ಕಾನೂನು ಕೈಯಲ್ಲಿ ಹಿಡಿದು ಬಣ್ಣದಲೋಕ ಗೆದ್ದ ‘ಸಚ್ಚಿ’…

ಇತ್ತೀಚೆಗೆ ನಿಧನರಾದ ಮಲಯಾಳಂ ಚಿತ್ರರಂಗದ ದಿಗ್ಗಜ ನಿರ್ದೇಶಕರಲ್ಲೊಬ್ಬರಾದ ‘ಸಚ್ಚಿ’ಯವರ ವಕೀಲಿ ದಿನಗಳನ್ನೂ, ಬಣ್ಣದ ಲೋಕಕ್ಕೆ ತೆರೆದುಕೊಂಡ ಅವರ ಪ್ರತಿಭೆಯನ್ನೂ ಆರ್ದ್ರ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ ವಕೀಲರಾದ ರೆಂಜಿತ್ ಬಿ ಮರಾರ್.
K.R.Sachidanandan (Centre) with Biju Menon and Prithviraj.
K.R.Sachidanandan (Centre) with Biju Menon and Prithviraj.
Published on

ಕೋರ್ಟಿನ ಕೋಣೆಯಲ್ಲಿ ಸಾಮು ಮಾಡಲು ವಕೀಲರಿಗೆ ಕಾನೂನಿನ ಅಧ್ಯಯನ ಮತ್ತು ಅದರ ಪರಿಣತಿ ಒಂದು ಸಾಧನವಾಗಿದ್ದರೆ ಕೆ.ಆರ್.ಸಚ್ಚಿದಾನಂದನ್ (ನಮಗೆಲ್ಲಾ ಸಚ್ಚಿ ) ಕ್ರಿಮಿನಲ್ ಕಾನೂನಿನಲ್ಲಿ ತನ್ನದೇ ಆದ ಪರಿಣತಿ ಪಡೆದು ಚಲನಚಿತ್ರ ಜಗತ್ತನ್ನು ಗೆದ್ದರು.

ಸಚ್ಚಿಯ ಕಾನೂನು ಅಧ್ಯಯನ ಕೇವಲ ಆಕಸ್ಮಿಕ. ಆದರೆ ಅವರಿಗೆ ಕಾನೂನು ಪರಿಣತಿ ಮೂಡಿಸಿ, ಮನುಷ್ಯನ ಮನಸ್ಸನ್ನು ಅಳೆದು ತೂಗಿ ಅರ್ಥಪೂರ್ಣ ಸಿನಿಮಾ ಕಟ್ಟುವಂತೆ ಮಾಡುವುದು ಭಗವಂತನ ಇಚ್ಛೆಯಾಗಿತ್ತು. ಸಚ್ಚಿಯ ಜೀವನ ಎಂದರೆ ಕೇವಲ ಸಿನಿ ದಿಗ್ಗಜ ಅಥವಾ ವಕೀಲನ ಕತೆಯಲ್ಲ. ಆದರೆ ಒಂದು ಕ್ಷೇತ್ರದಲ್ಲಿ ಪಡೆದ ಅನುಭವವನ್ನು ಮತ್ತೊಂದರಲ್ಲಿ ಮೇಳೈಸಿ ಲಕ್ಷಾಂತರ ಜನರ ಮನಸ್ಸನ್ನು ಹಿಡಿದಿಟ್ಟ ಮನುಷ್ಯನೊಬ್ಬನ ಕತೆ.

ತನ್ನ ಎದೆಗಾರಿಕೆ ಮತ್ತು ಸ್ವತಂತ್ರ ಮನೋಭಾವದ ಕಾರಣಕ್ಕೆ ಸಚ್ಚಿ ಮೇಧಾವಿ ಕ್ರಿಮಿನಲ್ ವಕೀಲ ಕೂಡ ಆಗಿದ್ದರು ಎಂದರೆ ಅನೇಕರು ಅಚ್ಚರಿಪಡುತ್ತಾರೆ. ಅವರ ಹೆಸರನ್ನು ಹೊತ್ತ ಅನೇಕ ವರದಿಯಾದ ಪ್ರಕರಣಗಳಿವೆ. ಚಲನಚಿತ್ರಗಳಲ್ಲಿ ಅವರು ಈ ಅನುಭವಗಳನ್ನು ಧಾರಾಳವಾಗಿ ಬಳಸಿದ್ದಾರೆ. ನಾಟಕೀಯವಾಗಿರುವ ಜೊತೆಗೆ ಕಾನೂನಿನ ಆಳ ಪಾಂಡಿತ್ಯ ಹಾಗೂ ಮನುಷ್ಯ ಸ್ಥಿತಿಯಲ್ಲಿ ಅದ್ದಿ ತೆಗೆದಂತಿದ್ದ ಕಾರಣಕ್ಕಾಗಿ ಅವರ ಪಾಟೀ ಸವಾಲು ಅದ್ಭುತವಾಗಿರುತ್ತಿತ್ತು.

