ಆನ್‌ಲೈನ್‌ ಜೂಜಾಟದ ಕುರಿತು ನಿರ್ಧಾರ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್‌

ಮಾರ್ಚ್‌ 31ರಂದು ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸದ ಹಿನ್ನೆಲೆಯಲ್ಲಿ ಮಂಗಳವಾರ ಮತ್ತೊಮ್ಮೆ ನ್ಯಾಯಾಲಯ ಅಂಥದ್ದೇ ನಿರ್ದೇಶನ ಹೊರಡಿಸಿದೆ.
online gambling
online gambling

ಕರ್ನಾಟಕದಲ್ಲಿ ಆನ್‌ಲೈನ್‌ ಜೂಜಾಟವನ್ನು ನಿಷೇಧಿಸುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿರುವ ಹೈಕೋರ್ಟ್‌ ಭಾರತ ಸರ್ಕಾರವನ್ನು ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಬೇಕಿದೆ ಎಂದಿದೆ.

“ಆನ್‌ಲೈನ್‌ ಜೂಜಾಟವನ್ನು ನಿಷೇಧಿಸುವ ಇರಾದೆಯನ್ನು ರಾಜ್ಯ ಸರ್ಕಾರ ಹೊಂದಿದೆಯೇ? ಇದೊಂದು ನೀತಿ ನಿರೂಪಣೆಯ ವಿಚಾರವಾಗಿದ್ದು, ಸರ್ಕಾರದ ನಿಲುವು ಪ್ರಕಟಿಸಬೇಕಿದೆ. ಮಾರ್ಚ್‌ 31ರ ಆದೇಶವನ್ನು ನೀವು ಪಾಲಿಸಿಲ್ಲ…” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂಬುದನ್ನು ಗಮನಿಸಿದ ಪೀಠವು “ಮಾರ್ಚ್‌ 31ರ ಆದೇಶದ ಅನುಸಾರ ರಾಜ್ಯ ಸರ್ಕಾರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು” ಎಂದಿತು. ಮೇ 27ರ ಒಳಗೆ ಆನ್‌ಲೈನ್‌ ಜೂಜಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತ್ತು. ತನ್ನ ಆದೇಶ ಪಾಲಿಸಲಾಗಿಲ್ಲ ಎಂಬುದನ್ನು ಗಮನಕ್ಕೆ ತಂದುಕೊಂಡ ಪೀಠವು ಅಂಥದ್ದೇ ನಿರ್ದೇಶನವನ್ನು ಮತ್ತೊಮ್ಮೆ ಹೊರಡಿಸಿದೆ.

ಸ್ಪಷ್ಟವಾದ ನಿಯಂತ್ರಣ ಕ್ರಮಗಳನ್ನು ರೂಪಿಸುವವರೆಗೆ ಎಲ್ಲಾ ವಿಧದ ಆನ್‌ಲೈನ್‌ ಜೂಜಾಟ ಮತ್ತು ಬೆಟ್ಟಿಂಗ್‌ ಅನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

ಸರ್ಕಾರವು ಯಾವುದೇ ನಿಯಂತ್ರಣ ಕ್ರಮಗಳನ್ನು ರೂಪಿಸಿಲ್ಲ. ಆನ್‌ಲೈನ್‌ ಜೂಜಾಟ ಮತ್ತು ಬೆಟ್ಟಿಂಗ್‌ ನಿಷೇಧಿಸುವ ತುರ್ತು ಅಗತ್ಯವಿದೆ ಎಂದು ಅರ್ಜಿದಾರೆ ಡಿ ಶಾರದಾ ಮನವಿಯಲ್ಲಿ ಕೋರಿದ್ದಾರೆ. ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಅಸಹಾಯಕ ಸಮುದಾಯಕ್ಕೆ ಸೇರಿದವರು ವಿಶೇಷವಾಗಿ ಯುವಕರು ಆನ್‌ಲೈನ್‌ ಜೂಜಾಟ ಮತ್ತು ಬೆಟ್ಟಿಂಗ್‌ಗೆ ಬಲಿಯಾಗುತ್ತಿದ್ದಾರೆ ಎಂದು ಮನವಿಯಲ್ಲಿ ಕಳಕಳಿ ವ್ಯಕ್ತಪಡಿಸಲಾಗಿದೆ.

