ವಕೀಲರ ವೇದಿಕೆಗಳಲ್ಲಿ ನ್ಯಾಯಾಧೀಶರ ವೈಯಕ್ತಿಕ ನಿಂದನೆ, ತೇಜೋವಧೆಯು ಕ್ರಿಮಿನಲ್‌ ಅಪರಾಧ

"ಪ್ರಕರಣ ತೀರ್ಮಾನಿಸುವಾಗ ನ್ಯಾಯಾಧೀಶರು ಸರ್ವಶಕ್ತರಂತೆ ಗೋಚರಿಸಬಹುದು, ಆದರೆ, ವೈಯಕ್ತಿಕ ನೆಲೆಯಲ್ಲಿ, ಅವರಷ್ಟು ಅಸಹಾಯಕರು ಯಾರೂ ಇಲ್ಲ. ತಮ್ಮ ಸಮರ್ಥನೆಗಾಗಿ ನ್ಯಾಯಾಧೀಶರು ಏನೂ ಮಾಡುವಂತಿಲ್ಲ" ಎನ್ನುತ್ತಾರೆ ವಕೀಲರಾದ ಶ್ರೀಧರ ಪ್ರಭು.
High Court of Karnataka
High Court of Karnataka
Published on

"ನ್ಯಾಯಾಧೀಶರು ಅಪ್ರಾಮಾಣಿಕರು ಎಂದು ಖಾಸಗಿಯಾಗಿಯೂ ಸಹ ಎಂದಿಗೂ ಮಾತನಾಡಬೇಡಿ," ಹೀಗೆಂದು ತಮ್ಮ ಕಿರಿಯ ಸಹೋದ್ಯೋಗಿಗಳಿಗೆ ಯಾವಾಗಲೂ ಹೇಳುತ್ತಿದ್ದವರು, ದಶಕಗಳ ಹಿಂದೆ ಮಂಗಳೂರಿನ ನ್ಯಾಯಾಲಯಗಳಲ್ಲಿ ವಕಾಲತ್ತು ನಡೆಸುತ್ತಿದ್ದ ಪ್ರಸಿದ್ಧ ಹಿರಿಯ ವಕೀಲರಾದ ನೂಯಿ ಶ್ರೀನಿವಾಸ ರಾವ್ (ಪೆಪ್ಸಿ ಸಮೂಹದ ಮಾಜಿ ಮುಖ್ಯಸ್ಥೆ ಇಂದಿರಾ ನೂಯಿಯವರ ಮಾವನ ಸಹೋದರ).

ಇಂದಿನ ತಾರ್ಕಿಕ ಮನಸ್ಸುಗಳಿಗೆ ಬಿಡಿ, ಹಳೆಯ ಕಾಲದವರಿಗೂ ಸಹ ಈ ಮಾತು ಪಚನವಾಗಿರಲಿಕ್ಕಿಲ್ಲ. “ಅದೆಷ್ಟೋ ಬಾರಿ ತೀರ್ಪುಗಳನ್ನು ನೋಡಿದರೆ ಎಂಥವರಿಗೂ ಅದು ಸ್ವಯಂ ಗೋಚರವಾಗುತ್ತದೆ, ನ್ಯಾಯಾಂಗಗಲ್ಲಿ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕವಾಗಿ ನ್ಯಾಯಾಧೀಶರೇ ಮಾತನಾಡಿದ್ದಾರೆ, ಹೀಗಿದ್ದೂ ಈ ಮಾತನ್ನು ಒಪ್ಪುವುದು ಹೇಗೆ?” ಎನ್ನುವ ಪ್ರಶ್ನೆ ಮೂಡಬಹುದು.