ವಕೀಲರಾಗಿ, ಅವರು ತುಂಬಾ ಧಾರಾಳಿ ಕೂಡ. ವಿಚಾರಣೆಯೊಂದರಲ್ಲಿ ನಾನು ಅವರಿಗೆ ಸಹಾಯ ಮಾಡುತ್ತಿದ್ದಾಗಿನ ಘಟನೆ ನೆನಪಾಗುತ್ತಿದೆ. ಕಕ್ಷೀದಾರರೊಬ್ಬರು ಪ್ರತಿದಿನ ನ್ಯಾಯಾಲಯಕ್ಕೆ ಹಾಜರಾಗುವಂತೆ ಮಾಡಲು ಆತನಿಗೆ 50 ರೂಪಾಯಿ ಪಾವತಿಸುವಂತೆ ನನ್ನನ್ನು ಕೋರಿದ್ದರು. ನನ್ನಿಂದ ಹಣ ಪಡೆಯುವುದಕ್ಕೆಂದೇ ಆ ಕಕ್ಷೀದಾರ ಒಂದು ದಿನವೂ ಕೋರ್ಟಿಗೆ ಹಾಜರಾಗುವುದನ್ನು ತಪ್ಪಿಸಲಿಲ್ಲ!

ಸಚ್ಚಿ ಉಚಿತ ಕಾನೂನು ಸೇವೆ ಒದಗಿಸುತ್ತಿದ್ದರು. ಸಚ್ಚಿ ನನಗೆ ನೀಡುತ್ತಿದ್ದ ಪ್ರಾಯೋಗಿಕ ತರಬೇತಿಗಾಗಿ ನಾನು ತೆರಬೇಕಿದ್ದ ಶುಲ್ಕವನ್ನು ಬಡವನಾಗಿದ್ದ ಕಕ್ಷೀದಾರನಿಗೆ ಪಾವತಿಸಬೇಕಿತ್ತು. ವಿಚಾರಣೆ ಅಂತಿಮ ಹಂತಕ್ಕೆ ಬಂದಾಗ ಸಚ್ಚಿಯವರ ತಂತ್ರಗಾರಿಕೆಯಿಂದಾಗಿ ನಮ್ಮ ಕಕ್ಷೀದಾರ ಮಾತ್ರವಲ್ಲ ಘಟಾನುಘಟಿ ವಕೀಲರನ್ನು ತಮ್ಮ ಕಾನೂನು ರಕ್ಷಣೆಗೆ ನೇಮಿಸಿಕೊಂಡಿದ್ದ ಇತರ ಸಹ ಆರೋಪಿಗಳೂ ಕೂಡ ಖುಲಾಸೆಗೊಂಡರು. ಹಾಗೆ ಹಣ ತೆತ್ತದ್ದು ನಷ್ಟ ಎಂದು ಎಂದಿಗೂ ನಾನು ಲೆಕ್ಕ ಹಾಕುವುದಿಲ್ಲ. ಅದರಿಂದ ಏನನ್ನೋ ಕಲಿತೆ ಎಂಬ ಕಾರಣಕ್ಕೆ ಮಾತ್ರವಲ್ಲ, ಬದಲಿಗೆ ಸೆಷನ್ಸ್ ಕೋರ್ಟ್ ಮುಂದೆ ಸಚ್ಚಿ ನಾಟಕೀಯ ರೀತಿಯಲ್ಲಿ ವಾದ ಮಂಡಿಸಿದ್ದರಿಂದಾಗಿ ಬಳಿಕ ಇತರೆ ಆರೋಪಿಗಳು ಸಹ ನಮ್ಮ ಕಕ್ಷೀದಾರರಾದರು. (ಈಗಲೂ ಅವರು ಹಾಗೆಯೇ ಮುಂದುವರೆದಿದ್ದಾರೆ).