ಕೇಂದ್ರ ಸರ್ಕಾರವನ್ನೂ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿಸಬೇಕು ಎಂದು ರಾಜ್ಯ ಸರ್ಕಾರದ ಪರ ವಕೀಲರು ಹೇಳಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅರ್ಜಿದಾರರ ಪರ ವಕೀಲ ಶ್ರೀಧರ್‌ ಪ್ರಭು ಅವರು ಜೂಜಾಟ ಮತ್ತು ಬೆಟ್ಟಿಂಗ್‌ ರಾಜ್ಯ ಪಟ್ಟಿಯ ವ್ಯಾಪ್ತಿಗೆ ಒಳಪಡುತ್ತವೆ ಎಂದರು. ಈ ವಾದವನ್ನು ಪೀಠ ಒಪ್ಪಿಕೊಂಡಿತು.

“ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಹೆದರುತ್ತಿದೆ ಎಂದೆನಿಸುತ್ತದೆ. ಜೂಜಾಟ ಮತ್ತು ಬೆಟ್ಟಿಂಗ್‌ನಿಂದ ಒಂದಷ್ಟು ವರಮಾನ ಕೇಂದ್ರ ಸರ್ಕಾರಕ್ಕೆ ಬರುತ್ತದೆ ಎಂದು ನೀತಿ ಆಯೋಗದ ವರದಿಯಲ್ಲಿ ತಿಳಿಸಲಾಗಿದೆ” ಎಂದು ಪ್ರಭು ವಿವರಿಸಿದರು.

Also Read
ಆನ್‌ಲೈನ್‌ ಜೂಜಾಟ ನಿಷೇಧ ಕಾನೂನು ಜಾರಿಗೆ ತಮಿಳುನಾಡು ಸರ್ಕಾರದ ಚಿಂತನೆ; 'ಹೀರೊ' ಆರಾಧನೆಗೆ ಮದ್ರಾಸ್ ಹೈಕೋರ್ಟ್ ಕಳವಳ

ಕೌಶಲಕ್ಕೆ ಸಂಬಂಧಿಸಿದ ಆಟಗಳ ಕುರಿತು ರಾಜ್ಯ ಸರ್ಕಾರವು ನಿಯಂತ್ರಣ ಕ್ರಮಗಳನ್ನು ರೂಪಿಸಬೇಕು ಎಂದು ಅರ್ಜಿದಾರರೊಬ್ಬರ ಪರ ವಾದಿಸಿದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ಹೇಳಿದರು. “ಕೌಶಲಕ್ಕೆ ಸಂಬಂಧಿಸಿದ ಆಟಗಳನ್ನು ನಿಯಂತ್ರಣಕ್ಕೆ ಒಳಪಡಿಸುವುದು ಹೇಗೆ? ಇದೊಂದೇ ಒಂದು ಪ್ರಶ್ನೆಗೆ ರಾಜ್ಯ ಸರ್ಕಾರ ಉತ್ತರಿಸಬೇಕಿದೆ. ಜೂಜಾಟ ನಿಯಂತ್ರಿಸುವುದರ ಪರವಾಗಿ ನಾವಿದ್ದೇವೆ. ಆದರೆ ಅದು ಕಾನೂನಿನ ಪರಿಮಿತಿಯ ಒಳಗಿರಬೇಕು” ಎಂದರು.

ಆನ್‌ಲೈನ್‌ ಜೂಜಾಟ ಸುಧಾರಣೆಗೆ ಸಂಬಂಧಿಸಿದಂತೆ ಈಗಾಗಲೇ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ನಿರ್ಧಾರ ಕೈಗೊಂಡಿವೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು. ನಿರ್ಧಾರ ಪ್ರಕಟಿಸಲು 15 ದಿನಗಳ ಕಾಲಾವಕಾಶ ನೀಡುವಂತೆ ರಾಜ್ಯ ಸರ್ಕಾರ ಕೋರಿತು. ಹೀಗಾಗಿ, ವಿಚಾರಣೆಯನ್ನು ಜೂನ್‌ 22ಕ್ಕೆ ಮುಂದೂಡಲಾಯಿತು.

Related Stories

No stories found.
Kannada Bar & Bench
kannada.barandbench.com