ಇದಕ್ಕೆ ಪ್ರತಿಯಾಗಿ ಶ್ರೀನಿವಾಸ ರಾವ್‌ ಅವರು ಹೇಳಿದ್ದು ತುಂಬಾ ಮಾರ್ಮಿಕವಾಗಿದೆ. "ಓರ್ವ ನ್ಯಾಯಾಧೀಶರು ಅಪ್ರಾಮಾಣಿಕರೆಂದು ನಮಗೆ ಸ್ಪಷ್ಟವಾಗಿ ಗೊತ್ತಿದ್ದರೆ, ವಕೀಲರು ಎಂದಿಗೂ ಅವರ ಮುಂದೆ ವಕಾಲತ್ತು ನಡೆಸಬಾರದು; ಜೊತೆಗೆ ಅವರ ಮೇಲೆ ದೂರು ದಾಖಲಿಸಿ ತಾರ್ಕಿಕ ಅಂತ್ಯದವರೆಗೂ ಸಾಗಬೇಕು. ಒಂದು ವೇಳೆ ನ್ಯಾಯಾಧೀಶರ ಮೇಲಿನ ಆಪಾದನೆ ಸಾಬೀತಾಗದಿದ್ದರೆ, ದೂರುದಾರರಿಗೆ ಶಿಕ್ಷೆಯಾಗಬೇಕು. ನಮ್ಮ ನ್ಯಾಯ ಪದ್ಧತಿಯು ಆರೋಪ ಸಾಬೀತಾಗುವವರೆಗೂ ಆರೋಪಿಯು ನಿರ್ದೋಷಿ ಎಂದು ಸಾರಿರುವಾಗ, ದೂರುದಾರನೂ ಪರೋಕ್ಷವಾಗಿ ಆರೋಪಿ ಸ್ಥಾನದಲ್ಲಿರುತ್ತಾನೆ. ಇನ್ನು ನ್ಯಾಯಾಧೀಶರ ಮೇಲಿನ ಆರೋಪಗಳ ವಿಚಾರಣೆ ಸಾರ್ವಜನಿಕವಾಗಿ ನಡೆಯುವುದಿಲ್ಲ, ಬದಲಿಗೆ ನ್ಯಾಯಾಂಗ ತನ್ನದೇ ಆಂತರಿಕ ವಿಚಾರಣೆ ನಡೆಸುತ್ತದೆ. ನ್ಯಾಯಾಧೀಶರು ಖಂಡಿತವಾಗಲೂ ಪ್ರಶ್ನಾತೀತರಲ್ಲ. ಆದರೆ, ಅವರ ಮೇಲೆ ಆರೋಪ ಹೊರಿಸುವವರು ದೂರು ದಾಖಲಿಸಿ, ತಾರ್ಕಿಕ ಅಂತ್ಯದವರೆಗೂ ಕೊಂಡೊಯ್ಯುವ ಧೈರ್ಯ ತೋರುತ್ತಾರೆಯೇ? ಇದೆಲ್ಲ ಒಂದು ಕಡೆಯಾದರೆ, ಇನ್ನೊಂದೆಡೆ, ಆರೋಪ ಹೊರಿಸಿದ ಮೇಲೆಯೂ ಅವರದ್ದೇ ನ್ಯಾಯಾಲಯದಲ್ಲಿ ಕೇಸು ನಡೆಸಿದರೆ, ಅವರ ಅನೈತಿಕತೆಯಲ್ಲಿ ನಾವೂ ಪಾಲ್ಗೊಂಡಂತಾಗಲಿಲ್ಲವೇ?"

ಶ್ರೀನಿವಾಸ ರಾವ್‌ ಅವರ ಈ ವಾದಸರಣಿ ಇಂದಿನ ಕಾಲಕ್ಕೆ ತುಂಬಾ ಅವಾಸ್ತವಿಕ ಎನಿಸಬಹುದು ಆದರೆ, ಅತಾರ್ಕಿಕವೇ?