ವಿಪರ್ಯಾಸ ಎಂದರೆ, ಅವರ ಚಲನಚಿತ್ರಗಳಲ್ಲಿ ನ್ಯಾಯಾಲಯದ ವಿವರಗಳು ಅಪರೂಪ ಎಂಬಂತಿವೆ. ಮನುಷ್ಯನ ಬದುಕಿನ ಮೇಲೆ ಕಾನೂನಿನ ಪ್ರಭಾವ ದಟ್ಟವಾಗಿದೆ ಎಂದು ಅರಿತಿದ್ದ ಸಚ್ಚಿ ಪ್ರೇಕ್ಷಕರಿಗೆ ತಮ್ಮ ಸಂಭಾಷಣೆ ಮತ್ತು ಕಥಾಹಂದರದ ಮೂಲಕ ಕೋರ್ಟಿನ ಕೆಲಸಗಳ ಬಗೆಗಿನ ಆಳ ಜ್ಞಾನವನ್ನು ಹರಡುತ್ತಿದ್ದರು. ಇದೆಲ್ಲವನ್ನೂ ಹಾಸ್ಯಾಸ್ಪದವಾಗದಂತೆ, ನಾಟಕೀಯ ಎನಿಸಿಕೊಳ್ಳದಂತೆ ವಾಸ್ತವ ರೀತಿಯಲ್ಲಿ ಚಿತ್ರಿಸುತ್ತಿದ್ದರು. ಕೋರ್ಟುಗಳನ್ನು ಎಂದಿಗೂ ಕಡೆಗಣ್ಣಿನಿಂದ ಚಿತ್ರಿಸಲಿಲ್ಲ. ಆದರೆ ಶಾಸಕಾಂಗ ಹಾಗೂ ನ್ಯಾಯಾಂಗದಿಂದ ರೂಪುಗೊಂಡ ನೀತಿನಿಯಮಗಳು ಹೇಗೆ ಜೀವನವನ್ನು ಪ್ರಭಾವಿಸಿವೆ ಎಂಬುದನ್ನು ಹೇಳಿದರು.

ಅವರಿಗೆ ಸಚ್ಚಿದಾನಂದನ್ ಎಂದು ಹೆಸರಿತ್ತಾದರೂ, ಎಲ್ಲರೂ ಸಚ್ಚಿ ಎಂದೇ ಕರೆಯುತ್ತಿದ್ದರು. ಸಚ್ಚಿ ಎಂಬ ಹೆಸರಿನಿಂದ ಕರೆಸಿಕೊಳ್ಳಲು ಅವರೂ ಇಷ್ಟಪಡುತ್ತಿದ್ದರು. ತಾವು ಬಯಸಿದಂತೆ ಆ ಹೆಸರಿನಿಂದಲೇ ಜನಪ್ರಿಯರಾದರು. ಕೆಲವೇ ಕೆಲವು ವಕೀಲ ಮಿತ್ರರನ್ನು ಹೊರತುಪಡಿಸಿದರೆ ನಾಮಫಲಕ ಹೇಳುವ ರೀತಿಯಲ್ಲಿ ಅವರು ಕೆ. ಆರ್ ಸಚ್ಚಿದಾನಂದನ್, ವಕೀಲ ಎಂಬ ಸಂಗತಿ ಹೆಚ್ಚಿನವರಿಗೆ ಗೊತ್ತಿಲ್ಲ. ಅದು ಗೊತ್ತಿದ್ದ ಅದೃಷ್ಟಶಾಲಿಗಳಲ್ಲಿ ನಾನೂ ಒಬ್ಬ. ಸಚ್ಚಿ ಚಿತ್ರಕರ್ಮಿಯಾಗಬೇಕು ಎಂದು ಬಯಸಿದ್ದರು ಮತ್ತು ಅದರ ಬಗ್ಗೆ ಅವರಿಗೆ ಭಾರಿ ಒಲವಿತ್ತು. ಸಿನಿಮಾ ರಂಗ ತರುವ ಐಷಾರಾಮ ಅವರನ್ನು ಆಕರ್ಷಿಸಲಿಲ್ಲ ಬದಲಿಗೆ ಕಲಾವಿದನೂ, ಹೃದಯದಲ್ಲಿ ಬಂಡಾಯಗಾರನೂ ಆಗಿ ಅವರು ಚಿತ್ರರಂಗ ಹೊಕ್ಕರು.

