆಕ್ಷನ್‌ ನ್ಯಾಯಾಧೀಶರೊಬ್ಬರನ್ನು ತಮ್ಮದೇ ನ್ಯಾಯಾಲಯದ ನಿಂದನೆಯಲ್ಲಿ ದೋಷಿ ಎಂದು ಪರಿಗಣಿಸಬಹುದು ಎನ್ನುತ್ತದೆ. ಪ್ರಶಾಂತ್ ಭೂಷಣ್ ಮತ್ತು ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರ ಕೆಲಸಗಳ ಬಗ್ಗೆ ತುಲನಾತ್ಮಕ ವಿಶ್ಲೇಷಣೆ ಮಾಡಿದರೆ, ನ್ಯಾಯಾಲಯ ನಿಂದನೆ ಯಾರಿಂದಾಗಿದೆ ಎಂದು ಪರಿಗಣಿಸುತ್ತೀರಿ? ನನ್ನ ವಾದವನ್ನು ಇಲ್ಲಿಗೆ ಮುಗಿಸುತ್ತೇನೆ.

ಆದರೆ ಕೊನೆಯ ಎರಡು ಮಾತುಗಳನ್ನಾಡಿ ಅದನ್ನು ಮುಗಿಸುತ್ತೇನೆ– ಮೊದಲನೆಯದು, ಸಾರ್ವಕಾಲಿಕವಾಗಿ ಎಲ್ಲ ಬಗೆಯ ತಪ್ಪುಗಳನ್ನು ಎಸಗಿದ ಈ ನ್ಯಾಯಮೂರ್ತಿಯ ಭವಿಷ್ಯ ಏನಾಗುತ್ತದೆ ಎಂಬುದನ್ನು ನಾವೆಲ್ಲಾ ಎದುರು ನೋಡಬೇಕು. ರಾಷ್ಟ್ರೀಯ ಕಂಪೆನಿ ಕಾಯ್ದೆ ಮೇಲ್ಮನವಿ ನ್ಯಾಯಾಧಿಕರಣದ ಅಧ್ಯಕ್ಷತೆ ಮತ್ತು ನವದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹುದ್ದೆಗೆ ನೇಮಕವಾಗುವವರು ಯಾರು ಎಂಬ ಬಗ್ಗೆ ಗುಸುಗುಸು ಶುರುವಾಗಿದೆ. ಎರಡೂ ಪ್ರಮುಖ ಸಂಸ್ಥೆಗಳು! ಎರಡನೆಯದು ದೇಶದ ದೊಡ್ಡ ಭವಿಷ್ಯ ಮತ್ತು ಮುಂದಿನ ಪೀಳಿಗೆಯ ಒಳಿತಿಗಾಗಿ ನಾವು ಒಂದು ಆಲೋಚನೆ ಮಾಡಬೇಕಿದೆ. ಅದೇನೆಂದರೆ ಭಾರತದ ಮುಖ್ಯ ನ್ಯಾಯಮೂರ್ತಿಗಳ ಮಹತ್ವದ ಕಚೇರಿಯನ್ನು ಸದ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾಗಿರುವ ವಿಶಾಲ್ ಮಿಶ್ರಾ ಅವರಿಂದ ಹೇಗೆ ದೂರ ಉಳಿಸಬಹುದು ಎಂಬುದು. ಭಾರಿ ಅಕ್ರಮಗಳಿಂದ ಹೈಕೋರ್ಟ್ ನ್ಯಾಯಮೂರ್ತಿ ಪದವಿ ಪಡೆದಿರುವುದು ಮುಂದೆ ಕಾನೂನುಬದ್ಧವಾಗಿ, ಸುಪ್ರೀಂಕೋರ್ಟಿನಲ್ಲಿ ಸಮಾನರಲ್ಲಿ ಮೊದಲಿಗರಾದ ದೇಶದ ಪ್ರಥಮ ನ್ಯಾಯಮೂರ್ತಿ ಎನಿಸಿಕೊಳ್ಳಬಾರದಲ್ಲ ಅದಕ್ಕಾಗಿ.

ಲೇಖಕರು ಮದ್ರಾಸ್ ಹೈಕೋರ್ಟ್ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ಹಿರಿಯ ವಕೀಲ.

(ಸೂಚನೆ: ಈ ಲೇಖನವು ಲೇಖಕರ ಮೂಲ ಇಂಗ್ಲಿಷ್ ಲೇಖನದ ಭಾಷಾಂತರವಾಗಿದೆ. ಈ ಲೇಖನದಲ್ಲಿ ವ್ಯಕ್ತವಾದ ದೃಷ್ಟಿಕೋನ ಮತ್ತು ಅಭಿಪ್ರಾಯಗಳು ಲೇಖಕರ ಸ್ವಂತದ್ದಾಗಿವೆ. ಅವು ಬಾರ್ & ಬೆಂಚ್‌ನ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ.)

Related Stories

No stories found.
Kannada Bar & Bench
kannada.barandbench.com