ನ್ಯಾಯಾಂಗದ ಅಭಿನ್ನ ಅಂಗವಾದ ನಮ್ಮ (ವಕೀಲ) ಕ್ಷೇತ್ರವನ್ನು ಸರಿಮಾಡಿಟ್ಟುಕೊಳ್ಳಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ. ಆದರೆ, ನಿರ್ದಿಷ್ಟ ನ್ಯಾಯಾಧೀಶರೊಬ್ಬರ ಬಗ್ಗೆ ನಮ್ಮ ಸಂಘಗಳ ವೇದಿಕೆಗಳ ಮೇಲಿಂದ ನೇರ ಮತ್ತು ನಿರ್ದಿಷ್ಟ ಆರೋಪ ಹೊರಿಸುವಾಗ, ನಮ್ಮ ಸಂಘಗಳು ಮತ್ತು ಪರಿಷತ್ತು ನೇರ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕಾಗುತ್ತದೆ. ಮೊದಲಿಗೆ, ನ್ಯಾಯಾಧೀಶರೊಬ್ಬರ ಮೇಲೆ ನಿರ್ದಿಷ್ಟ ಪ್ರಕರಣ ಒಂದರಲ್ಲಿ ಅಥವಾ ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ವ್ಯಕ್ತಿಯೊಬ್ಬರು ಆರೋಪ ಹೊರಿಸಿದರೆ, ಮೊದಲಿಗೆ ಅಂತಹ ವ್ಯಕ್ತಿ ಈ ತೀರ್ಪಿನ ಮೇಲೆ ಮೇಲ್ಮನವಿ (ಅಪೀಲು) ದಾಖಲಿಸಿದ್ದಾರೆಯೇ ಎಂಬುದನ್ನು ಮೊದಲಿಗೆ ಪರಿಶೀಲಿಸಬೇಕು. ಮೇಲ್ಮನವಿಯು ವಿಚಾರಣಾ ಹಂತದಲ್ಲಿದೆಯೋ, ಅಂತಿಮವಾಗಿ ತೀರ್ಮಾನವಾಗಿದ್ದಲ್ಲಿ, ಅದನ್ನೂ ಪರಿಶೀಲಿಸಬೇಕು. ಜೊತೆಗೆ, ಈ ಬಗ್ಗೆ ಮುಖ್ಯ ನ್ಯಾಯಾಧೀಶರ ಬಳಿ ದೂರು ದಾಖಲಿಸಿದ್ದಾರೆಯೇ ಎಂಬುದನ್ನೂ ಪರಿಶೀಲಿಸಬೇಕು. ಈ ಬಗ್ಗೆ ಸಂಘ ಅಥವಾ ಪರಿಷತ್ತಿಗೆ ಸಂಪೂರ್ಣ ಮನವರಿಕೆಯಿದ್ದರೆ, ಸಂಘ ಅಥವಾ ಪರಿಷತ್ತು ಈ ಜವಾಬ್ದಾರಿಯನ್ನು ತಾನೇ ಹೊತ್ತುಕೊಳ್ಳಬೇಕು.

ಇದರಷ್ಟೇ ಮುಖ್ಯವಾದದ್ದು, ದೂರುದಾರ ಯಾವುದೇ ಸಮರ್ಥನೀಯ ದಾಖಲೆಗಳೇ ಇಲ್ಲದೇ ಸುಖಾಸುಮ್ಮನೆ ಆರೋಪ ಹೊರಿಸಿದ್ದು ಎಂದಾದರೆ, ಸಂಘ ಅಥವಾ ಪರಿಷತ್ತು ಅಂತಹ ವ್ಯಕ್ತಿಯ ಮೇಲೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು.

ಇನ್ನು, ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಾದಗಳ ಕುರಿತು ನೇರವಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೇ ಪತ್ರ ಕಳುಹಿಸುವ ಪರಿಪಾಠ ಇತ್ತೀಚೆಗೆ ಪ್ರಚಲಿತದಲ್ಲಿದೆ. ಹೈಕೋರ್ಟ್‌ಗಳ ತೀರ್ಪುಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲ್ಪಡುತ್ತವೆ ನಿಜ. ಆದರೆ, ಹೈಕೋರ್ಟ್‌ಗಳಿಗೆ ಸ್ವಾಯತ್ತತೆಯಿದೆ. ಇಲ್ಲಿನ ಆಡಳಿತ ಮುಖ್ಯಸ್ಥರಾದ ಮುಖ್ಯ ನ್ಯಾಯಮೂರ್ತಿಗಳು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಿಗೆ ಅಧೀನರಲ್ಲ.

ನ್ಯಾಯಾಂಗದ ಆಂತರಿಕ ವಿಚಾರಗಳ ಬಗ್ಗೆ, ಅದರಲ್ಲೂ ನ್ಯಾಯಾಧೀಶರ ನಡತೆಯಂಥ ಅತ್ಯಂತ ಸೂಕ್ಷ್ಮ ವಿಚಾರಗಳ ಬಗ್ಗೆ ನಾವು ಹಾದಿಬೀದಿಗಳಲ್ಲಿ ಚರ್ಚೆ ಮಾಡಬೇಕೋ ಅಥವಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಆಂತರಿಕವಾಗಿ ಚರ್ಚಿಸಬೇಕೋ ಎಂಬುದನ್ನು ಮುಖ್ಯವಾಗಿ ವಿವೇಚಿಸಬೇಕಿದೆ.