ಸಚ್ಚಿಯನ್ನು ನಾನು ಭೇಟಿಯಾದಾಗ, ಅವರು ಓಡಾಟಕ್ಕಾಗಿ ಸಾರ್ವಜನಿಕ ಸಾರಿಗೆ ಬಳಸುತ್ತಿದ್ದರು. ಅವರು ಚಲನಚಿತ್ರ ಲೋಕದ ಸುತ್ತ ಗಿರಕಿ ಹೊಡೆಯುತ್ತಿದ್ದಾರೆಂದು ತಿಳಿದಾಗ ನಾನು ನನ್ನ ಸ್ವಾರ್ಥಕ್ಕಾಗಿ ಅವರೊಂದು ಬೈಕ್ ಪಡೆಯಬೇಕೆಂದು ಮನವೊಲಿಸಿ ‘ಬಜಾಜ್ ಸಿಟಿ 100’ ತೆಗೆಸಿಕೊಟ್ಟೆ. ಇದರಿಂದ ನ್ಯಾಯಾಲಯದಲ್ಲಿ ಅವರ ಪ್ರಕರಣಗಳನ್ನು ನಿಭಾಯಿಸಲು ನಾನು ಸ್ವತಂತ್ರನಾದೆ. ಅವರಿಗೆ ಐಷಾರಾಮಿ ಸಂಗತಿಗಳ ಕಡೆ ಒಲವಿರಲಿಲ್ಲ. ಸದಾ ಯಾವುದೋ ತುಡಿತಕ್ಕಾಗಿ ಅಥವಾ ಗೆಳೆಯರಿಗಾಗಿ ಬದುಕುತ್ತಿದ್ದರು. ಆತನ ಹುಚ್ಚುಗಳನ್ನೆಲ್ಲಾ ಈಡೇರಿಸಬಲ್ಲ ಸ್ನೇಹಿತರನ್ನು ಪಡೆಯುವ ಜಾಣ್ಮೆ ಅವರಿಗಿತ್ತು. ದೆಹಲಿಯಲ್ಲಿ ವಕೀಲಿಕೆ ಮಾಡಬೇಕೆಂದು ನಾನು ಹೇಳಿಕೊಂಡಾಗ ಕಕ್ಷೀದಾರರೊಬ್ಬರನ್ನು ಹುಡುಕಿ ಕೂಲಂಕಷವಾಗಿ ಎಲ್ಲವನ್ನೂ ತಿಳಿಸಿ ನಾನು ದೆಹಲಿ ಕೋರ್ಟ್ ನಲ್ಲಿ ಪ್ರತ್ಯಕ್ಷವಾಗುವಂತೆ ನೋಡಿಕೊಂಡರು. ಇದು ಸಚ್ಚಿ ಸ್ಪರ್ಧಿಸಿ ಈ ಮೊದಲು ಗೆದ್ದಿದ್ದ ಪ್ರಕರಣವಾಗಿದ್ದು, ಇದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿ ರಾಷ್ಟ್ರೀಯ ಆಯೋಗದ ಎದುರು ಬಾಕಿ ಉಳಿದಿದೆ.

ಪೌಲ್ ಕೊಹೆಲೊನ ‘ದಿ ಆಲ್ಕೆಮಿಸ್ಟ್’ ಕಾದಂಬರಿಯ ಅಡಿಬರಹದಲ್ಲಿ ತಿಳಿಸಿರುವಂತೆ, “ನಿಮಗೆ ಏನಾದರೂ ಬೇಕು ಎಂದಾದರೆ ಅದನ್ನು ಸಾಧಿಸುವುದಕ್ಕಾಗಿ ಸಹಾಯ ಮಾಡಲು ಇಡೀ ಬ್ರಹ್ಮಾಂಡವೇ ಸಂಚು ರೂಪಿಸುತ್ತದೆ,” ವಕೀಲನಾಗಿ ಪ್ರಾಕ್ಟೀಸ್ ಮಾಡುವಾಗ ಮತ್ತು ಆಗಾಗ ನಾಟಕ ಮಾಡುತ್ತಿದ್ದ ಸಂದರ್ಭದಲ್ಲಿ ಪಂಚಪಾಂಡವರ್ (1999) ಎಂಬ ಚಿತ್ರಕ್ಕೆ ಕಥೆ ಬರೆದಿದ್ದ ತನ್ನ ಮನೆಯ ಮಾಲೀಕ ಸೇತುವಿಗೆ ಚಲನಚಿತ್ರ ಜಗತ್ತು ಗೊತ್ತಿದೆ ಎಂದು ಸಚ್ಚಿ ಅರಿತಿದ್ದರು. ಅದೃಷ್ಟ ಬಾಗಿಲು ಬಡಿದಿತ್ತು. ಸೃಜನಶೀಲತೆಗೆ ಮುಕ್ತತೆ ತಂದುಕೊಡುವ ವಿಚಾರದಲ್ಲಿ ಪೆನ್ನು- ಪೇಪರಿಗೆ ಅಂಟಿಕೊಂಡಿದ್ದ ಸಚ್ಚಿ ಅವರಿಗಿಂತ ಸೇತು ಅವರ ಸಾಮಾಜಿಕ ಕೌಶಲ ಚಲನಚಿತ್ರ ಜಗತ್ತಿಗೆ ಹೆಚ್ಚು ಒಪ್ಪುವಂತಿತ್ತು. ಕೆಲದಿನಗಳಲ್ಲೇ ಸಚ್ಚಿ -ಸೇತು ಜೋಡಿ ಒಂದರ ಹಿಂದೆ ಒಂದರಂತೆ ಯಶಸ್ವಿ ಸಿನಿಮಾಗಳನ್ನು ನೀಡಿತು. 2007ರಿಂದ 2011ರ ನಡುವೆ ಈ ಕತೆಗಾರ ಜೋಡಿ ಚಾಕೊಲೇಟ್ (2007), ರಾಬಿನ್ ಹುಡ್ (2009), ಸೀನಿಯರ್ಸ್ (2011) ಮತ್ತು ಡಬಲ್ಸ್ (2011) ನಂತಹ ಯಶಸ್ವಿ ಚಿತ್ರಗಳ ಸರದಾರನಾಯಿತು, ಮಾಲಿವುಡ್‌ ತಾರೆಗಳಾದ ಮಮ್ಮೂಟಿ, ಪೃಥ್ವಿರಾಜ್ ಮತ್ತು ಬಿಜು ಮೆನನ್ ಪರದೆಯ ಮೇಲೆ ಈ ಪಾತ್ರಗಳಿಗೆ ಜೀವ ತುಂಬಿದರು.