ಸಾರ್ವಜನಿಕರು ನ್ಯಾಯಾಂಗ, ವಕೀಲರು, ನ್ಯಾಯಾಧೀಶರು, ನ್ಯಾಯಾಲಯ ಸಿಬ್ಬಂದಿ - ಎಂದೆಲ್ಲಾ ಬಿಡಿಯಾಗಿ ನೋಡದೇ, ಒಂದು ಸಮಷ್ಟಿಯಾಗಿ ಪರಿಗಣಿಸುತ್ತಾರೆ ಎಂಬುದು ನಮ್ಮ ಅವಗಾಹನೆಯಲ್ಲಿರಬೇಕು. ನಮ್ಮ ಆರೋಪಗಳನ್ನು ಸಾರ್ವಜನಿಕ ಹೇಳಿಕೆಗಳನ್ನಾಗಿಸಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರೆ 'ಒಟ್ಟಾರೆಯಾಗಿ ಎಲ್ಲರೂ ಭ್ರಷ್ಟರೇ’ ಎಂಬ ಭಾವನೆಗೆ ಇಂಬುಕೊಟ್ಟು ನಾವೇ ಸಾರ್ವತ್ರಿಕರಿಸುತ್ತಿದ್ದೇವೆಯೇ? ಇದನ್ನೂ ಗಮನಿಸಬೇಕು.

ವಕೀಲರ ಪರಿಷತ್ತು ಅಥವಾ ಸಂಘಗಳನ್ನು ಸಾರ್ವಜನಿಕರು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಾರೆ. ನಮ್ಮ ಆಂತರಿಕ ವಿಚಾರಗಳನ್ನು ನಾವು ಬಹಿರಂಗಗೊಳಿಸುವಾಗ, ವಕೀಲರಾದ ನಮ್ಮ ಬಗ್ಗೆ ಸಾರ್ವಜನಿಕರು ಒಟ್ಟಾರೆಯಾಗಿ ಏನೆಂದುಕೊಳ್ಳಬಹುದು ಎಂಬುದು ನಮಗೆ ಎಲ್ಲಕ್ಕಿಂತ ಮುಖ್ಯವಾಗಬೇಕು. ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲರೂ ಭ್ರಷ್ಟರೇ ಅಥವಾ ಅನೇಕರು ಪ್ರಶ್ನಾರ್ಹರೆಂದು ನಾವೇ ಸಾರಿಕೊಂಡರೆ, ನಾವೇಕೆ ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಬೇಕು? ನಮ್ಮ ವ್ಯಾಜ್ಯ ಪರಿಹಾರಕ್ಕೆ ರಾಜಕಾರಣಿಯೋ, ಪೊಲೀಸ್ ಠಾಣೆಯೋ ಅಥವಾ ಇತರ ಪರ್ಯಾಯಗಳೇ ಸೂಕ್ತವಲ್ಲವೇ? ಹೀಗೆ ಸಾರ್ವಜನಿಕರು ಭಾವಿಸದಿರುವರೇ?

ಹಾಗೆಂದು, ನಾವು ಮೌನವಾಗಿರಬೇಕೇ? ಖಂಡಿತವಾಗಿಯೂ ಇಲ್ಲ. ವಕೀಲರಾಗಿ, ನಮ್ಮ ಹಕ್ಕುಗಳಿಗಾಗಿ ನಾವೇ ಹೊರಡದಿದ್ದರೆ, ಅಥವಾ ಅನ್ಯಾಯವನ್ನು ಮೌನವಾಗಿ ಸಹಿಸಿದರೆ, ನಾವು ಕಕ್ಷಿದಾರರಿಗೆ ಏನು ನ್ಯಾಯ ಕೊಡಿಸಬಹುದು?

ನಮ್ಮ ವೇದಿಕೆಗಳಲ್ಲಿ ವ್ಯಕ್ತವಾಗುವ ವೈಯಕ್ತಿಕ ಅಭಿಪ್ರಾಯಗಳೆಲ್ಲವೂ ಒಟ್ಟಾರೆ ಸಂಘದ ಪರಿಷತ್ತಿನ ನಿರ್ಣಯ ಅಥವಾ ಅಭಿಪ್ರಾಯಗಳಲ್ಲದಿರಬಹುದು. ಆದರೆ, ಅತ್ಯಂತ ಪ್ರಮುಖ ವಿಚಾರಗಳನ್ನು ಸದಸ್ಯರು ಪ್ರಸ್ತಾಪಿಸಿದಾಗ ಇವುಗಳನ್ನು ನಾವು ಒಂದೋ ನಮ್ಮದಾಗಿಸಿಕೊಂಡು ಅಂಗೀಕರಿಸಬೇಕು; ಇಲ್ಲವೇ ನಮ್ಮ ವಿರೋಧವಿದ್ದರೆ ಖಂಡಿಸಬೇಕು. ಬಹು ಮುಖ್ಯವಾಗಿ ಆರೋಪಗಳು ಗುರುತರ ಅಥವಾ ನಿರ್ದಿಷ್ಟವಿದ್ದಲ್ಲಿ, ಈ ಬಗ್ಗೆ ನಿರ್ಣಯ ಮಂಡಿಸಿ ಬಹುಮತದ ತೀರ್ಮಾನ ಕೈಗೊಳ್ಳಬೇಕು. ಆರೋಪಿತ ವ್ಯಕ್ತಿ ಯಾರೇ ಆಗಿರಲಿ, ನಮಗೆ ಸತ್ಯವೆಂದು ಮನವರಿಕೆಯಾದಲ್ಲಿ, ಸಂಘ ಅಥವಾ ಪರಿಷತ್ತಿನ ಮುಖಾಂತರವೇ ಮುಂದೆ ನಿಂತು ಹೋರಾಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು.