ಕಥೆಗಾರ

ಸಚ್ಚಿ ಕತೆ ಬರೆದ ಒಂದೇ ಒಂದು ಸಿನಿಮಾದಲ್ಲಿ ಮಾತ್ರ ತಮ್ಮ ಹಿಂದಿನ ಅವತಾರದಿಂದ ಏನನ್ನೂ ಎರವಲು ಪಡೆದಿರಲಿಲ್ಲ.

ಹುಡುಗಿಯರೇ ವ್ಯಾಸಂಗ ಮಾಡುವ ಕಾಲೇಜಿಗೆ ಹುಡುಗನೊಬ್ಬ ದಾಖಲಾತಿ ಪಡೆಯುವ ಘಟನೆಗಳ ಸುತ್ತ ಚಾಕೊಲೇಟ್ (2007) ಚಿತ್ರದ ಕಥೆ ಗಿರಕಿ ಹೊಡೆಯುತ್ತದೆ. ಆ ಹೊತ್ತಿಗೆ ಕೇರಳದ ವಿಶ್ವವಿದ್ಯಾಲಯವೊಂದು ನೀಡಿದ ಅಧಿಸೂಚನೆಯಿಂದ ಸ್ಫೂರ್ತಿ ಪಡೆದು ಈ ಕತೆ ಕಟ್ಟಲಾಗಿತ್ತು. ಕಾಲೇಜಿನಲ್ಲಿ ವಿದ್ಯಾರ್ಥಿಗಳ ಉಡುಪಿಗೆ ಸಂಬಂಧಿಸಿದ ಒಂದು ದೃಶ್ಯದಲ್ಲಿ, ಬಳಸಲಾದ ಭಾಷೆ ಸ್ಪಷ್ಟವಾಗಿ ಕಾನೂನು ಪರಿಭಾಷೆಯಾಗಿದೆ, ಇದು ಆ ಕ್ಷಣದ ನೈಜತೆಯನ್ನು ಎತ್ತಿ ತೋರಿಸುತ್ತದೆ.

‘ರನ್ ಬೇಬಿ ರನ್’ (2012) ಚಿತ್ರದಲ್ಲಿ, ವಕೀಲನೊಬ್ಬ ಕೇವಲ ವಕೀಲನಿನಾಗಿರುವುದಕ್ಕಿಂತಲೂ ಬಿಕ್ಕಟ್ಟು ಬಗೆಹರಿಸುವವನಾಗಿ ನಾಟಕೀಯತೆಯನ್ನು ನ್ಯಾಯಾಲಯದ ಆಚೆಗೆ ಕೊಂಡೊಯ್ಯುತ್ತಾನೆ. ರಾಮಲೀಲಾ (2017)ದಲ್ಲಿನ ವಕೀಲ ರಾಮಾನುನ್ನಿಯ ಪಾತ್ರ ತಾನು ಸಿಕ್ಕಿಹಾಕಿಕೊಂಡಿದ್ದ ಎಲ್ಲಾ ಕಾನೂನು ಸಮಸ್ಯೆಗಳನ್ನು ಒಂದೇ ಒಂದು ನ್ಯಾಯಾಲಯದ ದೃಶ್ಯವಿಲ್ಲದೆ ಪರಿಹರಿಸಿಕೊಳ್ಳುತ್ತದೆ, ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಉಲ್ಲೇಖಿಸುವುದರ ಹೊರತಾಗಿ, ಎವಿಡೆನ್ಸ್ ಕಾಯ್ದೆಯ ಸೆಕ್ಷನ್ 122ರ ಅಡಿಯಲ್ಲಿ ಬರುವ ವಿಶೇಷಾಧಿಕಾರದ ಸಂವಹನದ ಸಂಗತಿಯನ್ನು ಒಂದು ಪಾತ್ರದ ಮೂಲಕ ಪರಿಣಾಮಕಾರಿಯಾಗಿ ಹೇಳಲಾಗಿದೆ.

ಡ್ರೈವಿಂಗ್ ಲೈಸೆನ್ಸ್ (2019) ಚಿತ್ರದಲ್ಲಿ, ಮೋಟಾರು ವಾಹನ ಕಾಯ್ದೆಯ ಜಟಿಲತೆಗಳನ್ನು ಚಿತ್ರದುದ್ದಕ್ಕೂ ನೋಡಬಹುದು. ಬಹು ಜನಪ್ರಿಯತೆ ಗಳಿಸಿದ ‘ಅಯ್ಯಪ್ಪನುಂ ಕೋಶಿಯುಂ’ (2020) ಚಿತ್ರದಲ್ಲಿ ಸಚ್ಚಿಯವರ ಕ್ರಿಮಿನಲ್ ವಕೀಲಿಕೆಯ ಪ್ರತಿಭೆ ಮೆರೆದಿದೆ. ಅಲ್ಲಿ ಕ್ರಿಮಿನಲ್ ಕಾನೂನಿನ ಕಾರ್ಯವಿಧಾನ ಮತ್ತು ಕೇರಳ ಅಬಕಾರಿ ಕಾಯ್ದೆಯನ್ನು ಸುಂದರವಾಗಿ ಮತ್ತು ನೈಜವಾಗಿ ಕಟ್ಟಿಕೊಡಲಾಗಿದೆ. ಎರಡೂ ಚಿತ್ರಗಳಲ್ಲಿ ಪ್ರಭಾವಿ ಎದುರಾಳಿಗೆ ವಿರುದ್ಧವಾಗಿ ನಿಂತ ಸಾರ್ವಜನಿಕ ಸೇವಕರಿಗೆ (ಮೋಟಾರು ವಾಹನ ನಿರೀಕ್ಷಕ ಮತ್ತು ಸಬ್ ಇನ್ಸ್‌ಪೆಕ್ಟರ್) ಸಚ್ಚಿ ಕಾನೂನಿನ ಪರಿಣಾಮಕಾರಿ ಅಸ್ತ್ರಗಳನ್ನು ಒದಗಿಸುತ್ತಾರೆ. ಇದರೊಂದಿಗೆ ಕಾನೂನು ಹೇಗೆ ಬಲ ತುಂಬಬಲ್ಲದು ಎಂಬ ಸೂಕ್ಷ್ಮ ಸಂದೇಶವನ್ನು ಪ್ರೇಕ್ಷಕ ಪಡೆಯುತ್ತಾನೆ.