ಒಂದು ವೇಳೆ ವೈಯಕ್ತಿಕ ನಿಂದನೆ, ಊಹಾಪೋಹ ಅಥವಾ ಹುರುಳಿಲ್ಲದೇ ಮಾಡಿದ ಆರೋಪವೆಂದಾದಲ್ಲಿ, ಅಂತಹ ವ್ಯಕ್ತಿಯ ಮೇಲೆ ನಾವೇ ಕಾನೂನು ಕ್ರಮಕ್ಕೆ ಮುಂದಾಗಬೇಕು. ಸಂಘ ಮತ್ತು ಪರಿಷತ್ತಿನ ನಿಯಮಗಳನುಸಾರ, ಹುರುಳಿಲ್ಲದೆ ನಿಂದನೆ ಮಾಡಿದ ವ್ಯಕ್ತಿಯ ಮೇಲೆ ಕ್ರಮವೂ ಜರುಗಬೇಕು. ನಮ್ಮ ವೇದಿಕೆಗಳನ್ನು ನ್ಯಾಯಾಧೀಶರ ವೈಯಕ್ತಿಕ ನಿಂದನೆ ಅಥವಾ ತೇಜೋವಧೆಗೆ ಬಳಸಿಕೊಳ್ಳುವುದು ನ್ಯಾಯಾಂಗ ನಿಂದನೆ ಮತ್ತು ಕ್ರಿಮಿನಲ್ ಅಪರಾಧ. ಇಂತಹ ಪ್ರಕರಣಗಳಲ್ಲಿ ನಾವೇ ಮುಂದೆ ನಿಂತು ದೂರು ದಾಖಲಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕಿದೆ. ನಮಗೂ, ವೈಯಕ್ತಿಕ ಆರೋಪಗಳಿಗೂ ಸಂಬಂಧವಿಲ್ಲ ಎಂದು ನಾವು ನುಣುಚಿಕೊಂಡರೆ ಅದು ಅತ್ಯಂತ ಅಸಮರ್ಥನೀಯ ಮತ್ತು ನಾವೂ ಪರೋಕ್ಷವಾಗಿ ಈ ಅಪರಾಧದಲ್ಲಿ ಭಾಗಿಯಾದಂತೆ. ಭ್ರಷ್ಟಾಚಾರ ಘಾತುಕ. ಆದರೆ, ನಿರಾಧಾರವಾದ ಆರೋಪಗಳು ಆತ್ಮಘಾತುಕ.

ನ್ಯಾಯಾಧೀಶರ ಮೇಲೆ ಆಧಾರರಹಿತ ಆರೋಪ ಬಂದರೆ, ತೇಜೋವಧೆಯಾದರೆ ಅದನ್ನು ನ್ಯಾಯಾಧೀಶರೇ ಸರಿಪಡಿಸಿಕೊಳ್ಳಬೇಕು ಎಂಬ ನಿಲುವು ಸರ್ವಥಾ ಸಮರ್ಥನೀಯವಲ್ಲ. ನ್ಯಾಯಾಧೀಶರು ಪ್ರಕರಣಗಳನ್ನು ತೀರ್ಮಾನಿಸುವಾಗ ಸರ್ವಶಕ್ತರಂತೆ ಗೋಚರಿಸಬಹುದು, ಆದರೆ, ವೈಯಕ್ತಿಕ ನೆಲೆಯಲ್ಲಿ, ನ್ಯಾಯಾಧೀಶರಷ್ಟು ಅಸಹಾಯಕರು (vulnerable) ಯಾರೂ ಇರಲಿಕ್ಕಿಲ್ಲ. ತಮ್ಮ ಸಮರ್ಥನೆಗಾಗಿ ನ್ಯಾಯಾಧೀಶರು ಏನೂ ಮಾಡುವಂತಿಲ್ಲ.