ನಿರ್ದೇಶಕ

ಸಚ್ಚಿ ಒಬ್ಬ ಹೆಮ್ಮೆ ಹುಟ್ಟಿಸುವಂಥ ವ್ಯಕ್ತಿಯಾಗಿದ್ದರು. ಮನುಷ್ಯನ ಅಹಂಕಾರದ ಬಗೆಯನ್ನು ವಿವರಿಸುವ ಅವರ ಚಿತ್ರಗಳು ಸಮಾಜದ ಮೇಲೆ ಶಾಶ್ವತ ಪರಿಣಾಮ ಬೀರುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಯಶ ಗಳಿಸುತ್ತಿದ್ದವು. ಸಚ್ಚಿ ನಿರ್ದೇಶಿಸಿದ ಮೊದಲ ಚಿತ್ರ ಅನಾರ್ಕಲಿ (2015), ಅಲ್ಲಿ ಮತ್ತೊಮ್ಮೆ ನಿರ್ಬಂಧಗಳಿಗೆ ಒಳಪಟ್ಟ ಪ್ರೇಮದ ಹಿನ್ನೆಲೆಯಲ್ಲಿ ನೌಕಾ ನ್ಯಾಯಾಧಿಕರಣವನ್ನು ತೂಗಿ ನೋಡಿದರು. ಅವರ ಎರಡನೆಯ ನಿರ್ದೇಶನ ಯಾನ ನಡೆದದ್ದು ಈ ವರ್ಷದ ‘ಅಯ್ಯಪ್ಪನುಂ ಕೊಶಿಯುಂ’ ಚಿತ್ರದ ಮೂಲಕ, ಅಲ್ಲಿ ಅವರು ತಮ್ಮ ವ್ಯಕ್ತಿತ್ವದ ಅಂಶಗಳನ್ನು ಅಯ್ಯಪ್ಪನ್ ಮತ್ತು ಕೋಶಿ ಇಬ್ಬರ ಮೂಲಕ ಚಿತ್ರಿಸಿದರು. ಸಚ್ಚಿಯನ್ನು ಬಲ್ಲವರಿಗೆ ಅವರು ಬೇರೊಬ್ಬರ ಘನತೆಯನ್ನು ಹೊಸಕಿ ಹಾಕುವವರಲ್ಲ ಬದಲಿಗೆ ದಯೆ ಮತ್ತು ಉದಾರ ಹೃದಯದ ವ್ಯಕ್ತಿ ಎಂದು ತಿಳಿಯುತ್ತದೆ. ಸರಳ ಮನುಷ್ಯನಾಗಿದ್ದ ಅವರು ಎಂದಿಗೂ ಹಣಕ್ಕೆ ಬೆಲೆ ಕಟ್ಟಲಿಲ್ಲ ಮತ್ತು ಲೌಕಿಕ ಲಾಭದ ವಿಚಾರವಾಗಿ ಸ್ನೇಹವನ್ನು ಅಳೆಯಲಿಲ್ಲ. ಬದಲಿಗೆ ಅವರು ಹಂಬಲಿಸಿದ್ದು ಯಶಸ್ಸು ಎಂಬ ವಸ್ತುವನ್ನು ಮಾತ್ರ.

ಸ್ವಾಭಿಮಾನ ಮತ್ತು ಧೈರ್ಯ ಅವರು ಎಂದಿಗೂ ರಾಜಿ ಮಾಡಿಕೊಳ್ಳದ ಎರಡು ವಿಷಯಗಳಾಗಿದ್ದವು. ಅವರು ನೀಡಿದ ಸಲಹೆಯಲ್ಲಿ ಎಲ್ಲಕ್ಕಿಂತ ಹೆಚ್ಚು ಎದ್ದು ಕಾಣುವುದೆಂದರೆ ಯಾವುದೇ ವಕೀಲರು ನ್ಯಾಯಾಲಯಗಳಲ್ಲಿ ಭಿಕ್ಷುಕರಾಗಬಾರದು ಎಂಬುದು. ‘ಅಯ್ಯಪ್ಪನುಂ ಕೋಶಿಯುಂ’ ಚಿತ್ರದ ಕೋಶಿ ಪಾತ್ರವು ಪೊಲೀಸ್ ಠಾಣೆಯಲ್ಲಿ ತನ್ನ ಚಾಲಕನಿಗೆ “ಕುಮಾರ, ಕೆಂಜಲ್ಲೆ, ಅಂಗೊಟ್ಟುಮಾರಿ ನಿಕ್ಕು”, (ಕುಮಾರ, ಗೋಗರೆಯಬೇಡ, ಪಕ್ಕಕ್ಕೆ ಸರಿ) ಎನ್ನುತ್ತದೆ- ಅದು ನಿಜ ಜೀವನದಲ್ಲಿ ಕೂಡ ಸಚ್ಚಿ ಅವರ ವಿಶಿಷ್ಟ ಸಂಭಾಷಣೆಯಾಗಿತ್ತು.