ವೈಯಕ್ತಿಕ ನಿಂದನೆ ಪ್ರಕರಣಗಳಲ್ಲಿ ನ್ಯಾಯಾಂಗ ನಿಂದನೆ ಅಸ್ತ್ರ ಬಳಸಬಾರದು ಎಂಬ ಕಟ್ಟಳೆಯಿದೆ. ಮುಖ್ಯ ನ್ಯಾಯಮೂರ್ತಿಗಳು ಮಾತ್ರವೇ ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಹುದು. ಉಳಿದಂತೆ, ಮಾನಹಾನಿ ಪ್ರಕರಣ ದಾಖಲು ಮಾತ್ರವೇ ದಾರಿ.

ಮಾನಹಾನಿ ಪ್ರಕರಣ ದಾಖಲಿಸಿದರೆ, ತಾವೇ ಕಕ್ಷಿದಾರರಾಗಿ ಇನ್ನೋರ್ವ ನ್ಯಾಯಾಧೀಶರ ಮುಂದೆ ಕಟಕಟೆಯಲ್ಲಿ ನಿಂತು ತಮ್ಮ ಪರವಾಗಿ ಸಾಕ್ಷಿ ಹೇಳಿಕೊಳ್ಳಬೇಕು. ಪತ್ರಿಕಾ ಹೇಳಿಕೆಗಳನ್ನೂ ನೀಡುವಂತಿಲ್ಲ. ಇನ್ನು ಎಲ್ಲಕ್ಕೂ ಮುಖ್ಯವಾಗಿ ಇರುವುದನ್ನು ಸಾಬೀತುಪಡಿಸಬಹುದು, ಇಲ್ಲದ್ದನ್ನು ಇಲ್ಲವೆಂದು ಸಾಬೀತುಪಡಿಸುವುದು ಹೇಗೆ? 

ನಮ್ಮ ಬಗ್ಗೆ ಕಕ್ಷಿದಾರರು ಇಲ್ಲಸಲ್ಲದ ಆರೋಪ ಹೊರಿಸಿದರೆ, ನಾವು ಶಿಕ್ಷೆ ಕೊಡಿಸಲು ನ್ಯಾಯಾಲಯಗಳಿಗೆ ಮೊರೆಹೋಗಬಹುದು ಕೊನೆಗೆ ಏನೂ ಬೇಡವಾದರೆ ನಿರ್ಲಕ್ಷಿಸಬಹುದು. ನ್ಯಾಯಾಧೀಶರು ಏನು ಮಾಡಬೇಕು? ಏನೇ ಆದರೂ, ನ್ಯಾಯಾಧೀಶರಿಗೆ ವಕೀಲರ ಸಂಘ ಮತ್ತು ಪರಿಷತ್ತುಗಳೇ ತವರು ಮನೆ. ನಮ್ಮ ಅವಿಭಾಜ್ಯ ಭಾಗವನ್ನೇ ನಾವು ತ್ಯಜಿಸಿದರೆ, ಅದು ಆತ್ಮಘಾತುಕ.

ಸಾಮಾನ್ಯರಿಗೆ ಈ ಸೂಕ್ಷ್ಮಗಳು ನಿಲುಕದಿರಬಹುದು. ಆದರೆ, ವಕೀಲರಾದ ನಮಗೆ, ನಮ್ಮ ಸಂಘ ಮತ್ತು ಪರಿಷತ್ತುಗಳಿಗೆ ಇದು ಚೆನ್ನಾಗಿ ಗೊತ್ತಿರುವ ವಿಚಾರ. ಹೀಗಿದ್ದೂ, ನಾವು ಈ ಸೂಕ್ಷಗಳನ್ನು ಮೀರುತ್ತಿದ್ದೇವೆಯೇ? ಆತ್ಮಾವಲೋಕನ ಅತ್ಯಗತ್ಯ. ಈ ಆತ್ಮಾವಲೋಕನವೂ ಆದಷ್ಟು ಮನಯೊಳಗಡೆಯೇ ಇರಲಿ.

- ಶ್ರೀಧರ ಪ್ರಭು, ವಕೀಲರು, ಕರ್ನಾಟಕ ಹೈಕೋರ್ಟ್‌

Kannada Bar & Bench
kannada.barandbench.com