ಸಚ್ಚಿಯ ಅತ್ಯಂತ ಅದ್ಭುತ ಗುಣ ಎಂದರೆ ಸಂಶೋಧನೆಯಲ್ಲಿ ಅವರ ಪರಿಫೂರ್ಣತೆ ಮತ್ತು ಈ ಕಾರ್ಯದಲ್ಲಿ ಅವರು ಯಾವುದೇ ಕಲ್ಲನ್ನು ಕೆತ್ತದೆ ಬಿಡುತ್ತಿರಲಿಲ್ಲ ಎಂಬುದು. ಯಾವುದೇ ಸ್ಕ್ರಿಪ್ಟ್ ಆರಂಭಕ್ಕೂ ಮೊದಲು ಸಂಶೋಧನೆ ಪೂರ್ಣಗೊಳಿಸುವುದು ಅವರ ಅಭ್ಯಾಸವಾಗಿತ್ತು. ಸೂಕ್ತ ಸಮಯದೊಳಗೆ ಸಂಶೋಧನೆ ಮತ್ತು ಅಭಿಪ್ರಾಯಗಳು ದೊರೆಯದಿದ್ದಾಗ ಅವರ ಅಸಮಾಧಾನ ಎದ್ದು ಕಾಣುತ್ತಿತ್ತು. ಆದರೆ ಭಿನ್ನಾಭಿಪ್ರಾಯಗಳನ್ನು ಸ್ವಾಗತಿಸುವ ಗುಣ ಅವರಲ್ಲಿತ್ತು. ಸ್ಕ್ರಿಪ್ಟನ್ನು ತಾರ್ಕಿಕ ಮತ್ತು ಅರ್ಥಪೂರ್ಣ ಹಂತಕ್ಕೆ ಕೊಂಡೊಯ್ಯಲು ನಾನು ಮಾತ್ರವಲ್ಲದೆ ಅನೇಕ ಗೆಳೆಯರ ಪಟ್ಟಿಯೇ ಇರುತ್ತಿತ್ತು. ಸಂಪೂರ್ಣವಾಗಿ ಚಲನಚಿತ್ರಗಳಲ್ಲಿ ತೊಡಗಿಕೊಂಡ ನಂತರ, ಕಾನೂನು ಲೋಕದ ಬೆಳವಣಿಗೆಗಳ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಅವರಿಗೆ ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಆಗಾಗ ನನಗೆ ಫೋನ್ ಮಾಡುವುದು ಅವರಿಗೆ ಅಭ್ಯಾಸವಾಗಿತ್ತು. ಜೀವನದಲ್ಲಿ ಅವರಿಗಿಂತ ಚಿಕ್ಕವನಾದ ನಾನು ಇದನ್ನು ಹೇಳಿಕೊಳ್ಳುವುದು ಖುಷಿಯ ಮತ್ತು ಹೆಮ್ಮೆಯ ಸಂಗತಿ ಎನಿಸುತ್ತದೆ. ಯಾವುದೋ ಸ್ಕ್ರಿಪ್ಟ್ ನಲ್ಲಿ ದೊಡ್ಡ ತೊಂದರೆ ಉಂಟಾಗಿ ಅದನ್ನು ಬಗೆಹರಿಸಿಕೊಳ್ಳಲು ನನಗೆ ಫೋನಾಯಿಸಬಹುದು ಎಂದು ಅವರ ಕರೆಗಾಗಿ ಕಾಯುತ್ತಿರುತ್ತೇನೆ. ಸಂಶೋಧನೆಗಾಗಿ ಜನರ ಕೊರತೆ ಇಲ್ಲದಿದ್ದಾಗ ಕೂಡ ಅದಕ್ಕಾಗಿ ನನ್ನನ್ನೇ ಆಯ್ದುಕೊಳ್ಳುತ್ತಿದ್ದರು. ಆ ಮೂಲಕ ನನ್ನ ಕಲ್ಪನೆಗೆ ನೀರೆರೆಯುತ್ತಿದ್ದರು. ಜೊತೆಗೆ ಎಲ್ಲಾ ಕ್ರಿಮಿನಲ್ ವಕೀಲರಿಗಿಂತಲೂ ಉತ್ತಮನಾದವನೆಂದು ಮನ್ನಣೆ ನೀಡಿದ್ದರು.

ನಿಮಗೆ, ನನಗೆ ಹಾಗೂ ಯಾರಿಗೇ ಆದರೂ ಸಚ್ಚಿ ಹಾಗಿದ್ದರು. ತಮ್ಮ ಪುಟ್ಟ ಹೆಸರಿನಂತೆಯೇ ಅವರದು ಇದ್ದಕ್ಕಿದ್ದಂತೆ ಮೊಟಕುಗೊಂಡ ಪರಿಪೂರ್ಣ ಬದುಕಾಗಿತ್ತು. ನಮಗೆ ಅವರು ವಿದಾಯ ಹೇಳಿದ್ದರೂ, ನಮ್ಮ ಜೀವನಕ್ಕಾಗುವಷ್ಟು ‘ಆನಂದ’ವನ್ನು ಉಳಿಸಿಹೋಗಿದ್ದಾರೆ.

(ಲೇಖಕರು ಸುಪ್ರೀಂಕೋರ್ಟ್ ಮತ್ತು ಕೇರಳದ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿರುವ ವಕೀಲ)

Kannada Bar & Bench
kannada.barandbench.com